ನ್ಯಾಶನಲ್ ಹೆರಾಲ್ಡ್ ಮುಖ್ಯ ಸಂಪಾದಕ ನೀಲಭ್ ಮಿಶ್ರಾ ನಿಧನ

Update: 2018-02-24 06:30 GMT

ಚೆನ್ನೈ,ಫೆ.24 : ಹಿರಿಯ ಪತ್ರಕರ್ತ ಹಾಗೂ ನ್ಯಾಶನಲ್ ಹೆರಾಲ್ಡ್ ಪತ್ರಿಕೆಯ ಮುಖ್ಯ ಸಂಪಾದಕ ನೀಲಭ್ ಮಿಶ್ರಾ ಅವರು ಅಸೌಖ್ಯದಿಂದ ಇಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದರು. ಅವರಿಗೆ 57 ವರ್ಷ ವಯಸ್ಸಾಗಿತ್ತು. ನಾನ್-ಆಲ್ಕೋಹಾಲಿಕ್ ಲಿವರ್ ಸಿರ್ರೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಅದರಿಂದ ಉಂಟಾದ ಸಮಸ್ಯೆಗಳಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದರು.  ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿದ್ದ ಅವರಿಗೆ ಲಿವರ್ ಕಸಿ ನಡೆಸಬೇಕೆಂದು ಯೋಚಿಸಲಾಗಿತ್ತಾದರೂ ಅದಕ್ಕಿಂತ ಮುಂಚೆಯೇ ಅವರು ಇಹಲೋಕ ತ್ಯಜಿಸಿದ್ದಾರೆ.

ನೀಲಭ್ ಮಿಶ್ರಾ ಅವರು ತಮ್ಮ ಬಹುಕಾಲದ ಸಂಗಾತಿ ಕವಿತಾ ಶ್ರೀವಾಸ್ತವ, ಸಹೋದರ ಶೈಲೋಜ್ ಕುಮಾರ್ ಸೇರಿದಂತೆ ಅಪಾರ ಬಂಧುಬಳಗ ಹಾಗೂ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.

ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರು 1938ರಲ್ಲಿ ಆರಂಭಿಸಿದ್ದ ನ್ಯಾಶನಲ್ ಹೆರಾಲ್ಡ್ ಪತ್ರಿಕೆಯನ್ನು ಡಿಜಿಟಲ್ ವೆಬ್‍ಸೈಟ್ ಮಾದರಿಯಲ್ಲಿ 2016ರಲ್ಲಿ ಮರು ಆರಂಭಗೊಳಿಸುವ ನಿಟ್ಟಿನಲ್ಲಿ ಮಿಶ್ರಾ ಪ್ರಮುಖ ಪಾತ್ರವಹಿಸಿದ್ದರು. 2017ರಲ್ಲಿ ಅವರು 'ನ್ಯಾಷನಲ್ ಹೆರಾಲ್ಡ್ ಆನ್ ಸಂಡೆ' ಪತ್ರಿಕೆಯನ್ನು ಮರು ಆರಂಭಿಸುವುದರ ಜೊತೆಗೆ ನ್ಯಾಶನಲ್ ಹೆರಾಲ್ಡ್ ಸಂಸ್ಥೆಯ ಸಹ ಪ್ರಕಟಣೆಗಳಾದ 'ನವಜೀವನ್' ಹಾಗೂ 'ಖ್ವಾಮಿ ಆವಾಝ್' ಪತ್ರಿಕೆಗಳನ್ನು ಸುದ್ದಿ ವೆಬ್ ಸೈಟ್ ಗಳಾಗಿ ಮರು ಆರಂಭಿಸಿದ್ದರು.

ನ್ಯಾಶನಲ್ ಹೆರಾಲ್ಡ್ ಪತ್ರಿಕೆಯ ಜತೆ ಕೈಜೋಡಿಸುವ ಮುನ್ನ ಅವರು ಔಟ್‍ಲುಕ್ ಹಿಂದಿ ಪತ್ರಿಕೆಯ ಸಂಪಾದಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ದಿಲ್ಲಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದು ತಮ್ಮ ಹುಟ್ಟೂರು ಪಾಟ್ನಾದಲ್ಲಿ ನವಭಾರತ್ ಟೈಮ್ಸ್ ಪತ್ರಿಕೆಯಲ್ಲಿ ಅವರು ಆರಂಭದಲ್ಲಿ ವರದಿಗಾರರಾಗಿದ್ದರು. ನಂತರ ಜೈಪುರದಲ್ಲಿ ನ್ಯೂಸ್ ಟೈಮ್ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ ಅವರು  ರಾಜಸ್ಥಾನದಲ್ಲಿ 1998ರಲ್ಲಿ ಈನಾಡು ಟಿವಿ ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News