ಪಶ್ಚಿಮವಾಹಿನಿಯ ಯೋಜನೆಯಡಿ ನೀರು ಸಂಗ್ರಹಿಸಲು 1394 ಕೋಟಿ ವೆಚ್ಚದ ಯೋಜನೆ ಸಿದ್ಧ: ಟಿ.ಬಿ.ಜಯಚಂದ್ರ

Update: 2018-02-21 12:45 GMT

ಬೆಂಗಳೂರು, ಫೆ.21: ಪಶ್ಚಿಮವಾಹಿನಿಯ ಯೋಜನೆಯಡಿ ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನೀರು ಸಂಗ್ರಹಿಸುವ ಸಲುವಾಗಿ 1394 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಈ ಯೋಜನೆ ಪೂರ್ಣಗೊಂಡಲ್ಲಿ ಮೂರು ಜಿಲ್ಲೆಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.

ಬುಧವಾರ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಐವನ್ ಡಿ ಸೋಜ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸ್ತುತ ಸಾಲಿನಲ್ಲಿ ಯೋಜನೆಯ ಅನುಷ್ಠಾನಕ್ಕಾಗಿ 200 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 53 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ಮೊದಲ ಹಂತದಲ್ಲಿ 200 ಕೋಟಿ ರೂ., ಎರಡನೇ ಹಂತದಲ್ಲಿ 644 ಕೋಟಿ ರೂ. ಮತ್ತು ಮೂರನೇ ಹಂತದಲ್ಲಿ 580 ಕೋಟಿ ರೂ.ಗಳನ್ನು ಯೋಜನೆಯಡಿ ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6, ಉಡುಪಿ ಜಿಲ್ಲೆಯಲ್ಲಿ 11 ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಮುಖ್ಯ ನದಿಗಳು ಪಶ್ಚಿಮಾಭಿಮುಖವಾಗಿ ಹರಿಯುತ್ತಿವೆ. 53 ಕಾಮಗಾರಿಗಳಿಂದಾಗಿ ಒಟ್ಟು 845 ಎಂಸಿಎಫ್‌ಟಿ ನೀರನ್ನು ಸಂಗ್ರಹಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಮಾರ್ಚ್ ಮೊದಲ ವಾರದಿಂದ ಕಾಮಗಾರಿಗಳು ಆರಂಭವಾಗಲಿವೆ. ಕುಡಿಯುವ ನೀರು ಮತ್ತು ವ್ಯವಸಾಯಕ್ಕೆ ಬಳಸುವ ನೀರನ್ನು ಆದ್ಯತೆ ಅನುಸಾರವಾಗಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಕಿಂಡಿ ಅಣೆಕಟ್ಟುಗಳ ದುರಸ್ತಿಗಾಗಿ ಕ್ರಮ ಕೈಗೊಳ್ಳಲಾಗುವುದು. ಅಣೆಕಟ್ಟುಗಳಲ್ಲಿ ಹಲಗೆ ಹಾಕಲಾಗುತ್ತಿತ್ತು. ಇದು ಎರಡು ಅಥವಾ ಮೂರು ವರ್ಷಗಳಷ್ಟೆ ಬಾಳಕೆ ಬರುತ್ತಿದ್ದರಿಂದ ಈಗ ಫೈಬರ್ ಹಲಗೆಗಳನ್ನು ಹಾಕುವ ಚಿಂತನೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News