ಮಧು ಎನ್ನುವ ಆದಿವಾಸಿಗಾಗಿ ಮರುಗುವುದಕ್ಕೆ ಮುನ್ನ

Update: 2018-02-26 04:56 GMT

ಕಳೆದೆರಡು ದಿನಗಳಿಂದ ಸಾಮಾಜಿಕ ತಾಣಗಳಲ್ಲಿ, ಮಾಧ್ಯಮಗಳಲ್ಲಿ ಕೇರಳದ ಒಬ್ಬ ಆದಿವಾಸಿ ವ್ಯಕ್ತಿಯ ಹತ್ಯೆ ತೀವ್ರ ಚರ್ಚೆಗೊಳಗಾಗಿದೆ. ಈತನನ್ನು ಒಂದು ಗುಂಪು ಥಳಿಸಿ ಸ್ಥಳೀಯ ಪೊಲೀಸರಿಗೆ ಒಪ್ಪಿಸಿತ್ತು. ಆದರೆ ಅಷ್ಟರಲ್ಲಿ ಆತ ಮೃತಪಟ್ಟಿದ್ದ. ಗುಂಪುಗಳು ಮೃಗೀಯವಾಗಿ ಈತನ ಮೇಲೆ ಹಲ್ಲೆ ನಡೆಸಿದ್ದವು. ಅಂದ ಹಾಗೆ ಈತ ಮಾಡಿದ ಅಪರಾಧ ಏನು? ಅಕ್ಕಿ ಕದ್ದಿರುವುದು. ಸ್ಥಳೀಯವಾಗಿ ಆಗಾಗ ಕಳ್ಳತನ ನಡೆಸುತ್ತಿದ್ದ ಮತ್ತು ಕಾಡಿನಲ್ಲಿ ಅವಿತುಕೊಳ್ಳುತ್ತಿದ್ದ ಎಂದೆಲ್ಲ ಆರೋಪಗಳಿವೆ. ಆತನ ತಾಯಿ ಹೇಳುವಂತೆ, ಇವನು ಮಾನಸಿಕ ಅಸ್ವಸ್ಥ. ಒಬ್ಬ ಅಕ್ಕಿ ಸೇರಿದಂತೆ ಅಗತ್ಯದ ವಸ್ತುಗಳನ್ನು ಯಾಕೆ ಕದಿಯುತ್ತಾನೆ ಎನ್ನುವುದು ತಿಳಿಯದಷ್ಟು ಅನಕ್ಷರಸ್ಥರು ಕೇರಳದ ಜನರು ಅಲ್ಲ ಮತ್ತು ಆತನ ಒಟ್ಟು ಸ್ಥಿತಿಯನ್ನು ನೋಡಿದರೆ ಯಾರೂ ಹಲ್ಲೆ ನಡೆಸಲಾರರು. ಹೆಚ್ಚೆಂದರೆ ಪೊಲೀಸರಿಗೆ ಒಪ್ಪಿಸಬಹುದು. ಆದರೆ ಇಲ್ಲಿ ಅದಕ್ಕಿಂತ ಕ್ರೂರವಾದುದು ಸಂಭವಿಸಿದೆ.

ಜನರು ಆತನಿಗೆ ಹಲ್ಲೆ ನಡೆಸಿದ್ದು ಮಾತ್ರವಲ್ಲ, ಅದನ್ನು ಸಂಭ್ರಮಿಸಿದ್ದಾರೆ. ಬಂಧಿತನ ಜೊತೆಗೆ ಸೆಲ್ಫಿ ತೆಗೆದುಕೊಂಡು ವಿಕೃತವಾಗಿ ಆನಂದಿಸಿದ್ದಾರೆ. ಇವರೆಲ್ಲ ಯುವಕರು ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಒಬ್ಬನ ದಯನೀಯ ಸ್ಥಿತಿಯನ್ನು ಮನರಂಜನೆಯಾಗಿ ಬಳಸಿಕೊಳ್ಳುವಷ್ಟು ನಮ್ಮ ಸಮಾಜ ಸಂವೇದನಾಹೀನವಾಗುತ್ತಿದೆ. ಈ ಹತ್ಯೆ ಮಾಧ್ಯಮಗಳಲ್ಲಿ ಬಿರುಸಿನ ಚರ್ಚೆಗೆ ಒಳಗಾಯಿತು. ಕೇರಳ ಸರಕಾರವನ್ನು ಕೆಲವರು ಟೀಕಿಸಿದರೆ, ಮೋದಿಯ ಅಭಿವೃದ್ಧಿಯ ವಿಪರ್ಯಾಸವನ್ನು ಕೆಲವರು ಖಂಡಿಸಿದರು. ಕೆಲವರು ಈ ಘಟನೆಯನ್ನು ಮುಸ್ಲಿಮರ ತಲೆಗೆ ಕಟ್ಟಲು ಯತ್ನಿಸಿ, ಸಮಾಜ ವಿಭಜನೆಗೆ ಬಳಸಿಕೊಂಡರು. ಒಟ್ಟಿನಲ್ಲಿ ಮಧು ಎನ್ನುವ ಆದಿವಾಸಿ ಯುವಕ ದೇಶಾದ್ಯಂತ ಚರ್ಚೆಗೆ ವಸ್ತುವಾದದ್ದಂತೂ ನಿಜ. ಇಡೀ ಘಟನೆಯನ್ನು ಹಿಂಸೆ, ಕ್ರೌರ್ಯಗಳ ಕುರಿತ ವಿಶ್ಲೇಷಣೆಗೆ ಬಳಸಿಕೊಳ್ಳಲಾಗುತ್ತಿದೆಯೇ ಹೊರತು, ಇಂತಹ ಸಹಸ್ರಾರು ಮಧುಗಳು ಹಿಂದೆಯೂ ಇದ್ದರು, ಇನ್ನೂ ಇದ್ದಾರೆ ಎನ್ನುವುದನ್ನು ಚರ್ಚೆ ನಡೆಸುವವರು ಮರೆತಿದ್ದಾರೆ. ಮಧು ಸಾವಿನ ಕುರಿತಂತೆ ಇರುವ ಆಸಕ್ತಿ, ಕೇರಳದಲ್ಲಿ ಆದಿವಾಸಿಗಳು ನಡೆಸಿಕೊಂಡು ಬರುತ್ತಿರುವ ತಲೆತಲಾಂತರದ ಸಂಘರ್ಷದ ಕುರಿತಂತೆ ಇಲ್ಲ. ಉಳಿದ ಮಧುಗಳು ಚರ್ಚೆಗೆ ಬರಬೇಕಾದರೆ ಅವರೂ ಹೀಗೆಯೇ ಕೊಲ್ಲಲ್ಪಡಬೇಕು. ಅವುಗಳು ಮೊಬೈಲ್‌ಗಳಲ್ಲಿ ಚಿತ್ರೀಕರಣಗೊಳ್ಳಬೇಕು.

ಯಾರು ಈ ಮಧು? ಈತನ ಹಿನ್ನೆಲೆಯೇನು? ಇವರು ಯಾವ ಸಮುದಾಯಕ್ಕೆ ಸೇರಿದವರು? ಇವರ ಸ್ಥಿತಿಯೇಕೆ ಇಷ್ಟು ಭೀಕರವಾಗಿದೆ? ಮೊದಲಾದ ಪ್ರಶ್ನೆಗಳು ಯಾರಿಗೂ ಬೇಕಾಗಿಲ್ಲ. ಕುರುಬ ಆದಿವಾಸಿ ಸಮುದಾಯಕ್ಕೆ ಸೇರಿದ ತರುಣ ಈ ಮಧು. ಇಂತಹ ಆದಿವಾಸಿಗಳ ದಾರುಣ ಕತೆಗಳು ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇವೆ. ಕೇರಳದ ಗಡಿಭಾಗದಲ್ಲಿ ಇಂತಹ ಆದಿವಾಸಿ ಮಹಿಳೆಯರು ತಮ್ಮ ಹಸಿವನ್ನು ಇಂಗಿಸುವುದಕ್ಕಾಗಿ ಪ್ರವಾಸಿಗರ ಕಾಮವನ್ನು ತಣಿಸುವ ವೃತ್ತಿಗೆ ಇಳಿದಿರುವುದು ಕೆಲವು ವರ್ಷಗಳ ಹಿಂದೆ ಸುದ್ದಿಯಾಗಿತ್ತು. ಮದುವೆಯಾಗದೆಯೇ ಅಕ್ರಮವಾಗಿ ಗರ್ಭಧರಿಸುವ ಪ್ರಮಾಣ ಈ ಆದಿವಾಸಿಗಳಲ್ಲಿ ಹೆಚ್ಚುತ್ತಿದೆ ಎಂದು ಸಮೀಕ್ಷೆಯೊಂದು ಹೇಳಿತ್ತು. ನಗರವಾಸಿಗಳ ತೊತ್ತುಗಳಾಗಿ ಈ ಆದಿವಾಸಿಗಳು ಇಂದು ಬದುಕುತ್ತಿದ್ದಾರೆ. ಅತ್ತ ಊರೂ ಇಲ್ಲದೆ, ಕಾಡೂ ಇಲ್ಲದೆ ಅತಂತ್ರರಾಗಿದ್ದಾರೆ. ಮಧುವಿನ ಕುರಿತಂತೆ ಮಾತನಾಡುವ ಜನರಿಗೆ ಈ ಸಂಗತಿಗಳು ಬೇಡವೇ ಬೇಡ. ಅಟ್ಟಪ್ಪಾಡಿ ಎಂಬಲ್ಲಿನ ಆದಿವಾಸಿಗಳಿಗೂ ಈ ನಾಡಿನ ಕಾನೂನಿಗೂ ನಡೆಯುತ್ತಿರುವ ಸಂಘರ್ಷಕ್ಕೆ ಒಂದು ಇತಿಹಾಸವೇ ಇದೆ. ಅರಣ್ಯದೊಳಗೇ ಹುಟ್ಟಿ, ಅಲ್ಲೇ ಸ್ವಾವಲಂಬಿ ಬದುಕನ್ನು ಕಂಡುಕೊಂಡಿರುವ ಇವರನ್ನು ಅರಣ್ಯದಿಂದ ಓಡಿಸಲು ಅರಣ್ಯ ಇಲಾಖೆ ಹಲವು ವರ್ಷಗಳಿಂದ ಯತ್ನಿಸುತ್ತಿದೆ. ಇದು ಬರೇ ಅಟ್ಟಪ್ಪಾಡಿಗೆ ಸೀಮಿತವಾದ ಸಂಗತಿಯಲ್ಲ.

ಇಂದು ಈಶಾನ್ಯ ರಾಜ್ಯಗಳು ರಣರಂಗವಾಗುವುದಕ್ಕೆ ಕಾರಣವಾಗಿರುವುದು ಇದೇ ಆದಿವಾಸಿಗಳ ಸಮಸ್ಯೆ. ಬೃಹತ್ ಉದ್ದಿಮೆಗಳು ಕಾಡಿನೊಳಗೆ ಕಾಲಿಟ್ಟಿವೆ. ಅವರಿಗೆ ಸಮಸ್ಯೆಯಾಗಿರುವುದು ತಲೆತಲಾಂತರದಿಂದ ಈ ಕಾಡಿನಲ್ಲಿ ಬದುಕಿಕೊಂಡು ಬರುತ್ತಿರುವ ಆದಿವಾಸಿಗಳು. ಇವರನ್ನು ಒಕ್ಕಲೆಬ್ಬಿಸುವ ಪ್ರಯತ್ನದ ಭಾಗವಾಗಿ ಸೇನೆಗಳು ಕಾಡೊಳಗೆ ಕಾಲಿಟ್ಟವು. ಪರಿಣಾಮವಾಗಿ ಆದಿವಾಸಿಗಳು ಕೋವಿಯನ್ನು ಎತ್ತಿಕೊಂಡರು. ನಕ್ಸಲರು ಇವರನ್ನು ಬಳಸಿಕೊಂಡರು. ಕಾಡು ಮತ್ತು ನಾಡಿನ ನಡುವಿನ ಸಂಘರ್ಷ ಮುಂದುವರಿಯುತ್ತಲೇ ಇದೆ. ಉಗ್ರಗಾಮಿಗಳ ದಮನವೆಂದು ಸರಕಾರ ಹೇಳುತಿದೆಯಾದರೂ ಸೇನೆ ಕೊಂದು ಹಾಕುತ್ತಿರುವುದು ನಮ್ಮದೇ ನೆಲದ ಮಕ್ಕಳನ್ನು. ಬೀದಿಪಾಲಾಗಿರುವ ಬಹುಸಂಖ್ಯಾತ ಆದಿವಾಸಿಗಳೇ ಈ ಉಗ್ರಗಾಮಿಗಳು. ಇತ್ತೀಚೆಗೆ ಕರ್ನಾಟಕದ ಪಶ್ಚಿಮಘಟ್ಟದಲ್ಲೂ ಹೀಗೆಯೇ ಆದಿವಾಸಿಗಳನ್ನು ಬಲವಂತವಾಗಿ ಕಾಡಿನಿಂದ ಹೊರದಬ್ಬುವ ಕೆಲಸ ನಡೆಯಿತು. ಕಾಡುತ್ಪನ್ನಗಳ ಜೊತೆಗೆ ಬದುಕುವುದನ್ನು ಹೊರತು ಪಡಿಸಿ ಬೇರೆ ಬದುಕೇ ಗೊತ್ತಿಲ್ಲದ ಇವರು ಎಲ್ಲೂ ಸಲ್ಲದವರಾಗಿ ಬದುಕುವ ಸ್ಥಿತಿ ನಿರ್ಮಾಣವಾಯಿತು. ಕೇರಳದ ಅಟ್ಟಪ್ಪಾಡಿ ಕೂಡ ಇದಕ್ಕೆ ಭಿನ್ನವಾಗಿಲ್ಲ. ಹಲವು ಬಾರಿ ಪೊಲೀಸರು ಮತ್ತು ಆದಿವಾಸಿಗಳ ನಡುವೆ ತಿಕ್ಕಾಟ ನಡೆದಿದೆ.

70 ದಶಕದಲ್ಲಿ ಭೂಮಿ ಕಳೆದುಕೊಂಡ ಆದಿವಾಸಿಗಳನ್ನು ಇಲ್ಲಿನ ಸರಕಾರ ವಂಚಿಸುತ್ತಲೇ ಬಂದಿದೆ. ಈವರೆಗೂ ಸರಕಾರ ಆದಿವಾಸಿಗಳ ಬೇಡಿಕೆಯನ್ನು ಈಡೇರಿಸಿಲ್ಲ. 2001ರಲ್ಲಿ ಸುಮಾರು 30 ಆದಿವಾಸಿಗಳು ಹಸಿವಿನಿಂದ ಸತ್ತರು ಎಂದು ವರದಿಯೊಂದು ಹೇಳುತ್ತದೆ. ಇದರಿಂದ ಆಕ್ರೋಶಗೊಂಡ ಆದಿವಾಸಿಗಳು ನೇರವಾಗಿ ತಿರುವನಂತಪುರಕ್ಕೆ ದಾಳಿಯಿಟ್ಟರು. ಸರಕಾರದ ಮುಂದೆ ಧರಣಿ ನಡೆಸಿದರು. ಮಣಿದ ಸರಕಾರ ಭೂಮಿಕೊಡುವ ಭರವಸೆಯನ್ನು ನೀಡಿತು. ಆದರೆ ಬಳಿಕ ಭರವಸೆಯನ್ನು ಈಡೇರಿಸಲು ವಿಫಲವಾಯಿತು. 2003ರಲ್ಲಿ ಪೊಲೀಸರು ಮತ್ತು ಆದಿವಾಸಿಗಳ ನಡುವೆ ತಿಕ್ಕಾಟ ನಡೆದಿತ್ತು. ಈ ಸಂದರ್ಭದಲ್ಲಿ ಓರ್ವ ಆದಿವಾಸಿ ಮೃತಪಟ್ಟ ಎಂದು ಸರಕಾರ ಅಧಿಕೃತವಾಗಿ ಹೇಳಿಕೆ ನೀಡಿದೆ. ಆದರೆ ಅನಧಿಕೃತವಾಗಿ 10ಕ್ಕೂ ಅಧಿಕ ಆದಿವಾಸಿಗಳು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇದಾದ ಬಳಿಕ ಸರಕಾರ ಪುನರ್ವಸತಿ ಕೇಂದ್ರವೊಂದನ್ನು ಸ್ಥಾಪಿಸಿತು. ಇಂದು ನೂರಾರು ಆದಿವಾಸಿಗಳು ಇಲ್ಲಿ ನೆಲೆಸಿದ್ದಾರೆ. ಆದರೆ ಅಪೌಷ್ಟಿಕತೆ, ಅನಾರೋಗ್ಯ ಇತ್ಯಾದಿಗಳ ಜೊತೆಗೆ ಬಾಳುತ್ತಿದ್ದಾರೆ. ಇದೇ ಕಾಲನಿಯಿಂದ ತಪ್ಪಿಸಿಕೊಂಡು ನಾಡಿನ ಜನರ ಕೈಗೆ ಸಿಕ್ಕು ಹತ್ಯೆಗೊಳಗಾದವನು ಮಧು. ಅಂದರೆ ಮಧು ಎನ್ನುವ ಆದಿವಾಸಿಯ ಹತ್ಯೆಯನ್ನು ಒಂದು ಪ್ರತ್ಯೇಕವಾದ ಘಟನೆಯಾಗಿ ನೋಡುವುದೇ ತಪ್ಪು.

  ಮಧುವಿನ ಸಾವಿನ ಕುರಿತಂತೆ ಮಾತನಾಡುವವರು ಮೊತ್ತ ಮೊದಲಾಗಿ ಕೇರಳವೂ ಸೇರಿದಂತೆ ಈ ದೇಶದ ಆದಿವಾಸಿಗಳ ಇಂದಿನ ಸ್ಥಿತಿಗತಿಯ ಕಡೆಗೆ ಗಮನ ಹರಿಸಬೇಕಾಗಿದೆ. ಮಾಧ್ಯಮಗಳ ಕಣ್ಣಿಗೆ ಸಿಗದೆ ನೂರಾರು ಮಧುಗಳು ಹಸಿವಿನಿಂದ, ರೋಗದಿಂದ ಸಾಯುತ್ತಿದ್ದಾರೆ. ಕೆಲವೊಮ್ಮೆ ಪೊಲೀಸರ ಬರ್ಬರ ದೌರ್ಜನ್ಯಕ್ಕೂ ಬಲಿಯಾಗುತ್ತಿದ್ದಾರೆ. ನಮ್ಮ ಆಕ್ರೋಶ, ನೋವು, ಕಣ್ಣೀರು ಈ ಕಡೆಗೆ ತಿರುಗಬೇಕಾಗಿದೆ. ಇಲ್ಲವಾದರೆ ನಮ್ಮ ಆಕ್ರೋಶ, ಅನುಕಂಪದ ಮಾತುಗಳೂ ‘ಸೆಲ್ಫಿ’ ಎನ್ನುವ ಕ್ರೌರ್ಯದ ಮುಂದುವರಿದ ಭಾಗವಾಗಿ ಬಿಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News