ಬೆಂಗಳೂರು: ದಂಡ ವಿಧಿಸಿದ್ದಕ್ಕೆ ಬೇಸತ್ತು ಬೆಂಕಿ ಹಚ್ಚಿಕೊಂಡ ಪಾನಮತ್ತ ಬೈಕ್ ಸವಾರ

Update: 2018-02-25 11:51 GMT

ಬೆಂಗಳೂರು, ಫೆ. 25: ಕುಡಿದು ವಾಹನ ಚಲಾಯಿಸುತ್ತಿದ್ದ ಸವಾರನ ತಪಾಸಣೆ ನಡೆಸಿದ ಸಂಚಾರ ಪೊಲೀಸರು ದಂಡ ವಿಧಿಸಿ, ಪ್ರಕರಣ ದಾಖಲಿಸಿದ್ದಕ್ಕೆ ಬೇಸತ್ತ ಸವಾರ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ಇಲ್ಲಿನ ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಜಯದೇವ ಹೃದ್ರೋಗ ಆಸತ್ರೆ ಬಳಿ ನಡೆದಿದೆ.

ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಚನ್ನಮ್ಮನಕೆರೆ ಅಚ್ಚುಕಟ್ಟು ನಿವಾಸಿ, ತಮಿಳುನಾಡು ಮೂಲದ ಮಣಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ ಎಂದು ಗೊತ್ತಾಗಿದೆ.

ಇಲ್ಲಿನ ಬನ್ನೇರುಘಟ್ಟ ರಸ್ತೆಯ ಕಡೆಯಿಂದ ರಾತ್ರಿ 10ರ ವೇಳೆ ಮಣಿ ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿರುವ ಮನೆಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮಾರ್ಗ ಮಧ್ಯೆ ಜಯದೇವ ಆಸ್ಪತ್ರೆ ಬಳಿ ಮೈಕೋ ಲೇಔಟ್ ಸಂಚಾರ ಪೊಲೀಸರು ಅಡ್ಡಗಟ್ಟಿ ಮದ್ಯ ಸೇವನೆ ಪರಿಶೀಲಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಆತನ ವಿರುದ್ಧ ಪ್ರಕರಣ ದಾಖಲಿಸಿ ದಂಡ ಪಾವತಿಸುವಂತೆ ತಿಳಿಸಿದ್ದಾರೆ.

ಇದಕ್ಕೆ ಒಪ್ಪದ ಮಣಿ ತಾನು ಕುಡಿದಿಲ್ಲ, ಆದರೂ ನೀವು ದಂಡ ಹಾಕುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಪೊಲೀಸರು ಬೈಕ್ ಅನ್ನು ವಶಪಡಿಸಿಕೊಂಡು ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಇದರಿಂದ ಬೇಸತ್ತ ಮಣಿ ರಸ್ತೆ ಮಧ್ಯದಲ್ಲೇ ಪೊಲೀಸರ ಮುಂದೆಯೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆಂದು ಹೇಳಲಾಗಿದೆ.

ಕ್ಷಣಾರ್ಧದಲ್ಲೆ ನಡೆದುಹೋದ ಈ ಘಟನೆಯಿಂದ ವಿಚಲಿತರಾದ ಸಂಚಾರ ಪೊಲೀಸರು ತಕ್ಷಣ ಬೆಂಕಿ ನಂದಿಸಿ ಆತನನ್ನು ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್‌ಗೆ ದಾಖಲಿಸಿದ್ದಾರೆ. ಮಣಿ ದೇಹದ ಶೇ.30ರಷ್ಟು ಸುಟ್ಟು ಹೋಗಿದ್ದು, ತೀವ್ರ ಸ್ವರೂಪದ ಸುಟ್ಟಗಾಯಗಳಾಗಿವೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಮೈಕೋ ಲೇಔಟ್ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News