ಮೇಘಾಲಯ, ನಾಗಾಲ್ಯಾಂಡ್‌ನಲ್ಲಿ ಅಸೆಂಬ್ಲಿ ಚುನಾವಣೆ ಆರಂಭ

Update: 2018-02-27 07:43 GMT

ಹೊಸದಿಲ್ಲಿ, ಫೆ.27: ಮೇಘಾಲಯ ಹಾಗೂ ನಾಗಾಲ್ಯಾಂಡ್‌ನಲ್ಲಿ ಅತ್ಯಂತ ಬಿಗಿ ಭದ್ರತೆಯಲ್ಲಿ ವಿಧಾನಸಭಾ ಚುನಾವಣೆ ಮಂಗಳವಾರ ಬೆಳಗ್ಗೆ ಆರಂಭವಾಗಿದೆ.

ಎರಡು ರಾಜ್ಯಗಳಲ್ಲಿ ತಲಾ 60 ಅಸೆಂಬ್ಲಿ ಕ್ಷೇತ್ರಗಳಿವೆ. ಎರಡೂ ರಾಜ್ಯಗಳ 59 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಮಣಿಪುರ ಹಾಗೂ ಅಸ್ಸಾಂನಲ್ಲಿ ಸತತ ಜಯ ಸಾಧಿಸಿರುವ ಬಿಜೆಪಿ, ಮೇಘಾಲಯ ಹಾಗೂ ನಾಗಾಲ್ಯಾಂಡ್‌ನಲ್ಲಿ ಜಯ ಸಾಧಿಸಿ ದೇಶದ ಈಶಾನ್ಯ ಭಾಗದಲ್ಲಿ ಕ್ಲೀನ್‌ಸ್ವೀಪ್ ಸಾಧಿಸುವ ವಿಶ್ವಾಸದಲ್ಲಿದೆ. ಇದೇ ವೇಳೆ, ಕಾಂಗ್ರೆಸ್ ಈಶಾನ್ಯ ರಾಜ್ಯಗಳಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಳ್ಳಲು ಎದುರುನೋಡುತ್ತಿದೆ.

ಫೆ.18 ರಂದು ತ್ರಿಪುರಾದಲ್ಲಿ ನಡೆದ ಅಸೆಂಬ್ಲಿ ಚುನಾವಣೆ ಹಾಗೂ ಈ ಎರಡು ರಾಜ್ಯಗಳ ಚುನಾವಣೆಯ ಮತ ಎಣಿಕೆಯು ಶನಿವಾರದಂದು ನಡೆಯಲಿದೆ. ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆಗೆ ಕೊನೆಗೊಳ್ಳಲಿದೆ.

ಮೇಘಾಲಯದಲ್ಲಿ 370 ಅಭ್ಯರ್ಥಿಗಳು ಕಣದಲ್ಲಿದ್ದು, 18.4 ಲಕ್ಷ ಮತದಾರರು ರಾಜ್ಯದ 3,083 ಮತಗಟ್ಟೆಗಳಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ.

ಮೇಘಾಲಯದಲ್ಲಿ ಚುನಾವಣಾ ಭದ್ರತೆಗಾಗಿ 106 ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಹಾಗೂ ರಾಜ್ಯ ಸಶಸ್ತ್ರ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

ನಾಗಾಲ್ಯಾಂಡ್‌ನಲ್ಲಿ 60 ಸದಸ್ಯರ ಅಸೆಂಬ್ಲಿ ಕ್ಷೇತ್ರಗಳಲ್ಲಿ 2,156 ಮತಗಟ್ಟೆಗಳಿವೆ. ಒಟ್ಟು 11,91,513 ಮತದಾರರಿದ್ದಾರೆ. ನ್ಯಾಶನಲಿಸ್ಟ್ ಡೆಮೊಕ್ರಾಟಿಕ್ ಪೀಪಲ್ಸ್ ಪಾರ್ಟಿಯ ಮುಖ್ಯಸ್ಥ ನೇಫು ರಿಯೊ ಅವಿರೋಧವಾಗಿ ಆಯ್ಕೆಯಾಗಿರುವ ಕಾರಣ ರಾಜ್ಯದ 59 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News