ಗ್ರೀಕ್-ಕನ್ನಡ ನಾಟಕದ ಸಾಮ್ಯತೆ ಕುರಿತ ಸಂಶೋಧನೆ ಅಗತ್ಯ: ಡಾ.ಚಂದ್ರಶೇಖರ ಕಂಬಾರ

Update: 2018-02-25 12:56 GMT

ಬೆಂಗಳೂರು, ಫೆ. 25: ಗ್ರೀಕ್ ಹಾಗೂ ಕನ್ನಡ ನಾಟಕಗಳ ನಡುವೆ ಹಲವು ಸಾಮ್ಯತೆಗಳಿದ್ದು, ಗ್ರೀಕ್ ನಾಟಕಗಳಲ್ಲಿ ಕನ್ನಡ ಪದಗಳು ಬಳಕೆಯಾಗಿವೆ. ಆದುದರಿಂದ ಈ ಕುರಿತು ಸಂಶೋಧನೆಗಳು ನಡೆಯಬೇಕಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಹೊಸ ರಂಗಭಾಷೆಯ ಹುಡುಕಾಟ’ ಕುರಿತು ರಾಷ್ಟ್ರೀಯ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರೀಕ್‌ನ ನಾಟಕವೊಂದರಲ್ಲಿ ಉಡುಪಿಯ ‘ಮಲ್ಪೆ’ ಸಮುದ್ರ ತೀರದ ಪ್ರಸ್ತಾಪ ಬರುತ್ತದೆ. ಆ ಸಂದರ್ಭದಲ್ಲಿ ಕನ್ನಡದಲ್ಲೆ ಸಂಭಾಷಣೆ ನಡೆಸಿರುವುದು ಕಂಡು ಬಂದಿದೆ. ಹೀಗೆ ಗ್ರೀಕ್‌ನ ಹಲವು ನಾಟಕಗಳಲ್ಲಿ ಕನ್ನಡ ಪದಗಳು ಬಳಕೆಯಾಗಿವೆ. ಆದರೆ, ಈ ಕುರಿತು ಹೆಚ್ಚಿನ ಸಂಶೋಧನೆಗಳು ನಡೆದಿಲ್ಲ. ಮುಂದಿನ ದಿನಗಳಲ್ಲಿ ರಂಗ ಸಂಶೋಧಕರು ಇತ್ತ ಗಮನ ಹರಿಸಬೇಕು ಎಂದು ಅವರು ಆಶಿಸಿದರು.

ದ್ರಾವಿಡ ನಾಟಕ ಪರಂಪರೆಯ ಮೂಲ ಪುರುಷ ಶಿವ ಎಂದು ನಂಬಲಾಗಿದೆ. ದೇಹಕ್ಕೆ ವಿಭೂತಿಹಚ್ಚಿ, ಒಂದು ಕೈಯಲ್ಲಿ ಡಮರುಗ, ಮತ್ತೊಂದು ಕೈಯಲ್ಲಿ ತ್ರಿಶೂಲ ಹಿಡಿದು ಕುಣಿಯುತ್ತಾ ಪ್ರೇಕ್ಷಕರಲ್ಲಿ ರಸಾಸ್ವಾದವನ್ನು ಉಂಟು ಮಾಡುತ್ತಿದ್ದನು. ಅದೇ ರೀತಿ ಗ್ರೀಕ್‌ನ ನಾಟಕಗಳಲ್ಲೂ ಶಿವನಿಗೆ ಹೋಲುವಂತಹ ವೇಷಭೂಷಣಗಳು ಹೆಚ್ಚಿಗೆ ಕಂಡುಬಂದಿವೆ. ಹೀಗಾಗಿ ದ್ರಾವಿಡ ನಾಟಕ ಹಾಗೂ ಗ್ರೀಕ್ ನಾಟಕಗಳ ನಡುವೆ ಹಲವು ಸಾಮ್ಯತೆಗಳನ್ನು ಗುರುತಿಸಬಹುದಾಗಿದೆ ಎಂದು ಅವರು ಹೇಳಿದರು.

ನಾಟಕಯೆಂದರೆ ಕೇವಲ ಮನರಂಜನೆಯಲ್ಲ. ಬದುಕನ್ನು ರೂಪಿಸುವ, ನಿರೂಪಿಸುವ ಕ್ಷೇತ್ರವಾಗಿದೆ. ನಾಟಕದ ಕತೆಗಳು, ಹಾಡು, ನೃತ್ಯ ಹಾಗೂ ಅಭಿನಯದ ಮೂಲಕ ಪ್ರೇಕ್ಷಕನೊಳಗೆ ನಾಟಕದ ಆಶಯವನ್ನು ಮೂಡಿಸಲಾಗುತ್ತದೆ. ಪ್ರೇಕ್ಷಕನು ನಾಟಕದ ಆಶಯದೊಂದಿಗೆ ತನ್ನ ಚಿಂತನಾ ಕ್ರಮವನ್ನು ಮುಖಾಮುಖಿಯಾಗಿಸುತ್ತಾ, ಹೊಸ ಚಿಂತನೆ ಹುಟ್ಟಿಗೆ ಕಾರಣವಾಗಲಿದೆ ಎಂದು ಅವರು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ.ಸುದೇಶ್ ಮಾತನಾಡಿ, ಬದುಕೇ ಒಂದು ನಾಟಕ ರಂಗವೆಂದರೆ ತಪ್ಪಾಗಲಾರದು. ನ್ಯಾಯಾಲಯದಲ್ಲಿ ನಡೆಯುವ ವಾದ ಪ್ರತಿವಾದಗಳನ್ನು ನೋಡಿದರೆ, ಯಾವ ರಂಗ ನಾಟಕಕ್ಕಿಂತಲೂ ಕಡಿಮೆಯಿರುವುದಿಲ್ಲ. ಇದರ ನಡುವೆ ಬದುಕಿನ ಸೂಕ್ಷ್ಮತೆಗಳನ್ನು ರಂಗರೂಪಕ್ಕೆ ತರುವ ಮೂಲಕ ಪ್ರೇಕ್ಷಕರಲ್ಲಿ ರಸಾನುಭವ ಹುಟ್ಟು ಮಾಡುವುದೆ ನಾಟಕ ಕ್ಷೇತ್ರದ ಹೆಚ್ಚುಗಾರಿಕೆ ಎಂದು ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಶಫಾತ್‌ಖಾನ್, ಬಸವಲಿಂಗಯ್ಯ ಹಾಗೂ ವಿಚಾರ ಸಂಕಿರಣದಲ್ಲಿ ಹಿರಿಯ ನಾಟಕಕಾರ ಎಚ್.ಎಸ್. ಶಿವಪ್ರಕಾಶ್, ರಾಮೇಶ್ವರ್ ಪ್ರೇಮ್, ಸಂಜಯ್ ಪನ್ವಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News