ವಿಧಾನಸಭೆ ಚುನಾವಣೆಗಾಗಿ 5,351.49 ಕೋಟಿ ಪೂರಕ ಅಂದಾಜು ಮಂಡನೆ

Update: 2018-02-21 12:39 GMT

ಬೆಂಗಳೂರು, ಫೆ.21: ಮುಂಬರುವ ವಿಧಾನಸಭೆ ಚುನಾವಣೆಗಾಗಿ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಗೆ 11.45ಕೋಟಿ ರೂ.ಅನುದಾನ ಸೇರಿದಂತೆ ಒಟ್ಟು 5,351.49 ಕೋಟಿ ರೂ.ಗಳ 2017-18ನೆ ಸಾಲಿನ(ಮೂರನೇ ಹಾಗೂ ಅಂತಿಮ ಕಂತು) ಪೂರಕ ಅಂದಾಜುಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಬುಧವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್, 29 ಇಲಾಖೆಗಳ ಪೂರಕ ಅಂದಾಜುಗಳನ್ನು ಮಂಡಿಸಿದರು.

ಇದರಲ್ಲಿ ವಿಧಾನಸಭೆ ಚುನಾವಣೆಯ ಪ್ರಯಾಣ ಭರಿಸಲು ಪೊಲೀಸ್ ಇಲಾಖೆಗೆ 2 ಕೋಟಿ ರೂ., ಜಿಲ್ಲಾ ಪೊಲೀಸ್ ಘಟಕ ಸಾಮಾನ್ಯ ವೆಚ್ಚಕ್ಕೆ 5 ಕೋಟಿ ರೂ., ನಿವೃತ್ತ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ಯೋಜನೆಗೆ 10 ಕೋಟಿ ರೂ., ಜಿಲ್ಲಾ ಪೊಲೀಸ್ ಘಟಕದ ಪೂರಕ ವೆಚ್ಚಕ್ಕೆ 4 ಕೋಟಿ ರೂ.ಸೇರಿದಂತೆ ಪೊಲೀಸ್ ಇಲಾಖೆಗೆ ಒಟ್ಟು 16.45 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಉಚಿತ ಬಸ್‌ಪಾಸ್‌ಗೆ 22.72 ಕೋಟಿ ರೂ., ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಬಸ್‌ಪಾಸ್‌ಗೆ 11.16 ಕೋಟಿ ರೂ.ವನ್ನು ನೀಡಲಾಗಿದೆ.

ಸಹಕಾರಿ ಸಂಘಗಳ ಮೂಲಕ ರೈತರು ಪಡೆದಿರುವ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿರುವ ಸರಕಾರವು ಅದರ ಬಾಪ್ತು 409 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಪ್ರಸ್ತಾಪಿಸಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ 60 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲಾಗಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಭಗವಾನ್ ಬಾಹುಬಲಿಯ 88ನೆ ಮಹಾಮಸ್ತಕಾಭಿಷೇಕಕ್ಕೆ 15 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ದಸರಾ ಉತ್ಸವದ ಬಾಕಿ ಬಿಲ್‌ಗಳ ಪಾವತಿಗೆ 10.50 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News