ಹೋಳಿ ಆಚರಣೆಗೆ ಅಡ್ಡಿಯಾಗದಿರಲು ಶುಕ್ರವಾರದ ನಮಾಝ್ ಸಮಯ ಮುಂದೂಡಿದ ಮುಸ್ಲಿಮರು

Update: 2018-02-28 14:18 GMT

ಲಕ್ನೋ, ಫೆ.28: ಹಿಂದೂಗಳ ಹೋಳಿ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಮುಂದಿನ ಶುಕ್ರವಾರದ (ಮಾರ್ಚ್ 2) ನಮಾಝ್ ಸಮಯವನ್ನು ಮುಂದೂಡಲು ನಗರದ ಎಲ್ಲ ಮಸೀದಿಗಳಿಗೆ ಐಷ್‍ಬಾಗ್ ಈದ್ಗಾದ ಇಮಾಮ್ ಸೂಚನೆ ನೀಡುವ ಮೂಲಕ ಕೋಮು ಸಾಮರಸ್ಯಕ್ಕೆ ಹೊಸ ಭಾಷ್ಯ ಬರೆದಿದ್ದಾರೆ.

"ಬಣ್ಣಗಳ ಹಬ್ಬ ಈ ಬಾರಿ ಶುಕ್ರವಾರ ಬಂದಿದೆ. ಆದ್ದರಿಂದ ಶುಕ್ರವಾರದ ನಮಾಝ್ ಸಮಯವನ್ನು ಮುಂದೂಡಲು ಎಲ್ಲ ಮಸೀದಿಗಳಿಗೆ ಕೇಳಿಕೊಂಡಿದ್ದೇವೆ. ಮಧ್ಯಾಹ್ನ 12ರಿಂದ 1 ಗಂಟೆಯ ವೇಳೆಯಲ್ಲಿ ಹೋಳಿ ಹಬ್ಬದ ಆಚರಣೆ ಉತ್ತುಂಗಕ್ಕೇರುತ್ತದೆ. ಇದೇ ಸಮಯದಲ್ಲಿ ನಮಾಝ್ ಕೂಡಾ ನಡೆಯುತ್ತದೆ. ಇದನ್ನು ತಪ್ಪಿಸಲು ನಮಾಝ್ ಸಮಯ ಮುಂದೂಡುವಂತೆ ಸೂಚಿಸಿದ್ದೇವೆ" ಎಂದು ಸುನ್ನಿ ಧರ್ಮಗುರು ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿ ಹೇಳಿದ್ದಾರೆ.

ಈಗಾಗಲೇ ಐಷ್‍ಬಾಗ್‍ನಲ್ಲಿ ಶುಕ್ರವಾರದ ಪ್ರಾರ್ಥನೆಯ ಸಮಯವನ್ನು 12:45ರಿಂದ 1:45ರ ವರೆಗೆ ನಿಗದಿಪಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ನಮ್ಮ ಹಿಂದೂ ಸಹೋದರರಿಗೆ ಈ ಹಬ್ಬ ವರ್ಷಕ್ಕೆ ಒಂದು ಬಾರಿ ಮಾತ್ರ ಬರುತ್ತದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಆದ್ದರಿಂದ ಹಿಂದೂ ಸಹೋದರರು ಹೋಳಿ ಓಕುಳಿಯಾಡಲು ಮತ್ತು ನಾವು ಕೂಡಾ ನಮಾಝ್ ಮಾಡಲು ಅವಕಾಶವಾಗಬೇಕು ಎಂಬ ದೃಷ್ಟಿಯಿಂದ ನಮಾಝ್ ಸಮಯವನ್ನು ಬದಲಾಯಿಸಲಾಗಿದೆ. ನಾನು ಈಗಾಗಲೇ ಹಲವು ಮಸೀದಿಗಳ ಮುಖ್ಯಸ್ಥರೊಂದಿಗೆ ಮಾತನಾಡಿದ್ದು, ಇದಕ್ಕೆ ಒಪ್ಪಿಕೊಂಡಿದ್ದಾರೆ. ನಮ್ಮ ಸಮುದಾಯದಿಂದ ಸರಿಯಾದ ಸಂದೇಶ ರವಾನೆಯಾಗಬೇಕು ಎನ್ನುವುದು ನಮ್ಮ ಬಯಕೆ" ಎಂದು ಮಹಾಲಿ ಹೇಳಿದ್ದಾರೆ. ಹೋಳಿ ಹಬ್ಬಕ್ಕಾಗಿ ಶುಕ್ರವಾರದ ನಮಾಜ್ ಸಮಯ ಬದಲಾಯಿಸುವುದು ಇದೇ ಮೊದಲು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಬ್ಬದ ಸಂದರ್ಭದಲ್ಲಿ ಶಾಂತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಾರ್ಚ್ 1 ಹಾಗೂ 2ರಂದು ನಿರಂತರ ವಿದ್ಯುತ್ ಪೂರೈಕೆಗೆ ಮತ್ತು ಸಮರ್ಪಕ ನೀರು ಸರಬರಾಜಿಗೆ ಕ್ರಮ ಕೈಗೊಳ್ಳುವಂತೆಯೂ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News