ಭಾರತೀಯ ವಾಯುಪಡೆಗೆ ಸರಸ್ ವಿಮಾನ ಸೇರ್ಪಡೆ: 2 ನೇ ಪ್ರಾಯೋಗಿಕ ಹಾರಾಟ ಯಶಸ್ವಿ

Update: 2018-02-21 15:12 GMT

ಬೆಂಗಳೂರು, ಫೆ.21: ಭಾರತೀಯ ವಾಯುಪಡೆಯ ವಿಮಾನ ಮತ್ತು ವ್ಯವಸ್ಥೆ ಪರೀಕ್ಷಾ ವಿಭಾಗದ ವಿಂಗ್ ಕಮಾಂಡರ್ ಯು.ಪಿ.ಸಿಂಗ್ ನಾಯಕತ್ವದಲ್ಲಿ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ‘ಭಾರತದ ದೇಶೀಯ ಲಘು ಸಾರಿಗೆ ವಿಮಾನ ಸರಸ್’ ಅನ್ನು ಆಗಸಕ್ಕೆ ಎರಡನೆ ಯಶಸ್ವಿ ಪರೀಕ್ಷಾರ್ಥ ವಿಮಾನ ಹಾರಾಟ ನಡೆಸಲಾಯಿತು.

2009ರಲ್ಲಿ ನಡೆದ ಪರೀಕ್ಷಾ ಹಾರಾಟ ಸಂಧರ್ಭ ಸಂಭವಿಸಿದ ಅವಘಡದ ಬಳಿಕ ಹಿಂದಿನ ಸರಕಾರ ಈ ಯೋಜನೆಯನ್ನು ಮೂಲೆಗುಂಪು ಮಾಡಿತ್ತು. ನಾಗರಿಕ ವಾಯುಯಾನದ ಡೈರೆಕ್ಟರ್ ಜನರಲ್, ಡಿಜಿಸಿಎ ವಿಮಾನವನ್ನು ವಿನ್ಯಾಸ ದೋಷ ಅಥವಾ ಕಳಪೆ ಗುಣಮಟ್ಟದ ಆರೋಪದಿಂದ ವಿಮೋಚನೆ ಮಾಡಿದ್ದರೂ ಯೋಜನೆಯನ್ನು ಪುನರಾರಂಭ ಮಾಡಲು ಪ್ರಯತ್ನಗಳನ್ನು ಮಾಡಲಿಲ್ಲ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್ ಹೇಳಿದರು.

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶೀಯ ಯೋಜನೆಯನ್ನು ಪುನಶ್ಚೇತನಗೊಳಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಈಗಿನ ಸರಕಾರಕ್ಕೆ ಸೇರುತ್ತದೆ ಎಂದರು. ಈ ಯೋಜನೆಯನ್ನು ಹಾಲಿ ಸರಕಾರ ಪುನಶ್ಚೇತನಗೊಳಿಸಿದ ಬಳಿಕ, ಎನ್‌ಎಎಲ್ ವಿನ್ಯಾಸ ಸುಧಾರಣೆಗಳನ್ನು ಅಳವಡಿಸಿಕೊಂಡಿತು ಮತ್ತು ಸರಸ್ ಪಿ.ಟಿ 1 ಮಾದರಿ ಯಲ್ಲಿ ಸುಧಾರಣೆಗಳನ್ನು ಮಾಡಿತು. 1200 ಎಸ್‌ಎಚ್‌ಪಿ ಇಂಜಿನುಗಳನ್ನು ಮತ್ತು 104 ಇಂಚು ವ್ಯಾಸದ ಪ್ರೊಪೆಲ್ಲರ್ ಅಳವಡಿಕೆಗಳನ್ನು ಎರಡನೇ ಹಂತದ ಮೇಲ್ಮುಖ ಹಾರಾಟ ಅಗತ್ಯಗಳ ಪೂರೈಕೆಗಾಗಿ ಮಾಡಿಕೊಂಡಿತು ಎಂದು ಅವರು ಹೇಳಿದರು.

ವಿಮಾನ ಹಾರಾಟ ನಿಯಂತ್ರಣ ವ್ಯವಸ್ಥೆಯನ್ನು ಸುಧಾರಿಸಿತು, ಮುಖ್ಯ ಗಾಲಿಗಳು, ಬ್ರೇಕ್‌ಗಳನ್ನು 7, 100 ಕಿ.ಗ್ರಾಂ ಎ.ಯು.ವಿಗೆ ಅನುಗುಣವಾಗಿ ಸುಧಾರಿಸಲಾಯಿತು ಮತ್ತು ದೇಶೀಯವಾಗಿ ಅಭಿವೃದ್ಧಿ ಮಾಡಲಾದ ಇಂಜಿನಿನ ವೇಗ ನಷ್ಟದ ಮುನ್ಸೂಚನೆ ನೀಡುವ ವ್ಯವಸ್ಥೆ ಇತ್ಯಾದಿಗಳನ್ನು ಇದರಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಸಿಎಸ್‌ಐಆರ್-ಎನ್‌ಎಎಲ್ ಗಳು ಸರಸ್ ಎಂ.ಕೆ.2 ಆವೃತ್ತಿಯನ್ನು ಮೊದಲಿಗೆ ಸೇನೆ ಉದ್ದೇಶಕ್ಕೆ ಪ್ರಮಾಣೀಕರಿಕೊಳ್ಳಲು ಮತ್ತು ಆ ಬಳಿಕ ನಾಗರಿಕ ಆವೃತ್ತಿ ತರಲು ಉದ್ದೇಶಿಸಿದ್ದವು. ಸರಸ್ ಆಮದು ಮಾಡಲ್ಪಡುವ ಅದೇ ಶ್ರೇಣಿಯ ಯಾವುದೇ ವಿಮಾನಗಳಿಗಿಂತ ಶೇ.20-25 ಮಿತವ್ಯಯಕಾರಿ. ಸುಧಾರಿತ ಆವೃತ್ತಿಯು 14 ಸೀಟರುಗಳಿಗೆ ಬದಲು 19 ಸೀಟರುಗಳದ್ದಾಗಿರುತ್ತದೆ ಎಂದು ಅವರು ಹೇಳಿದರು.

ಶೇ.70ರಷ್ಟು ದೇಶೀಯ ನಿರ್ಮಿತ ವಿಮಾನದ ಬೆಲೆ ಸುಮಾರು 40-45 ಕೋಟಿ ರೂ.ಗಳಾಗುತ್ತವೆ, ಅದೇ ಆಮದಿತ ವಿಮಾನಗಳಿಗಾದರೆ 60-70 ಕೋ.ರೂ. ಗಳಷ್ಟಾಗುತ್ತದೆ. ಮತ್ತು ದೇಶೀಯ ತಯಾರಿಕೆಯ ವಿಮಾನದಲ್ಲಿ ಆಮದಿತ ವಿಮಾನಗಳಿಗಿಂತ ಹೆಚ್ಚಿನ ಲಾಭಗಳಿವೆ ಎಂದು ಹರ್ಷವರ್ಧನ್ ತಿಳಿಸಿದರು.

ಎಚ್‌ಎಎಲ್ ಅನ್ನು ಸರಸ್‌ನ ಮಿಲಿಟರಿ ಆವೃತ್ತಿಯ ಉತ್ಪಾದನಾ ಏಜೆನ್ಸಿಯಾಗಿ ಗುರುತಿಸಲಾಗಿದೆ. ನಾಗರಿಕ ವಾಯುಯಾನದ ಆವೃತ್ತಿಯ ತಯಾರಿಕೆಯನ್ನು ಖಾಸಗಿ ಉದ್ಯಮಗಳಿಗೆ ನೀಡಲಾಗುವುದು. ಭಾರತಕ್ಕೆ ಈ ಮಾದರಿಯಲ್ಲಿ ನಾಗರಿಕ ಹಾಗು ಮಿಲಿಟರಿ ಆವೃತ್ತಿಯ 120-160 ವಿಮಾನಗಳು ಅಗತ್ಯವಿದೆ ಎಂದು ಅವರು ಹೇಳಿದರು.

ಸರಸ್ ಎಂ.ಕೆ. 2 ಭಾರತ ಸರಕಾರದ ಉಡಾನ್ ಯೋಜನೆಯಡಿ ಪ್ರಯಾಣಿಕ ಸಾರಿಗೆಗೆ ಉತ್ತಮವಾಗಿದೆ. ಏರ್‌ಟ್ಯಾಕ್ಸಿ, ವೈಮಾನಿಕ ಶೋಧ, ಕಾರ್ಯನಿರ್ವಾಹಕ ಅಧಿಕಾರಿಗಳ ಪ್ರಯಾಣ, ವಿಪತ್ತು ನಿರ್ವಹಣೆ, ಗಡಿ ಕಾವಲು, ಕರಾವಳಿ ತಟ ರಕ್ಷಣೆ, ತುರ್ತು ವಾಹನ ಸಹಿತ ಇತರ ಸಾಮುದಾಯಿಕ ಸೇವೆಗಳಿಗೆ ಇದು ಅನುಕೂಲಕರವಾಗಿದೆ ಎಂದು ಹರ್ಷವರ್ಧನ್ ಹೇಳಿದರು.

ಭಾರತ ತನ್ನ ಲಘು ಸಾರಿಗೆ ವಿಮಾನ ಯೋಜನೆ ಆರಂಭ ಮಾಡಿದ ಬಳಿಕ ರಶ್ಯಾ, ಚೀನಾ, ಇಂಡೋನೇಶಿಯಾ, ಅಮೆರಿಕಾ ಮತ್ತು ಪೋಲಾಂಡ್‌ಗಳು ಮುಂದಿನ ತಲೆಮಾರಿನ 19 ಸೀಟುಗಳ ಸಾಮರ್ಥ್ಯದ ವಿಮಾನಗಳ ಅಭಿವೃದ್ಧಿಗೆ ಹೊಸ ಕಾರ್ಯಕ್ರಮಗಳನ್ನು ಹಾಕಿಕೊಂಡಿವೆ ಎಂದು ಅವರು ಹೇಳಿದರು.

ಮೇಲ್ದರ್ಜೆಗೇರಿಸಿದ ಸರಸ್ ಎಂ.ಕೆ 2 ಆವೃತ್ತಿ ಹೆಚ್ಚಿನ ವೇಗದೊಂದಿಗೆ ಕಡಿಮೆ ಭಾರದ, ಕಡಿಮೆ ಇಂಧನ ಬಳಕೆಯ, ಕಡಿಮೆ ಅಂತರದಲ್ಲಿ ಇಳಿಯುವ ಮತ್ತು ಆಗಸಕ್ಕೇರುವ, ಕ್ಯಾಬಿನ್ ಶಬ್ದ ಕಡಿಮೆ ಇರುವ, ಹೆಚ್ಚಿನ ಮತ್ತು ಭಾರೀ ಉಷ್ಣಾಂಶ ಇರುವ ವಿಮಾನ ನಿಲ್ದಾಣಗಳಿಂದ ಕಾರ್ಯಾಚರಿಸುವ, ಕಡಿಮೆ ಖರ್ಚಿನಲ್ಲಿ ಖರೀದಿಸಬಹುದಾದ ಹಾಗು ಕಾರ್ಯಾಚರಿಸಬಹುದಾದ ವಿಮಾನವಾಗಿದೆ ಎಂದು ಹರ್ಷವರ್ಧನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಿಎಸ್‌ಐಆರ್ ಮಹಾನಿರ್ದೇಶಕ ಡಾ.ಗಿರೀಶ್ ಸೈನಿ, ಸಿಎಸ್‌ಐಆರ್-ಎನ್‌ಎಎಲ್ ನಿರ್ದೇಶಕ ಜಿತೇಂದ್ರ ಜೆ.ಜಾಧವ್, ಏರ್‌ವೈಸ್ ಮಾರ್ಷೆಲ್ ಸಂದೀಪ ಸಿಂಗ್, ಎಎಸ್‌ಟಿಇ ಕಮಾಂಡೆಂಟ್, ಏರ್ ಮಾರ್ಷೆಲ್ ಉಪಕರ್ಜಿತ್ ಸಿಂಗ್ ಮತ್ತು ಎವಿಎಂ ಜೆ.ಚಲಪತಿ, ಎಚ್‌ಎಎಲ್ನ ಸಿಇಓ ಜಯಪಾಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News