ನೋಟ್ ರದ್ದತಿ, ಜಿಎಸ್ ಟಿಯಿಂದ ಭಾರತದ ಅಭಿವೃದ್ಧಿ ಕುಂಠಿತ : ಅಮೆರಿಕಾ ಅಧ್ಯಕ್ಷರ ವರದಿ

Update: 2018-02-22 16:52 GMT

ವಾಷಿಂಗ್ಟನ್ : ``ಭಾರತದಲ್ಲಿ ಅಭಿವೃದ್ಧಿ ಪ್ರಮಾಣವು ಅಲ್ಲಿನ ಕೆಲವೊಂದು ಪ್ರಮುಖ ಆರ್ಥಿಕ ಸುಧಾರಣಾ ಕ್ರಮಗಳಿಂದಾಗಿ ಕುಂಠಿತಗೊಂಡಿದೆ. ನವೆಂಬರ್ 2016ರ ನೋಟು ಅಮಾನ್ಯೀಕರಣ ನೀತಿ ಹಾಗೂ ಕಳೆದ ವರ್ಷದ ಜುಲೈ ತಿಂಗಳಲ್ಲಿ ಜಾರಿಗೊಳಿಸಿದ ಏಕ ರೂಪದ ತೆರಿಗೆ ನೀತಿಯಿಂದ ಸ್ವಲ್ಪ ಮಟ್ಟಿನ ಅನಿಶ್ಚಿತತೆ ಮುಂದುವರಿದಿದೆ,'' ಎಂದು ಅಮೆರಿಕಾ ಅಧ್ಯಕ್ಷರ ಆರ್ಥಿಕ ವರದಿ- ಇಕನಾಮಿಕ್ ರಿಪೋರ್ಟ್ ಆಫ್ ದಿ ಪ್ರೆಸಿಡೆಂಟ್  ತಿಳಿಸಿದೆ.

ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಅನುತ್ಪಾದಕ ಸಾಲಗಳ ಪ್ರಮಾಣವೂ ಅಪಾಯದ ಸೂಚನೆಯಾಗಿದೆ ಎಂದು ವರದಿ ತಿಳಿಸಿದೆ. ಒಟ್ಟು ಸಾಲಗಳಲ್ಲಿ ಅನುತ್ಪಾದಕ ಸಾಲದ ಪ್ರಮಾಣ 2017ರ ಮೂರನೇ ತ್ರೈಮಾಸಿಕದಲ್ಲಿ ಶೇ 9.7ರಷ್ಟಿತ್ತು. ಇದೇ ಅವಧಿಯಲ್ಲಿ ಚೀನಾದ ಅನುತ್ಪಾದಕ ಸಾಲಗಳ ಪ್ರಮಾಣ ಶೇ 1.7 ಆಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತದ ಈಗಿನ ಅನುತ್ಪಾದಕ ಸಾಲವು  2014-15 ಅವಧಿಯಲ್ಲಿದ್ದುದಕ್ಕಿಂತ ದ್ವಿಗುಣವಾಗಿದೆ. ಇವುಗಳಲ್ಲಿ ಅತ್ಯಧಿಕ ಅನುತ್ಪಾದಕ ಸಾಲ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದೆ ಎಂದೂ ವರದಿ ತಿಳಿಸಿದೆ.

ಒಟ್ಟು ಸಾಲಗಳ ಪ್ರಮಾಣದಲ್ಲಿ ಅನುತ್ಪಾದಕ ಸಾಲದ ಪ್ರಮಾಣ 2018ರ ಮೊದಲ ತ್ರೈಮಾಸಿಕದಲ್ಲಿ ಶೇ 10.8ಕ್ಕೆ ಏರಲಿದೆ  ಹಾಗೂ ಸೆಪ್ಟೆಂಬರ್ ತಿಂಗಳ ಹೊತ್ತಿಗೆ ಶೇ 11.1ರಷ್ಟು ಏರಿಕೆ ಕಾಣಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂದಾಜಿಸಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಅಪಾಯಕಾರಿ ಮಟ್ಟದಲ್ಲಿ ವಸೂಲಾಗದ ಸಾಲಗಳು

ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಅನುತ್ಪಾದಕ (ವಸೂಲಾಗದ) ಸಾಲಗಳ (ನಾನ್-ಫರ್ಫಾರ್ಮಿಂಗ್ ಲೋನ್ಸ್) ಬಗ್ಗೆ ವರದಿ ಕಳವಳ ವ್ಯಕ್ತಪಡಿಸಿದೆ. ಇದು ಬ್ಯಾಂಕಿಂಗ್ ಕ್ಷೇತ್ರಕ್ಕೆ ಗಂಭೀರ ಬೆದರಿಕೆಯನ್ನು ಒಡ್ಡಿದೆ ಎಂದು ಅಮೆರಿಕ ಸರಕಾರದ ವರದಿ ಹೇಳಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಗೆ ಒದಗಿಸಲಾದ ಅಂಕಿಸಂಖ್ಯೆಗಳ ಪ್ರಕಾರ, ಒಟ್ಟು ಸಾಲಗಳ ಮೊತ್ತದಲ್ಲಿ ಅನುತ್ಪಾದಕ ಸಾಲಗಳ ಪ್ರಮಾಣ 2017ರ ಮೂರನೆ ತ್ರೈಮಾಸಿಕದಲ್ಲಿ 9.7 ಶೇಕಡ ಆಗಿತ್ತು.

ಚೀನಾದಲ್ಲಿ ಇದು 1.7 ಶೇಕಡ ಆಗಿದೆ.

‘‘ಇತ್ತೀಚಿನ ವರ್ಷಗಳಲ್ಲಿ ಅನುತ್ಪಾದಕ ಸಾಲಗಳು ಅಪಾಯಕಾರಿ ದರದಲ್ಲಿ ಹೆಚ್ಚುತ್ತಿವೆ. ಹಾಲಿ ಅನುತ್ಪಾದಕ ಸಾಲದ ಪ್ರಮಾಣ 2014-15ರ ಆರ್ಥಿಕ ವರ್ಷದಲ್ಲಿದ್ದ ಪ್ರಮಾಣಕ್ಕಿಂತ ದುಪ್ಪಟ್ಟಾಗಿದೆ. ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು, ಅದರಲ್ಲೂ ಮುಖ್ಯವಾಗಿ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯ ಅನುತ್ಪಾದಕ ಸಾಲಗಳ ಸಿಂಹ ಪಾಲನ್ನು ಹೊಂದಿವೆ’’ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News