ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ವಿಚಾರ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಟಿ.ಬಿ.ಜಯಚಂದ್ರ

Update: 2018-02-21 12:43 GMT

ಬೆಂಗಳೂರು, ಫೆ.21: ಖಾಸಗಿ ವಲಯದ ಉದ್ದಿಮೆಗಳಲ್ಲಿ ಸಿ ಮತ್ತು ಡಿ ವೃಂದದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಒದಗಿಸಲು ಪ್ರಸ್ತುತ ಸಾಲಿನ ಆಯವ್ಯಯ ಭಾಷಣದ ಘೋಷಣೆಯಂತೆ ಮುಂದಿನ 2-3 ಸಚಿವ ಸಂಪುಟ ಸಭೆಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ಬುಧವಾರ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಶ್ನೋತ್ತರ ವೇಳೆಯಲ್ಲಿ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಗೆ ಅನುಗುಣವಾಗಿ ಖಾಸಗಿ ವಲಯದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಒದಗಿಸಲಾಗುವುದು ಎಂದು ಆಯವ್ಯಯ ಭಾಷಣದಲ್ಲಿ ಘೋಷಿಸಲಾಗಿದೆ. ಆದರೆ, ಸರಕಾರ ಯಾವಾಗ ಘೋಷಣೆಯನ್ನು ಅನುಷ್ಠಾನಕ್ಕೆ ತರುತ್ತದೆ ಎಂದು ಪ್ರಶ್ನಿಸಿದರು.

ಕಾರ್ಮಿಕರ ಸಚಿವ ಸಂತೋಷ್ ಲಾಡ್ ಪರವಾಗಿ ಉತ್ತರಿಸಿದ ಸಚಿವ ಜಯಚಂದ್ರ, ಖಾಸಗಿ ವಲಯದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಒದಗಿಸುವ ವಿಚಾರವಾಗಿ ಈಗಾಗಲೇ ಕಾನೂನು ಇಲಾಖೆ ಹಾಗೂ ಅಡ್ವೋಕೇಟ್ ಜನರಲ್ ಅವರೊಂದಿಗೆ ಚರ್ಚಿಸಲಾಗಿದ್ದು, 2-3 ಸಚಿವ ಸಂಪುಟ ಸಭೆಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಖಾಸಗಿ ವಲಯದ ಉದ್ದಿಮೆಗಳಲ್ಲಿ ಸಿ ಮತ್ತು ಡಿ ವೃಂದದ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ.100ರಷ್ಟು ಉದ್ಯೋಗ ಒದಗಿಸುವುದರ ಬಗ್ಗೆ ಅಡ್ವೋಕೇಟ್ ಜನರಲ್ ಅವರು ಕಷ್ಟಸಾಧ್ಯ ಎಂಬ ಮಾತುಗಳನ್ನು ಆಡಿದ್ದರೂ ಕರ್ನಾಟಕ ಇಂಡಸ್ಟ್ರಿಯಲ್ ಎಂಪ್ಲಾಯಿಮೆಂಟ್ ರೂಲ್ಸ್-1961ಕ್ಕೆ ತಿದ್ದುಪಡಿಯಾಗಲಿ, ಸೇರ್ಪಡೆಯಾಗಲಿ ಮಾಡುವ ಬಗ್ಗೆ ಪರಿಶೀಲಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ಖಾಸಗಿ ವಲಯದ ಉದ್ದಿಮೆಗಳಲ್ಲಿ ಸಿ ಮತ್ತು ಡಿ ವೃಂದದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆಯನ್ನು ನೀಡುವಾಗ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಿ ಎಂದು ಸಚಿವರಲ್ಲಿ ಮನವಿ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News