ಜಗತ್ತಿನ ಅತ್ಯಂತ ಧಡೂತಿ ವ್ಯಕ್ತಿ 250 ಕೆಜಿ ತೂಕ ಕಳೆದುಕೊಂಡಿದ್ದು ಹೇಗೆ ಗೊತ್ತೇ ?

Update: 2018-02-24 11:26 GMT

ಮೆಕ್ಸಿಕೊ,ಫೆ.24 : ಎರಡು ವರ್ಷಗಳ ಹಿಂದೆ ಬರೋಬ್ಬರಿ 595 ಕೆಜಿ ತೂಗುತ್ತಿದ್ದ ಮೆಕ್ಸಿಕೋದ ಜುವಾನ್ ಪೆಡ್ರೊ ಫ್ರಾಂಕೊ  ವಿಶ್ವದ ಅತ್ಯಂತ ಧಡೂತಿ ವ್ಯಕ್ತಿಯೆಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಅಕ್ಟೋಬರ್ 2016ರಲ್ಲಿ ಹೊಂದಿದ್ದ. ಆಗ ಆತ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದನಲ್ಲದೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ. ಆತನ ಶ್ವಾಸಕೋಶಕ್ಕೂ ಆತನ ಧಡೂತಿ ದೇಹಗಾತ್ರದಿಂದಾಗಿ ಸಮಸ್ಯೆಯುಂಟಾಗಿತ್ತು.  ಈಗ ಈತ ಒಟ್ಟು 250 ಕೆ.ಜಿ ತೂಕ ಕಳೆದುಕೊಂಡಿದ್ದಾನೆ. ಅದು ಹೇಗೆ ಸಾಧ್ಯವಾಯಿತೆಂಬುದು ಒಂದು ಇಂಟರೆಸ್ಟಿಂಗ್ ಸ್ಟೋರಿ.

ಅನೇಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಫ್ರಾಂಕೊ ತೂಕ ಕಳೆದುಕೊಳ್ಳದಿದ್ದರೆ ಆತನ ಪ್ರಾಣಕ್ಕೇ ಅಪಾಯವಾಗಬಹುದೆಂದು ವೈದ್ಯರು ಹೇಳಿದಾಗ ಆತ ಡಬಲ್ ಗ್ಯಾಸ್ಟ್ರಿಕ್ ಸರ್ಜರಿಗೆ ಒಳಗಾಗಲು ನಿರ್ಧರಿಸಿದ್ದ. ಆತನ ವೈದ್ಯರಾದ ಜೋಸ್ ಅಂಟೋನಿಯೋ ಕಸ್ಟನೆಡಾ ಇರುವ ಗೌಡಲಜರ ನಗರಕ್ಕೆ ಫ್ರಾಂಕೋ ಮತ್ತಾತನ ತಾಯಿ ಅವರ ಹುಟ್ಟೂರಾದ ಅಗುಸೆಲಿಯೆಂಟಿಸ್ ನಿಂದ  ವಾಸ ಬದಲಿಸಿದರು.

ಆರು ತಿಂಗಳುಗಳ ಕಾಲ ತಮ್ಮ ವೈದ್ಯರ ಸಲಹೆಯಂತೆ ಕಠಿಣ ಡಯಟ್ ನಿಯಮ ಪಾಲಿಸಿದ ನಂತರ ಮೇ 2017ರಲ್ಲಿ ಆತನ ಪ್ರಥಮ ಶಸ್ತ್ರಕ್ರಿಯೆ ಗ್ಯಾಸ್ಟ್ರಿಕ್ ಸ್ಲೀವ್ ಆಪರೇಷನ್ ನಡೆಯಿತು. ಆಗ ಆತನ ಹೊಟ್ಟೆಯ ಒಂದು ಭಾಗವನ್ನು ತೆಗೆದು ಶೇ. 80ರಷ್ಟು ಗಾತ್ರ ಕಡಿಮೆ ಮಾಡಲಾಯಿತು. ಆರು ತಿಂಗಳ ನಂತರ ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಕ್ರಿಯೆ ನಡೆದು ಉಳಿದ ಹೊಟ್ಟೆಯ ಭಾಗವನ್ನು ಅರ್ಧಕ್ಕಿಳಿಸಲಾಯಿತು. ನಂತರ ಆತನ ಕರುಳನ್ನೂ ವಿಭಾಗಿಸಲಾಯಿತು.

ಈಗ 33 ವರ್ಷದ ಫ್ರಾಂಕೊ 345 ಕೆಜಿ ತೂಗುತ್ತಿದ್ದಾನೆ. ಮುಂದಿನ ಒಂದೂವರೆ ವರ್ಷ ಅವಧಿಯಲ್ಲಿ ಆತನ ತೂಕ ಇನ್ನೂ 100 ಕೆ.ಜಿ.ಗಳಷ್ಟು ಕಡಿಮೆಯಾಗಬಹುದೆಂಬ ವಿಶ್ವಾಸ ಆತನ ವೈದ್ಯರದ್ದು. ಆದರೆ ಈಗಲೂ ದಿನದ 24 ಗಂಟೆಗಳೂ ಆತನಿಗೆ ಆಮ್ಲಜನಕ ಸರಬರಾಜು ನಡೆಯುತ್ತದೆ. ಆದರೆ ಹಿಂದಿನಂತೆ ಇಡೀ ದಿನ ಹಾಸಿಗೆಯಲ್ಲಿ ಬಿದ್ದಿರದೆ ಸ್ವಲ್ಪ ನಡೆದಾಡುತ್ತಾನೆ, ವಿಶೇಷವಾಗಿ ಆತನಿಗೆಂದೇ ತಯಾರಿಸಲ್ಪಟ್ಟ ಮರುವಿನ್ಯಾಸಗೊಳಿಸಲ್ಪಟ್ಟ ಬೈಸಿಕಲ್ ಅನ್ನು ಮಂಚದ ಮೇಲೆಯೇ ಕುಳಿತುಕೊಂಡು ತುಳಿಯುತ್ತಾನೆ.

ಆತನ ಕಾಲುಗಳಲ್ಲಿನ ಬಾವು - ಲಿಂಫೋಡೆಮ ಇದಕ್ಕೆ ನೀಡಲಾಗುತ್ತಿರುವ ಚಿಕಿತ್ಸೆಗೆ ಆತ ಹೇಗೆ ಸ್ಪಂಧಿಸುತ್ತಾನೆಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ, ಒಂದು ಜೀವ ಉಳಿಸಲು ಯತ್ನಿಸುತ್ತಿದ್ದೇವೆ. ಆತ ಅಪಾಯದಿಂದ ಪಾರಾಗುವ ತನಕ ಎಚ್ಚರಿಕೆಯಿಂದಿರುತ್ತೇವೆ ಎಂದು ಆತನ ವೈದ್ಯರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News