ಕಲ್ಕೆರೆ ನಾರಾಯಣಸ್ವಾಮಿಯನ್ನು ಶೀಘ್ರ ಬಂಧಿಸಲಾಗುವುದು: ರಾಮಲಿಂಗಾರೆಡ್ಡಿ

Update: 2018-02-21 13:05 GMT

ಬೆಂಗಳೂರು, ಫೆ.21: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ಕಚೇರಿಯಲ್ಲಿ ಪೆಟ್ರೋಲ್ ಎರಚಿ ಬೆಂಕಿ ಹಚ್ಚುವುದಾಗಿ ಕಂದಾಯ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಲಮಂಡಳಿಯ ನಾಮ ನಿರ್ದೇಶಿತ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಕಲ್ಕೆರೆ ನಾರಾಯಣಸ್ವಾಮಿಯನ್ನು ಶೀಘ್ರವೇ ಬಂಧಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡುವುದಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

ಬುಧವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ವಿಷಯವನ್ನು ಪ್ರಸ್ತಾಪಿಸಿ, ನ್ಯಾಯಾಲಯದಲ್ಲಿ ವ್ಯಾಜ್ಯವಿರುವ ನಿವೇಶನದ ಖಾತೆ ಮಾಡಿಕೊಡಲು ನಿರಾಕರಿಸಿದ ಕಂದಾಯ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ. ಕಂದಾಯ ಇಲಾಖೆ ದಾಖಲೆಗಳನ್ನು ಸುಡಲು ಮುಂದಾಗಿದ್ದು ಕ್ರಿಮಿನಲ್ ಅಪರಾಧವಾಗಿದೆ ಎಂದರು.

ಸರಕಾರಿ ಕಚೇರಿಗೆ ನುಗ್ಗಿ ಬೆಂಕಿ ಹಚ್ಚಲು ಪ್ರಯತ್ನಪಟ್ಟಿದ್ದೇಕೆ? ಎಂಬುದು ಗೊತ್ತಾಗಬೇಕು. ಈ ಕೂಡಲೆ ಆತನನ್ನು ಬಂಧಿಸಿ ಜೈಲಿಗೆ ಅಟ್ಟಬೇಕು. ಪೊಲೀಸರಿಗೆ ಕರ್ತವ್ಯ ನಿರ್ವಹಿಸಲು ಸ್ವಾತಂತ್ರ ನೀಡಿ, ಅಧಿಕಾರಿಗಳು ದೂರು ನೀಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.

ಈ ಸರಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ದಿನಕ್ಕೊಂದು ವಿಷಯಗಳನ್ನು ನಾವು ಸದನದಲ್ಲಿ ಪ್ರಸ್ತಾಪಿಸುವ ಸ್ಥಿತಿ ಬಂದಿದೆ. ನಿನ್ನೆ ಶಾಸಕ ಎನ್.ಎ.ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್‌ನ ಗೂಂಡಾಗಿರಿಯನ್ನು ಪ್ರಸ್ತಾಪಿಸಿದ್ದೆವು. ಇಂದು ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿಯ ಗೂಂಡಾಗಿರಿ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಇದಕ್ಕೆ ಉತ್ತರಿಸಿದ ರಾಮಲಿಂಗಾರೆಡ್ಡಿ, ಫೆ.16ರಂದು ಈ ಘಟನೆ ನಡೆದಿದೆ. ಆದರೆ, ಸಹಾಯಕ ಕಂದಾಯ ಅಧಿಕಾರಿಗಳು ಈ ಬಗ್ಗೆ ಮೇಲಾಧಿಕಾರಿಗಳಿಗೆ, ಪೊಲೀಸರಿಗೆ ಅಥವಾ ಬಿಬಿಎಂಪಿ ಆಯುಕ್ತರಿಗೆ ದೂರು ನೀಡಬೇಕಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧವು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ, ಈ ಹಿಂದೆ ಸರಕಾರಿ ಅಧಿಕಾರಿಗಳಾದ ರಶ್ಮಿ ಮಹೇಶ್, ಶಿಖಾ, ಅನುಪಮಾ ಶೆಣೈ ದೂರು ನೀಡಿದಾಗ ಅವರ ಸ್ಥಿತಿ ಏನಾಯಿತು ಎಂಬುದು ನಮ್ಮ ಕಣ್ಣ ಮುಂದೆಯೇ ಇದೆ. ಹೀಗಿರುವಾಗ ಯಾವ ಅಧಿಕಾರಿಗಳು ದೂರು ನೀಡಲು ಮುಂದೆ ಬರುತ್ತಾರೆ ಎಂದು ಟೀಕಿಸಿದರು.

ಬಿಜೆಪಿ ಸದಸ್ಯ ಎಸ್.ಸುರೇಶ್‌ಕುಮಾರ್ ಮಾತನಾಡಿ, ಯಾವುದೇ ಕಾರಣಕ್ಕೂ ನಾರಾಯಣಸ್ವಾಮಿಯಂತಹವರನ್ನು ಸಮರ್ಥಿಸಿಕೊಳ್ಳಲು ಹೋಗಬೇಡಿ. ಕಾಂಗ್ರೆಸ್ ಪಕ್ಷವಾಗಿರಲಿ ಅಥವಾ ಯಾವುದೇ ಪಕ್ಷದ ಕಾರ್ಯಕರ್ತರಿರಲಿ, ಅವರಿಗೆ ಸರಕಾರ, ಪೊಲೀಸ್, ಕಾನೂನಿನ ಭಯ ಇರಬೇಕು. ಬೆಂಗಳೂರಿನಲ್ಲೆ ಇಂತಹ ಪರಿಸ್ಥಿತಿ ಇರಬೇಕಾದರೆ, ಯಾವುದೋ ದೂರದ ಜಿಲ್ಲೆ, ತಾಲೂಕಿನ ಪರಿಸ್ಥಿತಿ ಏನು. ಆಡಳಿತ ಪಕ್ಷವು ತನ್ನ ಕಾರ್ಯಕರ್ತರನ್ನು ಹಿಡಿತದಲ್ಲಿಟ್ಟುಕೊಳ್ಳಲು ವಿಫಲವಾಗಿದೆ ಎಂದು ಅವರು ದೂರಿದರು.

ನಂತರ ಮಾತು ಮುಂದುವರೆಸಿದ ರಾಮಲಿಂಗಾರೆಡ್ಡಿ, ನಾರಾಯಣಸ್ವಾಮಿಯನ್ನು ಬಂಧಿಸುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗುವುದು. ಈ ಹಿಂದೆ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಆದರೆ, ಈಗ ಆ ಸ್ಥಾನದಲ್ಲಿ ಮುನೇಗೌಡ ಎಂಬವರು ಇದ್ದಾರೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದವರಿಗೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಸಹಾಯಕ ಕಂದಾಯ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ರಾಮಲಿಂಗಾರೆಡ್ಡಿ ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರಾದ ಸುರೇಶ್‌ಕುಮಾರ್, ನಾರಾಯಣಸ್ವಾಮಿ ಹಾಗೂ ಕೆ.ಜಿ.ಬೋಪಯ್ಯ, ಅಧಿಕಾರಿಗಳಿಗೆ ರಕ್ಷಣೆ ನೀಡಿ ಅವರಲ್ಲಿ ನೈತಿಕಸ್ಥೈರ್ಯವನ್ನು ತುಂಬಿ, ಅವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಅಧೀರರನ್ನಾಗಿಸಬೇಡಿ ಎಂದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ರಾಮಲಿಂಗಾರೆಡ್ಡಿ, ಅಧಿಕಾರಿಯನ್ನು ಅಮಾನತ್ತು ಮಾಡುವುದು ಬೇಡ ಎನ್ನುವುದಾದರೆ ನನ್ನದೇನು ಅಭ್ಯಂತರವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News