ಸಾಂಸ್ಕೃತಿಕ ರಂಗದ ಸಂಕಟಗಳು

Update: 2018-02-25 18:48 GMT

ಆರೆಸ್ಸೆಸ್‌ನಂತಹ ಕೋಮುವಾದಿ ಸಂಘಟನೆಗಳಲ್ಲಿ ಕಲಾವಿದರು, ಸಾಹಿತಿಗಳು ಅಥವಾ ಪ್ರತಿಭಾವಂತರು ಸಿಗುವುದು ತುಂಬಾ ವಿರಳ. ಈ ಸಂಘಟನೆಗಳಲ್ಲಿ ಬರೀ ಭಕ್ತರೇ ತುಂಬಿರುತ್ತಾರೆ. ಅದರಂತೆ ಸಂಘ ಪರಿವಾರ ಸಾಂಸ್ಕೃತಿಕ ಕ್ಷೇತ್ರವನ್ನು ಕಬಳಿಸುವ ದುಸ್ಸಾಹಸಕ್ಕೆ ಕೈ ಹಾಕಿದರೂ ಕೂಡ ಆ ಸ್ಥಾನಕ್ಕೆ ಅರ್ಹ ಅಭ್ಯರ್ಥಿ ಸಿಗುವುದಿಲ್ಲ.


ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ರೂಪಿಸುತ್ತೇವೆ ಎಂದು ನಾವೆಲ್ಲ ಪ್ರಗತಿಪರರು ಇನ್ನೂ ಪುರಾಣ ಹೇಳುತ್ತಿರುವಾಗಲೇ ಸಂಘ ಪರಿವಾರ ಈ ದೇಶದ ಪ್ರಭುತ್ವವನ್ನು ಸ್ವಾಧೀನಪಡಿಸಿಕೊಂಡು ಸಂವಿಧಾನ ವಿರೋಧಿಯಾದ ತನ್ನ ಕಾರ್ಯಸೂಚಿಯನ್ನು ಅತ್ಯಂತ ವ್ಯವಸ್ಥಿತವಾಗಿ ಜಾರಿಗೆ ತರುತ್ತಿದೆ. ಸಂಘ ಪರಿವಾರದ ಕಾರ್ಯಸೂಚಿ ಬರೀ ಕಾರ್ಯಸೂಚಿಯಲ್ಲ. ಅದು ಎಲ್ಲವನ್ನೂ ಮೀರಿದ, ನಮ್ಮ ಸಾಮಾಜಿಕ ಬದುಕನ್ನೇ ಪಲ್ಲಟಗೊಳಿಸುವ, ಕಳೆದೊಂದು ಶತಮಾನದಲ್ಲಿ ನಾವು ನಡೆದು ಬಂದ ದಾರಿಯನ್ನು ತಪ್ಪಿಸಿ ಅಡ್ಡಹಾದಿ ಹಿಡಿಸುವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಸೂಚಿಯನ್ನು ಅದು ಹೊಂದಿದೆ. ಅದರ ಭಾಗವಾಗಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ, ಸಾಂಸ್ಕೃತಿಕ ಕ್ಷೇತ್ರವನ್ನೇ ಗುರಿಯಾಗಿ ಇಟ್ಟುಕೊಂಡು ಅದು ಕೆಲಸ ಮಾಡುತ್ತದೆ.

ಸಂಘ ಪರಿವಾರದ ಕಾರ್ಯಸೂಚಿ ಬರೀ ಒಂದು ಚುನಾವಣೆಗೆ ಸೀಮಿತವಾದ ಕಾರ್ಯ ಸೂಚಿಯಲ್ಲ. ಮುಂದಿನ 50 ವರ್ಷದ ಗುರಿಯನ್ನು ಇಟ್ಟುಕೊಂಡು ತಂತ್ರ ರೂಪಿಸುವುದು, ಅದಕ್ಕಾಗಿ ಹೊಸ ಪೀಳಿಗೆಯ ಮಕ್ಕಳತ್ತಲೇ ಗಮನ ಕೇಂದ್ರೀಕರಿಸುತ್ತದೆ. ಮಕ್ಕಳಾಗಿದ್ದಾಗಲೇ ಅವರಿಗೆ ಶಾಖೆಯಲ್ಲಿ ತರಬೇತಿ ನೀಡಿ, ಯುವಕರಾಗುತ್ತಿದ್ದಂತೆ ಅವರನ್ನು ತಮ್ಮ ಕಾರ್ಯಸೂಚಿಗೆ ಪೂರಕವಾಗಿ ಮಾನಸಿಕವಾಗಿ ಸಿದ್ಧಗೊಳಿಸುತ್ತದೆ. ಅಂತಲೇ ಈ ವ್ಯವಸ್ಥೆಯ ಕಾರ್ಯಸೂಚಿಯ ಭಾಗವಾಗಿ ಹೊಸ ಪೀಳಿಗೆಯ ಯುವಕರು ಮೋದಿ, ಮೋದಿ ಎಂದು ಬಡಿದುಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ನಡೆದ ಕೇಂದ್ರ ಸಾಹಿತ್ಯ ಅಕಾಡಮಿ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಅದನ್ನು ವಶಪಡಿಸಿಕೊಳ್ಳಲು ನಡೆಸಿದ ಯತ್ನ ಯಶಸ್ವಿಯಾಗಲಿಲ್ಲ. ನಮ್ಮ ಹೆಮ್ಮೆಯ ಚಂದ್ರಶೇಖರ ಕಂಬಾರ ಅವರು ಅಕಾಡಮಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಸಂಘಪರಿವಾರ ಬೆಂಬಲಿತ ಅಭ್ಯರ್ಥಿ ಪರಾಭವಗೊಂಡರು. ಸಾಹಿತ್ಯ ಅಕಾಡಮಿಯನ್ನು ವಶಪಡಿಸಿಕೊಳ್ಳಲು ಅದು ನಡೆಸುತ್ತಿರುವ ಪ್ರಯತ್ನ ಇದೇ ಮೊದಲ ಬಾರಿಯೇನಲ್ಲ. 2003ರಿಂದ ಈ ರೀತಿಯ ಪ್ರಯತ್ನ ನಡೆಸುತ್ತಿದೆ. ಆಗ ಖ್ಯಾತ ಪ್ರಗತಿಪರ ಲೇಖಕಿ ಮಹಾಶ್ವೇತಾದೇವಿ ಅವರು ಗೋವಿಂದ್ ನಾರಂಗ್ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಎಲ್ಲಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವುದು, ಆ ಮೂಲಕ ಇಡೀ ಒಂದು ಪೀಳಿಗೆಯನ್ನು ಮನುವಾದಿ ಹಿಂದುತ್ವ ಚೌಕಟ್ಟಿನಲ್ಲಿ ಬೆಳೆಸುವುದು ಅದರ ಕಾರ್ಯಸೂಚಿಯಾಗಿದೆ. ಅಂತಲೇ ಕೇಂದ್ರದಲ್ಲಿ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದಾಗಲೆಲ್ಲ ಮಾನವ ಸಂಪನ್ಮೂಲ ಖಾತೆಯನ್ನು ಅದು ಪಟ್ಟು ಹಿಡಿದು ಪಡೆದುಕೊಳ್ಳುತ್ತದೆ. ವಾಜಪೇಯಿ ಪ್ರಧಾನಿಯಾಗಿದ್ದಾಗ, ಸಂಘ ಪರಿವಾರದ ಮುರಳಿ ಮನೋಹರ ಜೋಶಿ ಮಾನವ ಸಂಪನ್ಮೂಲ ಖಾತೆಯ ಸಚಿವರಾಗಿದ್ದರು. ನರೇಂದ್ರ ಮೋದಿಯವರ ಸರಕಾರದಲ್ಲಿ ಆರೆಸ್ಸೆಸ್ ಸ್ವಯಂ-ಸೇವಕ ಮಹೇಶ್ ಶರ್ಮಾ ಅವರು ಮಾನವ ಸಂಪನ್ಮೂಲ ಖಾತೆ ವಹಿಸಿಕೊಂಡಿದ್ದಾರೆ. ಅಧಿಕಾರ ವಹಿಸಿಕೊಂಡ ತಕ್ಷಣ ಅವರು, ‘‘ಭಾರತದ ಸಾಂಸ್ಕೃತಿಕ ಸಂಸ್ಥೆಗಳು ಸಂಪೂರ್ಣ ನಾಶವಾಗಿವೆ. ಅವುಗಳನ್ನು ಪುನಶ್ಚೇತನಗೊಳಿಸಬೇಕು’’ ಎಂದು ಹೇಳಿದ್ದರು.

ನಾಗಪುರದ ಆರೆಸ್ಸೆಸ್ ಗುರುಗಳ ಆದೇಶದಂತೆ ನಡೆಯುವ ಮಹೇಶ ಶರ್ಮಾ ಅಧಿಕಾರ ವಹಿಸಿಕೊಂಡ ತಕ್ಷಣ ದೇಶದ ಪ್ರತಿಷ್ಠಿತ ಸಂಸ್ಥೆಯಾದ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ಆಡಳಿತ ಮಂಡಳಿಯ ಟ್ರಸ್ಟಿಗಳನ್ನೆಲ್ಲ ಕಿತ್ತು ಹಾಕಿದರು. ಈ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಎಬಿವಿಪಿಯ ಮಾಜಿ ಅಧ್ಯಕ್ಷರೊಬ್ಬರನ್ನು ನೇಮಕ ಮಾಡಿದರು. ದಿಲ್ಲಿಯ ತೀನ್‌ಮೂರ್ತಿ ಭವನದಲ್ಲಿರುವ ನೆಹರೂ ಸ್ಮಾರಕ, ಮ್ಯೂಸಿಯಂ ಮತ್ತು ಗ್ರಂಥಾಲಯದ ಮುಖ್ಯಸ್ಥರಾಗಿದ್ದ ರಂಗರಾಜನ್ ಅವರಿಗೆ ಚಿತ್ರಹಿಂಸೆ ನೀಡಿ, ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಯಿತು. ಅವರು ರಾಜೀನಾಮೆ ನೀಡಿದ ನಂತರ ಆ ಸ್ಥಾನವು ಭರ್ತಿಯಾಗಿಲ್ಲ. ನಾನು ದಿಲ್ಲಿಗೊಮ್ಮೆ ಭೇಟಿ ನೀಡಿದಾಗ, ನೆಹರೂ ಅವರ ಈ ಸ್ಮಾರಕ ಭವನ ನೋಡಿದ್ದೆ. ಅದರಲ್ಲಿ ಮಾಜಿ ಪ್ರಧಾನಿಯ ಅಮೂಲ್ಯವಾದ ಗ್ರಂಥ ಭಂಡಾರ ಮತ್ತು ವಸ್ತುಗಳಿವೆ. ಈಗ ಮೋದಿ ಸರಕಾರ ಅದರ ಸ್ವರೂಪ ಬದಲಿಸಿ, ಅದನ್ನು ಸಂರ್ಪೂವಾಗಿ ನಾಶ ಮಾಡಲು ಹೊರಟಿದೆ.

ನೆಹರೂ ಮ್ಯೂಸಿಯಂ ನಾಶಪಡಿಸಲು ಒಂದೆಡೆ ಹುನ್ನಾರ ನಡೆದಿದ್ದರೆ, ಇನ್ನೊಂದೆಡೆ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಮತ್ತು ರಾಷ್ಟ್ರೀಯ ಪ್ರಾಚ್ಯ ವಸ್ತು ಸಂಗ್ರಹಾಲಯಗಳಿಗೆ ಮುಖ್ಯಸ್ಥರೇ ಇಲ್ಲ. ಮುಂಚೆ ಇದ್ದ ಮುಖ್ಯಸ್ಥರನ್ನು ಈಗ ತೆಗೆದು ಹಾಕಲಾಗಿದೆ. ಈಗ ಸರಕಾರಿ ಅಧಿಕಾರಿಗಳೇ ನೋಡಿಕೊಳ್ಳುತ್ತಿದ್ದಾರೆ.
ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಮುಖಸ್ಥರನ್ನು ಮರುನೇಮಿಸಲು ಕೋರಿದರೂ ಮೋದಿ ಸರಕಾರ ಒಪ್ಪುತ್ತಿಲ್ಲ.

 ಆರೆಸ್ಸೆಸ್‌ನಂತಹ ಕೋಮುವಾದಿ ಸಂಘಟನೆಗಳಲ್ಲಿ ಕಲಾವಿದರು, ಸಾಹಿತಿಗಳು ಅಥವಾ ಪ್ರತಿಭಾವಂತರು, ಸಿಗುವುದು ತುಂಬಾ ವಿರಳ. ಈ ಸಂಘಟನೆಗಳಲ್ಲಿ ಬರೀ ಭಕ್ತರೇ ತುಂಬಿರುತ್ತಾರೆ. ಅದರಂತೆ ಸಂಘ ಪರಿವಾರ ಸಾಂಸ್ಕೃತಿಕ ಕ್ಷೇತ್ರವನ್ನು ಕಬಳಿಸುವ ದುಸ್ಸಾಹಸಕ್ಕೆ ಕೈ ಹಾಕಿದರೂ ಕೂಡ ಆ ಸ್ಥಾನಕ್ಕೆ ಅರ್ಹ ಅಭ್ಯರ್ಥಿ ಸಿಗುವುದಿಲ್ಲ. ಅಂತೆಯೇ ಪುಣೆಯ ಫಿಲ್ಮ್ ಮತ್ತು ಟೆಲಿವಿಷನ್ ಸಂಸ್ಥೆಗೆ ಗಜೇಂದ್ರ ಚವಾಣ್ ಎಂಬ ಕಳಪೆ ನಟನನ್ನು ನೇಮಕ ಮಾಡಲಾಯಿತು. ಈ ನೇಮಕವನ್ನು ವಿರೋಧಿಸಿ, ಅಲ್ಲಿನ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಮಾಡಿದರು. ಒಂದು ವರ್ಷದ ನಂತರ, ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಈ ನೇಮಕವನ್ನು ರದ್ದು ಮಾಡಿ, ಅನುಪಮ್ ಖೇರ್ ಅವರನ್ನು ನೇಮಿಸಲಾಗಿದೆ. ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿಗೆ ಆಂಧ್ರಪ್ರದೇಶದ ಸುದರ್ಶನ ರಾವ್ ಎಂಬ ಕಾಲೇಜು ಉಪನ್ಯಾಸಕನೊಬ್ಬನನ್ನು ನೇಮಕ ಮಾಡಲಾಯಿತು. ಈತ ಕೂಡ ಸಂಘ ಪರಿವಾರದ ಹಿನ್ನೆಲೆಯುಳ್ಳ ವ್ಯಕ್ತಿ.

ಇಂಡಿಯನ್ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಷನ್ಸ್ ಸಂಸ್ಥೆಯ ಮುಖ್ಯಸ್ಥರಾಗಿ ನೇಮಕಗೊಂಡ ಮುಕೇಶ ಚಂದ್ರ ಎಂಬ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯನ್ನು ಪರಮಾತ್ಮನ ಅವತಾರವೆಂದು ವರ್ಣನೆ ಮಾಡಿದ. ಇನ್ನು ವಿಜ್ಞಾನ ಕಾಂಗ್ರೆಸ್ ಅವಾಂತರ ಎಲ್ಲರಿಗೂ ಗೊತ್ತಿದೆ. ಎರಡು ವರ್ಷಗಳ ಹಿಂದೆ ಮುಂಬೈಯಲ್ಲಿ ನಡೆದ ವಿಜ್ಞಾನ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ, ಮಾತನಾಡಿದ ನರೇಂದ್ರ ಮೋದಿ ಅವರು ಭಾರತದಲ್ಲಿ ಪ್ಲಾಸ್ಟಿಕ್ ಸರ್ಜರಿ ತುಂಬಾ ಹಿಂದೆಯೇ ಇತ್ತು, ಗಣಪತಿಯ ಮುಂಡಕ್ಕೆ ಆನೆಯ ರುಂಡವನ್ನು ಜೋಡಿಸುವಷ್ಟು ವೈದ್ಯಕೀಯ ವಿಜ್ಞಾನ ಮುಂದುವರಿದಿತ್ತು ಎಂದು ರೈಲು ಬಿಟ್ಟರು. ಪ್ರಧಾನಿಯೇ ರೈಲು ಬಿಟ್ಟ ನಂತರ ತಾವೇನೂ ಕಡಿಮೆ ಎಂಬಂತೆ ಸಂಘ ಪರಿವಾರದ ಕೆಲ ವಿಜ್ಞಾನಿಗಳು ವಿಮಾನ ಹಾರಾಟ ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಇತ್ತು. ಲಕ್ಷಾಂತರ ವರ್ಷಗಳ ಹಿಂದೆಯೇ ನಮ್ಮ ಋಷಿಗಳು ಗಗನನೌಕೆಯಲ್ಲಿ ಗ್ರಹದಿಂದ ಗ್ರಹಕ್ಕೆ ಸಂಚರಿಸುತ್ತಿದ್ದರು ಎಂದು ಬುರುಡೆ ಬಿಟ್ಟರು. ಇಂತಹ ಅಂತೆ ಕಂತೆಗಳನ್ನೇ ಪಠ್ಯ ಪುಸ್ತಕ ಮಾಡುವಂತೆ ಅವರು ಒತ್ತಾಯಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ ಕೂಡ ಸಂಘ ಪರಿವಾರ ಹಿಡಿತ ಸಾಧಿಸುತ್ತಲೇ ಬಂದಿದೆ. ಈ ಹಿಂದೆ ಕುತಂತ್ರ ಮಾಡಿ, ಮಿಥಿಕ್ ಸೊಸೈಟಿಯನ್ನು ವಶಪಡಿಸಿಕೊಂಡಿತು. ಗೋಖಲೆ ಸ್ಮಾರಕ ಸಂಸ್ಥೆಯನ್ನು ಕೂಡ ಕಬಳಿಸಿದೆ. ಇದೀಗ ರಾಜ್ಯ ವಿಜ್ಞಾನ ಸಂಸ್ಥೆಯನ್ನು ಸಹ ನುಂಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಶಿಕ್ಷಣ ತಜ್ಞರು, ಭೌತ ವಿಜ್ಞಾನಿಗಳು ಹಾಗೂ ಪ್ರಖರ ವಿಚಾರವಾದಿ ದಿ. ಎಚ್.ನರಸಿಂಹಯ್ಯ ಅವರಿಂದ ಸ್ಥಾಪಿಸಲ್ಪಟ್ಟ ಮತ್ತು ಇನ್ನೊಬ್ಬ ಭೌತ ವಿಜ್ಞಾನಿ ಸಿ.ಎನ್.ಆರ್.ರಾವ್ ಪೋಷಕರಾಗಿರುವ ವಿಜ್ಞಾನ ಪರಿಷತ್ತಿನ ಒಳಗೂ ಸಂಘ ಪರಿವಾರ ಸಂಚು ಪ್ರವೇಶ ಮಾಡಿದೆ. ಡಾ. ವಸುಂಧರಾ ಭೂಪತಿಯವರ ಅಧ್ಯಕ್ಷ ಅವಧಿ ಮುಗಿದ ನಂತರ ಚುನಾವಣೆ ಮೂಲಕ ಅಧಿಕಾರಕ್ಕೆ ಬಂದ ಕೋಮುವಾದಿಗಳು ವಿಜ್ಞಾನ ಪರಿಷತ್ತಿನ ಸ್ಥಾಪಿತ ಧ್ಯೆೇಯೋದ್ಧೇಶಗಳಿಗೆ ತಿಲಾಂಜಲಿ ನೀಡುವುದು ಮಾತ್ರವಲ್ಲ ಅದಕ್ಕೆ ವ್ಯತಿರಿಕ್ತವಾದ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ.

ಇತ್ತೀಚೆಗೆ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ಸಮಾವೇಶ ಇದಕ್ಕೆ ಸ್ಪಷ್ಟ ಉದಾಹರಣೆ ಆಗಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ, ವಿಜ್ಞಾನ ಮತ್ತು ತಂತ್ರಜ್ಞಾನದ ಕಡೆಗೆ ಆಕರ್ಷಿಸಬೇಕಾದ ವಿಜ್ಞಾನ ಪರಿಷತ್ ಮೌಢ್ಯವನ್ನು ವಿಜೃಂಭಿಸುವ ಕೆಲಸಕ್ಕೆ ಕೈ ಹಾಕಿದೆ. ಇದಕ್ಕೆ ಪೂರಕವಾಗಿ ಮೈಸೂರಿನಲ್ಲಿ ನಡೆದ ವಿಜ್ಞಾನ ಪರಿಷತ್ತು ವತಿಯಿಂದ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮೊದಲನೇ ಮಹಡಿಯಲ್ಲಿ ಏರ್ಪಡಿಸಲಾಗಿದ್ದ ವಸ್ತುಪ್ರದರ್ಶನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಪ್ರಾಚೀನ ಭಾರತದ ಕೊಡುಗೆಯನ್ನು ತಿಳಿಸುವ ನೆಪದಲ್ಲಿ ಹೋಮ ಮಾಡಿದರೆ ಮಳೆ ಬರುತ್ತದೆ. ಪ್ಲಾಸ್ಟಿಕ್ ಸರ್ಜರಿ ಈ ಮೊದಲೇ ಇತ್ತು. ಅದನ್ನು ಮೊದಲು ಮಾಡಿದವರು ಸುಶ್ರುತ. ದುಷ್ಟ ಪ್ರಭಾವವನ್ನು ನಿಗ್ರಹಿಸುವ ಶಕ್ತಿ ಚಿನ್ನಕ್ಕಿದೆ. ಬಂಗಾರದ ಗಣಿಗಾರಿಕೆ ಮೊದಲು ಇರುವೆಗಳಿಂದ ಆರಂಭವಾಯಿತು. ಇತ್ಯಾದಿ ಕಂದಾಚಾರದ ಕಂತೆಗಳನ್ನೇ ಈ ವಸ್ತು ಪ್ರದರ್ಶನದಲ್ಲಿ ತೋರಿಸಲಾಯಿತು. ಇದರ ಬಗ್ಗೆ ಕೆಲ ಸದಸ್ಯರು ಆಕ್ಷೇಪ ಕೂಡ ವ್ಯಕ್ತಪಡಿಸಿದರು.

ಈ ವಿಜ್ಞಾನ ಸಮಾವೇಶಕ್ಕೆ ರಾಷ್ಟ್ರೀಯ ವಿಜ್ಞಾನ ತಂತ್ರಜ್ಞಾನ ಸಲಹಾ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಗಳು ಸಹಯೋಗ ನೀಡಿವೆ. ರಾಜ್ಯ ಸರಕಾರವೂ 15 ಲಕ್ಷ ರೂ. ಅನುದಾನ ನೀಡಿತು. ವಿಜ್ಞಾನ ಪರಿಷತ್ತಿನ ಅಧ್ಯಕ್ಷರಾಗಿರುವ ಸಂಕನೂರು ಎಂಬ ಬಿಜೆಪಿ ನಾಯಕ ಸಂಘ ಪರಿವಾರದ ಆಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾನೆ.

ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗಲೂ ಕೂಡ ರಾಜ್ಯದ ಗ್ರಂಥಾಲಯಗಳಿಗೆ ರಾಷ್ಟ್ರೋತ್ಥಾನ ಪ್ರಕಾಶನದ ಪುಸ್ತಕಗಳನ್ನು ರಾಶಿರಾಶಿಯಾಗಿ ತುಂಬಿಸಲಾಯಿತು. ಈಗ ಸಿದ್ದರಾಮಯ್ಯ ಸರಕಾರ ಅದಕ್ಕೆ ಕಡಿವಾಣ ಹಾಕಿದರೂ ಸಂಘ ಪರಿವಾರದ ಒಳನುಸುಳಿಕೆ ನಿಂತಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಹೊಸತರಲ್ಲಿ ವಿಧಾನಸೌಧದ ಅಂಗಳದಲ್ಲಿ ನಡೆದ ಸ್ವಾತಂತ್ರ ದಿನದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಬಂದು ಭಾಷಣ ಮಾಡಿದ ಅವಾಂತಾರವೂ ನಡೆಯಿತು. ಮುಖ್ಯಮಂತ್ರಿಗಳಿಗೆ ಇದರ ಹಿನ್ನೆಲೆಯಲ್ಲಿರುವ ಶಕ್ತಿಗಳ ಕೈವಾಡ ಗೊತ್ತಾದ ನಂತರ ತರಾಟೆಗೆ ತೆಗೆದುಕೊಂಡರು.

ಹೀಗೆ ನಮ್ಮ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರವನ್ನು ಕಬಳಿಸಲು ಸಂಘ ಪರಿವಾರ ನಿರಂತರ ಹುನ್ನಾರ ನಡೆಸಿವೆ. ಇದನ್ನು ರಾಜಕೀಯ ಪ್ರತಿರೋಧವೊಂದರಿಂದಲೇ ತಡೆಯಲು ಸಾಧ್ಯವಿಲ್ಲ. ಈ ಸೌಹಾರ್ದ ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸಿ ಸಾಂಸ್ಕೃತಿಕ ಪ್ರತಿರೋಧ ಒಡ್ಡಬೇಕಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News