ಭಯೋತ್ಪಾದನಾ ಸಂಚು: ಪಾಕಿಸ್ತಾನಿ ರಾಜತಾಂತ್ರಿಕನ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ಜಾರಿಗೆ ಎನ್‌ಐಎ ಮನವಿ

Update: 2018-02-25 17:20 GMT

ಹೊಸದಿಲ್ಲಿ, ಫೆ.25: ದಕ್ಷಿಣ ಭಾರತದಲ್ಲಿರುವ ಅಮೆರಿಕ ಮತ್ತು ಇಸ್ರೇಲ್ ರಾಯಬಾರಿ ಕಚೇರಿಗಳ ಮೇಲೆ ಭಯೋತ್ಪಾದನಾ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದಲ್ಲಿ ಕಳೆದ ವಾರ ದೋಷಾರೋಪಣೆ ಸಲ್ಲಿಸಲಾಗಿರುವ ಪಾಕಿಸ್ತಾನದ ರಾಜತಾಂತ್ರಿಕ ಅಮಿರ್ ಝುಬೈರ್ ಸಿದ್ದಿಕಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂಟರ್ಪೋಲ್‌ಗೆ ಮನವಿ ಮಾಡಿದೆ.

ಸಿದ್ದಿಕಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಗೊಳಿಸಲಾಗಿದ್ದು ಶೀಘ್ರದಲ್ಲಿ ಫ್ರಾನ್ಸ್‌ನ ಲ್ಯೋನ್‌ನಲ್ಲಿರುವ ಇಂಟರ್ಪೋಲ್‌ನ ಮುಖ್ಯಕಚೇರಿಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿದ್ದಿಕಿ 2014ರಲ್ಲಿ ಶ್ರೀಲಂಕಾದಲ್ಲಿ ಪಾಕಿಸ್ತಾನದ ರಾಯಬಾರ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಭಾರತದಲ್ಲಿ ದಾಳಿಗೆ ಸಂಚು ರೂಪಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2014ರ ಎಪ್ರಿಲ್‌ನಲ್ಲಿ ಗುಪ್ತಚರ ಇಲಾಖೆಯು ಈ ಸಂಚನ್ನು ಬಯಲು ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡು ಪೊಲೀಸರು ಶ್ರೀಲಂಕಾ ನಿವಾಸಿ ಸಾಕಿರ್ ಹುಸೇನ್ ಎಂಬಾತನನ್ನು ಬಂಧಿಸಿದ್ದರು. ಆತ ನೀಡಿದ ಮಾಹಿತಿಯಂತೆ ಸಿದ್ದಿಕಿ ವಿರುದ್ಧ ಚಾರ್ಜ್‌ಶೀಟ್ ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಹುಸೇನ್ ಸದ್ಯ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News