ಬೆಂಗಳೂರು: 27ರ ಯುವಕನ ಹೃದಯ 46ರ ಮಹಿಳೆಗೆ ಯಶಸ್ವಿ ಜೋಡಣೆ

Update: 2018-02-28 18:23 GMT

ಬೆಂಗಳೂರು, ಫೆ.28: ರಸ್ತೆ ಅಪಘಾತದಿಂದ ಮೆದುಳು ನಿಷ್ಟ್ರಿಯಗೊಂಡಿರುವ ಯುವಕನ ಹೃದಯವನ್ನು ದಾವಣಗೆರೆಯ 46 ವರ್ಷದ ಮಹಿಳೆಗೆ ಹೃದಯ ಕಸಿ ಮಾಡುವಲ್ಲಿ ಎಂ.ಎಸ್.ರಾಮಯ್ಯದಲ್ಲಿರುವ ನಾರಾಯಣ ಹಾರ್ಟ್ ಸೆಂಟರ್‌ನ ವೈದ್ಯರು ಯಶಸ್ವಿಯಾಗಿದ್ದಾರೆ.

ಕೃಷ್ಣಗಿರಿ ಜಿಲ್ಲೆಯ, ಸಾತನೂರು ಗ್ರಾಮದ 27ವರ್ಷದ ಯುವಕ ಫೆ.26ರಂದು ಅಪಘಾತಕ್ಕೊಳಗಾಗಿ, ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಯುವಕನಿಗೆ ಈ ಮೊದಲೆ ತಲೆಯಲ್ಲಿ ಗಾಯಗಳಾಗಿದ್ದು, ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದರು.

ಅಂಗಾಂಗ ದಾನಕ್ಕೆ ಯುವಕನ ಮನೆಯವರು ಒಪ್ಪಿಗೆ ಸೂಚಿಸಿದ ನಂತರ ಫೆ.28 ರಂದು ಬೆಳಗಿನ ಜಾವ ಸಿಗ್ನಲ್ ಮುಕ್ತ ಸಂಚಾರದಿಂದ ಮುನಿಕೃಷ್ಣರವರ ಹೃದಯವನ್ನು ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಿಂದ, ಬಿಇಎಲ್ ರಸ್ತೆಯಲ್ಲಿರುವ ಎಂ.ಎಸ್.ರಾಮಯ್ಯದಲ್ಲಿರುವ ನಾರಾಯಣ ಹಾರ್ಟ್ ಸೆಂಟರ್‌ಗೆ ಆಂಬುಲೆನ್ಸ್ ಮೂಲಕ ರವಾನಿಸಲಾಯಿತು.

ಯುವಕನ ಹೃದಯವನ್ನು ಕಳೆದ 3ವರ್ಷಗಳಿಂದ ಹೃದಯ ವೈಫಲ್ಯದಿಂದ ಬಳಲುತ್ತಿದ್ದ ಮಹಿಳೆಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡುವಲ್ಲಿ ನಾರಾಯಣ ಹಾರ್ಟ್ ಸೆಂಟರ್ ಹಿರಿಯ ಕನ್ಸಲ್ಟೆಂಟ್ ಡಾ.ಎಂ.ನಾಗಮಲ್ಲೇಶ್, ಹೃದಯ ಕಸಿ ವಿಭಾಗದ ಡಾ. ಶಂಕರ್ ಶೆಟ್ಟಿ ಮತ್ತಿತರ ವೈದ್ಯರು ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News