ಬೆಂಗಳೂರು: ಕೂಲಿ ಕಾರ್ಮಿಕನಿಗೆ ಇರಿತ

Update: 2018-02-25 16:30 GMT

ಬೆಂಗಳೂರು, ಫೆ. 25: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೋರ್ವನಿಗೆ ಪತ್ನಿಯ ಎದುರೇ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ನಗರದ ಯಶವಂತಪುರದ ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ಮೂಲದ ಕೂಲಿ ಕಾರ್ಮಿಕ ಮಹದೇವಪ್ಪ (24) ಇರಿತಕ್ಕೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಕೆಲ ದಿನಗಳ ಹಿಂದೆ ಕಾರ್ಯ ನಿಮಿತ್ತ ಊರಿಗೆ ತೆರಳಿದ್ದ ದಂಪತಿ ರವಿವಾರ ಬೆಳಗ್ಗೆ ರೈಲಿನಲ್ಲಿ ನಗರಕ್ಕಾಗಮಿಸಿದ್ದಾರೆ. ಈ ವೇಳೆ ಇಲ್ಲಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ನಡೆದು ಬರುತ್ತಿದ್ದಾಗ ಏಕಾಏಕಿ ಆಗಮಿಸಿದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದುಷ್ಕರ್ಮಿಗಳ ಇರಿತದಿಂದ ಗಾಯಗೊಂಡಿರುವ ಕೂಲಿ ಕಾರ್ಮಿಕ ಮಹದೇವಪ್ಪ ಎಂಬವನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೂಲಿ ಕಾರ್ಮಿಕ ಮಹದೇವಪ್ಪ ಮತ್ತು ಹೊನ್ನಮ್ಮ ಎಂಬವರನ್ನು ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇವರಿಬ್ಬರ ಮದುವೆಗೆ ಹೊನ್ನಮ್ಮ ಮನೆಯವರ ವಿರೋಧ ಇತ್ತು ಎನ್ನಲಾಗಿದೆ.

ಆ ಹಿನ್ನೆಲೆಯಲ್ಲಿ ಮಹದೇವಪ್ಪ ಪತ್ನಿ ಹೊನ್ನಮ್ಮಳ ಸಂಬಂಧಿಕ ಬಸವರಾಜು ಎಂಬಾತ ಕೊಲೆ ಮಾಡಲು ಯತ್ನಿಸಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಯಶವಂತಪುರ ಆರ್.ಎಂ.ಸಿ.ಯಾರ್ಡ್‌ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ದುಷ್ಕರ್ಮಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News