ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ; ಕೋರೆ-ಸ್ಟೋನ್ ಕ್ರಷರ್ ಮಾಲಕರ ಎಚ್ಚರಿಕೆ

Update: 2018-02-28 13:39 GMT

ಬೆಂಗಳೂರು, ಫೆ.28: ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ ಕೋರೆ ಮತ್ತು ಸ್ಟೋನ್ ಕ್ರಷರ್ಸ್‌ ಓನರ್ಸ್‌ ಅಸೋಯೇಷನ್ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಲ್ಲಿ ಕಲ್ಲು ಸುರಿದು ಪ್ರತಿಭಟನೆ ಮಾಡಲಾಗುವುದು ಎಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್‌ ಓನರ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷ ಸಂಜೀವ ಹಟ್ಟಿಹೊಳೆ ಎಚ್ಚರಿಕೆ ನೀಡಿದ್ದಾರೆ.

ನಗರದ ಮೌರ್ಯ ಸರ್ಕಲ್ ಮುಂಭಾಗ ಸಾಂಕೇತಿಕವಾಗಿ ರಸ್ತೆಗಳಿಗೆ ಜಲ್ಲಿ ಕಲ್ಲು ಸುರಿದು ಪ್ರತಿಭಟನೆ ನಡೆಸಿ, ಅವೈಜ್ಞಾನಿಕ ಕಾನೂನು ತಂದು ಕೋರೆ ಮಾಲಕರಿಗೆ ಲೈಸೆನ್ಸ್ ನವೀಕರಣ ಮಾಡಿಕೊಡುವುದಕ್ಕೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ವಿನಾಕಾರಣ ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದೊಂದು ವಾರದಿಂದ ರಾಜ್ಯಾಧ್ಯಂತ ಜಲ್ಲಿ ಕಲ್ಲು ಹಾಗೂ ಕ್ರಷರ್‌ಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ, ಇದುವರೆಗೂ ನಮ್ಮ ಯಾವುದೇ ಬೇಡಿಕೆಗಳಿಗೂ ರಾಜ್ಯಸರಕಾರ ಕನಿಷ್ಠ ಸ್ಪಂದಿಸುವ ಕಾರ್ಯವನ್ನು ಮಾಡಿಲ್ಲದಿರುವುದು ಬಹಳ ನೋವಿನ ಸಂಗತಿಯಾಗಿದೆ. ಸಂಪುಟ ಸಭೆಯಲ್ಲಿ ಈಗಾಗಲೇ ಅನುಮತಿ ಪಡೆದಿರುವ ನಿಯಮಗಳನ್ನು ಜಾರಿಗೊಳಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಲಾರಿ ಮಾಲಕರ ಸಂಘದ ಅಧ್ಯಕ್ಷ ಎಂ.ಷಣ್ಮಖಪ್ಪ ಮಾತನಾಡಿ, ರಾಜ್ಯದ ಸುಮಾರು 2 ಲಕ್ಷ ಟಿಪ್ಪರ್‌ಗಳು ಕೆಲಸ ಇಲ್ಲದೆ ನಿಂತಿವೆ. ಲಕ್ಷಾಂತರ ಜನ ಕಾರ್ಮಿಕರ ಜೀವನ ನಿರ್ವಹಣೆ ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮುಂದಿನ 48 ಗಂಟೆಗಳಲ್ಲಿ ಜಲ್ಲಿ ಕಲ್ಲು ಹಾಗೂ ಕ್ರಷರ್ ಮಾಲಕರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದಲ್ಲಿ ಹೈವೇಗಳು ಹಾಗೂ ರಸ್ತೆಗಳ ಮೇಲೆ ಲಾರಿಗಳನ್ನು ನಿಲ್ಲಿಸುವ ಮೂಲಕ ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.

ಬೇಡಿಕೆಗಳು
-8(6)ರ ಕೆಎಂಎಂಸಿಆರ್ 1994ರ ಕಾನೂನು ನಡಾವಳಿಗಳನ್ನು ಕೂಡಲೆ ಅನುಷ್ಠಾನಕ್ಕೆ ತರಬೇಕು.
-ಅನಧಿಕೃತ ದಂಡ ವಿಧಿಸುವ ಕ್ರಮವನ್ನು ರದ್ದು ಪಡಿಸಬೇಕು.
-ಕಂದಾಯ ಜಮೀನು ಮತ್ತು ಪಟ್ಟಾ ಜಮೀನುಗಳ ಲೈಸನ್ಸ್‌ಗಳನ್ನು 12-8-2016ರ ರೂಲ್ 8(6)ಪ್ರಕಾರ ಅನುಮತಿ ನೀಡಬೇಕು.
-ಕೆಎಂಎಂಸಿಆರ್ 1994ರ ಪ್ರಕಾರವಾಗಿ ಕಲ್ಲು ಗಣಿಗಳಿಗೆ ಕಾನೂನು ಸಡಿಲಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News