ಕಾರ್ಮಿಕರ ಹಕ್ಕುಗಳನ್ನು ಕಸಿಯುತ್ತಿರುವ ಮೋದಿ ಸರಕಾರ: ಪ್ರೊ.ಬಾಬು ಮ್ಯಾಥ್ಯೂ

Update: 2018-02-25 12:51 GMT

ಬೆಂಗಳೂರು, ಫೆ. 25: ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿರುವ ಕೇಂದ್ರ ಸರಕಾರ, ಇತ್ತೀಚಿನ ಬಜೆಟ್‌ನಲ್ಲಿ ಎಲ್ಲ ಕ್ಷೇತ್ರಗಳಿಗೂ ‘ಕಾಲಮಿತಿ ಉದ್ಯೋಗ’ ಜಾರಿಗೊಳಿಸುವ ಬಗ್ಗೆ ಪ್ರಸ್ತಾಪಿಸಿದೆ. ಈ ಕ್ರಮ ಸಂಘಟಿತ ವಲಯದ ಕಾರ್ಮಿಕರ ಹಕ್ಕುಗಳನ್ನು ಕಸಿದು ಉದ್ಯೋಗ ನಾಶ ಮಾಡುವ ಧಮನಕಾರಿ ಬೆಳವಣಿಗೆಯಾಗಿದೆ ಎಂದು ಪ್ರೊ.ಬಾಬು ಮ್ಯಾಥ್ಯೂ ಆರೋಪಿಸಿದ್ದಾರೆ.

ರವಿವಾರ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ‘ಕಾರ್ಮಿಕ ಕಾನೂನುಗಳ ತಿದ್ದುಪಡಿ ಮತ್ತು ಉದ್ಭವಿಸುತ್ತಿರುವ ಸವಾಲುಗಳು’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಕಾರ್ಮಿಕರ 44 ಕಾನೂನುಗಳನ್ನು ಸರಳೀಕರಣದ ಹೆಸರಿನಲ್ಲಿ ನಾಲ್ಕು ‘ಲೇಬರ್ ಕೋಡ್’ಗಳನ್ನಾಗಿ ಮಾಡಲು ಕಾನೂನು ಜಾರಿ ಮಾಡಲು ನಿರ್ಧರಿಸಿದೆ. ಈ ಕ್ರಮದಿಂದಾಗಿ ಕಾರ್ಮಿಕರ ಸಂಘಟನೆ, ಮುಷ್ಕರ, ಚೌಕಾಶಿ ಮಾಡುವ ಹಕ್ಕುನ್ನು ಕಸಿದುಕೊಳ್ಳುವುದರ ಜತೆಗೆ ಉದ್ಯೋಗ ನಾಶ ಮಾಡಲು ಕೇಂದ್ರ ಸರಕಾರ ಮುಂದಾಗಿದೆ ಎಂದರು.

ಮಾರುಕಟ್ಟೆ ಏರಿಳಿತದ ಪರಿಣಾಮ ಇಡೀ ಪ್ರಪಂಚದಲ್ಲಿ ಎಲ್ಲೆಡೆ ಆಗಿದೆ. ಭಾರತದಲ್ಲಿ ಇಂದಿಗೂ ಮುಂದುವರೆಯುತ್ತಿದೆ. 1991ರಿಂದ ಪ್ರಾರಂಭವಾದ ಇದನ್ನು ಪ್ರಧಾನಿ ಮೋದಿ ಮುಂದುವರೆಸಿಕೊಂಡು ಹೋಗುತ್ತಿದ್ದು, ಪ್ರಪಂಚದ ಮೂರನೇ ಹಂತ ಪ್ರವೇಶಿಸಲು ಸಾಧ್ಯವಿಲ್ಲವೇನೋ ಎನ್ನುವ ರೀತಿಯಲ್ಲಿ ಪ್ರಧಾನಿ ಮೋದಿ ಸರಕಾರ ನಡೆದುಕೊಳ್ಳುತ್ತಿದೆ. ಬರೀ ಮಾರುಕಟ್ಟೆಯಿಂದ ಸಮಾಜ ನಡೆಸಲು ಸಾಧ್ಯವಾಗುತ್ತದೆಯೆ ಎಂಬುದನ್ನು ಆಲೋಚಿಸಬೇಕಿದೆ ಎಂದು ತಿಳಿಸಿದರು.

ಕಾರ್ಮಿಕರ ಕಾನೂನುಗಳನ್ನು ಕಸಿದುಕೊಂಡು ಬಂಡವಾಳಿಗರಿಗೆ ಅತಿ ಕಡಿಮೆ ದರದಲ್ಲಿ ಕಾರ್ಮಿಕರನ್ನು ಒದಗಿಸುವ ಹುನ್ನಾರ ನಡೆಸಲಾಗುತ್ತಿದೆ. ಇವರಿಂದ ಉತ್ಪಾದನೆ ಮಾಡಿದ ಉತ್ಪನ್ನಗಳನ್ನು ನಮ್ಮ ದೇಶದಲ್ಲಿ ಮಾರಾಟ ಮಾಡಿ, ಅದರಿಂದ ಬರುವ ಲಾಭವನ್ನು ರಫ್ತು ಮಾಡುತ್ತಾರೆ. ಇದರಿಂದ ಉದ್ಯೋಗ ಕ್ಷೀಣಿಸುತ್ತದೆ. ಕಾರ್ಮಿಕರ ಜೀವನದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೈಗಾರಿಕಾ ಕಾಯಿದೆ ಸರಳೀಕರಣದ ಹೆಸರಿನಲ್ಲಿ ಕಾರ್ಮಿಕರ ಹಕ್ಕು ಕಸಿದುಕೊಳ್ಳುತ್ತಿದ್ದಾರೆ. ಇದುವರೆಗೆ ಕಾರ್ಮಿಕರಿಗೆ ಇನ್ನು ಮುಂದೆ ಈ ದೇಶದಲ್ಲಿ ಕಾನೂನು ರೀತಿಯಲ್ಲಿ ಮುಷ್ಕರ ಮಾಡಲು ಸಾಧ್ಯವಿಲ್ಲ. ಹೀಗಾಗಿ 1926ರಿಂದ ಕಾರ್ಮಿಕರು ಚಲಾಯಿಸುತ್ತಿದ್ದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ವೇತನ, ಸಾಮಾಜಿಕ ಭದ್ರತೆ, ಸುರಕ್ಷತೆ ಇಲ್ಲದಂತಗುತ್ತದೆ. ಬಂಡವಾಳಶಾಹಿಗಳ ಪರವಾದ ಕೇಂದ್ರ ಸರಕಾರದ ಸರಿಯಲ್ಲ ಎಂದು ಆಕ್ಷೇಪಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಂ.ಡಿ. ಹರಿಗೋವಿಂದ, ವಕೀಲ ವಿಲಾಸ್ ರಂಗನಾಥ್ ದಾತರ್, ಭಾರತೀಯ ವಕೀಲ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News