ಬೆಂಗಳೂರು: ಬಿಬಿಎಂಪಿಯಿಂದ 9326.87 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ

Update: 2018-02-28 14:32 GMT

ಬೆಂಗಳೂರು, ಫೆ. 28: ಬಡವರು, ಮಧ್ಯಮವರ್ಗ ಮತ್ತು ಹಿಂದುಳಿದ ವರ್ಗದವರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಆರೋಗ್ಯ, ಶಿಕ್ಷಣ, ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಿ 9326.87 ಕೋಟಿ ರೂಪಾಯಿ ಗಾತ್ರದ ಬಿಬಿಎಂಪಿ ಬಜೆಟ್ ಮಂಡಿಸಲಾಗಿದೆ.

ಬುಧವಾರ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್ ಮೊದಲ ಬಾರಿಗೆ 9326.87 ಕೋಟಿ ರೂ. ಗಾತ್ರದ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದರು. ರಾಜ್ಯ ಸರಕಾರದ 3343.42 ಹಾಗೂ ಕೇಂದ್ರ ಸರಕಾರದ 306.87 ಕೋಟಿ ರೂ.ಗಳ ಅನುದಾನ ಸೇರಿದಂತೆ ಪಾಲಿಕೆಯ ಉಳಿದ ಬಾಬ್ತಿನಿಂದ 9326.87 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದ್ದು, 9325.53 ಕೋಟಿ ಖರ್ಚಿನ ಉಳಿತಾಯದ ಬಜೆಟ್ ಇದಾಗಿದೆ.

ಪೌರ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಬಿಸಿಯೂಟ, ಸುರಕ್ಷಿತ ಸಾಧನಗಳ ಕಿಟ್ ವಿತರಣೆ, ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ವಸತಿ ಸಮುಚ್ಚಯ, ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್ ಸಂಖ್ಯೆ ಜೋಡಣೆ, ಒಂಟಿ ಮನೆಗಳಿಗೆ ನೀಡುವ ಆರ್ಥಿಕ ಸಹಾಯ ಧನ 4 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಿರುವುದು ಈ ಬಜೆಟ್‌ನಲ್ಲಿ ವಿಶೇಷವಾಗಿದೆ.

ಪುಲಿಕೇಶಿನಗರ, ವಿಜಯನಗರ, ಜಯನಗರ, ಸರ್ವಜ್ಞನಗರ, ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆಗೆ 15 ಕೊಟಿ ರೂ.ಹಾಗೂ ಇಂದಿರಾ ಕ್ಯಾಂಟೀನ್‌ನಲ್ಲಿ ಜನೌಷಧ ಮಳಿಗೆ. ಗರ್ಭಿಣಿಯರಿಗೆ ಕಬ್ಬಿಣಾಂಶದ ಬಿಸ್ಕತ್ ವಿತರಣೆ, ಬಡ ಹೃದಯ ರೋಗಿಗಳಿಗೆ ನೀಡುವ ಉಚಿತ ಸ್ಟಂಟ್ ಅಳವಡಿಸುವ ಕಾರ್ಯಕ್ರಮ ಮುಂದುವರಿಸಲಾಗುತ್ತದೆ.

5 ಕೋಟಿ ರೂ. ವೆಚ್ಚದಲ್ಲಿ 5 ಕಲಾಭವನ ನಿರ್ಮಾಣ. ಆಡೋಣ ಬಾ ಅಂಗಳದಲ್ಲಿ ಕಾರ್ಯಕ್ರಮದಡಿ ಪ್ರತಿ ವಾರ್ಡ್‌ಗೆ 1 ಲಕ್ಷ ಅನುದಾನ, ಹಾಕಿ ಆಟಗಾರ ಧ್ಯಾನ್‌ಚಂದ್, ವೀರಯೋಧರಾದ ಸಂದೀಪ್ ಉನ್ನಿಕೃಷ್ಣನ್, ಮೇಜರ್ ಅಕ್ಷಯ್ ಗಿರೀಶ್‌ಕುಮಾರ್ ಪ್ರತಿಮೆ ಸ್ಥಾಪನೆ, 2 ಕೋಟಿ ರೂ. ವೆಚ್ಚದಲ್ಲಿ ಮೀಡಿಯಾ ಕೇಂದ್ರ ಸ್ಥಾಪನೆ.

ಶೆಟ್ಟಿಹಳ್ಳಿ ಮತ್ತು ಬಿಂಗಿಪುರ ಗ್ರಾಮದಲ್ಲಿ ದೊಡ್ಡಿ ನಿರ್ಮಾಣ, ಬೆಳ್ಳಳ್ಳಿ ವ್ಯಾಪ್ತಿಯ ಘನತ್ಯಾಜ್ಯ ಕ್ವಾರಿಯಲ್ಲಿ ರೇಸ್‌ಟ್ರಾಕ್ 2 ಕೋಟಿ, ಕನ್ನಹಳ್ಳಿ, ಮಾವಳ್ಳಿಪುರದಲ್ಲಿ ಕಸದಿಂದ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ 100 ಕೋಟಿ ಮೀಸಲಿರಿಸಲಾಗಿದೆ.

ಖಾಸಗಿ ಸಹಭಾಗಿತ್ವದಲ್ಲಿ ಹಡ್ಸನ್ ವೃತ್ತದಲ್ಲಿ ಇಂಜಿನಿಯರ್ ವುಡ್ ಉಪಯೋಗಿಸಿ ಅತಿ ಹೆಚ್ಚು ಉದ್ದದ 5 ಮಾರ್ಗಗಳನ್ನೊಳಗೊಂಡಿರುವ ಪಾದಚಾರಿ ಸ್ಕೈವಾಕ್ ನಿರ್ಮಾಣ, 1 ಸಾವಿರ ಸಾರ್ವಜನಿಕ ಶೌಚಾಲಯ ಹಾಗೂ ಇ-ಟಾಯ್ಲೆಟ್ ನಿರ್ಮಾಣ.

8 ವಲಯಗಳ ವ್ಯಾಪ್ತಿಯಲ್ಲಿ ತಲಾ ಒಂದು ಹೆಲಿಪ್ಯಾಡ್ ನಿರ್ಮಿಸಲು 5 ಕೋಟಿ, ಪ್ರತಿ ವಾರ್ಡ್ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ 30 ಕೋಟಿ, ಕನ್ನಡಮಯ ಬಸ್ ನಿಲ್ದಾಣಕ್ಕೆ 5 ಕೋಟಿ, ಅಗತ್ಯವಿರುವ ಕಡೆ ಅಗಸರಕಟ್ಟೆ ನಿರ್ಮಿಸಲು 1 ಕೋಟಿ, ತುರ್ತು ಚಿಕಿತ್ಸೆ ಸಂಬಂಧ 3 ಹೊಸ ಆ್ಯಂಬುಲೆನ್ಸ್ ಖರೀದಿಸಲು 1 ಕೋಟಿ ಮೀಸಲಿರಿಸಲಾಗಿದೆ


150 ಕಿಲೋಮೀಟರ್ ಉದ್ದದ ರಸ್ತೆಗಳನ್ನು ವೈಟ್ ಟಾಪಿಂಗ್, 150ಕಿಮೀ ಉದ್ದದ ನೀರು ಕಾಲುವೆ ಅಭಿವೃದ್ಧಿ, 250ಕಿಮೀ ಉದ್ದದ ಪಾದಚಾರಿ ಮಾರ್ಗ ಅಭಿವೃದ್ಧಿ, 110 ಹಳ್ಳಿಗಳ ರಸ್ತೆ ಅಭಿವೃದ್ಧಿ, ಐಟಿಪಿಎಲ್‌ಗೆ ಪರ್ಯಾಯ ಸಂಪರ್ಕ ಕಲ್ಪಿಸುವ 14 ರಸ್ತೆಗಳ ಅಭಿವೃದ್ಧಿ, ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಎನ್‌ಎಎಲ್ ವಿಂಡ್ ಟನಲ್ ರಸ್ತೆ ನಿರ್ಮಾಣ, ಸ್ಮಾರ್ಟ್ ಸಿಟಿ ಅನುಷ್ಠಾನಕ್ಕೆ 500 ಕೋಟಿ ರೂ.ಗಳ ಕ್ರಿಯಾಯೋಜನೆ, 25 ರಸ್ತೆಗಳ ಟೆಂಡರ್ ಶ್ಯೂರ್ ಮಾದರಿ ಅಭಿವೃದ್ಧಿ. ಮಳೆನೀರು ಕೊಯ್ಲು ಪದ್ಧತಿ ಅಳವಡಿಸಲು 12 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಅದೇ ರೀತಿ ಪ್ರತಿ ವಾರ್ಡ್‌ಗಳಲ್ಲಿ 200 ಸಸಿಗಳನ್ನು ನೆಡಲು ಮತ್ತು ಸಸ್ಯಕ್ಷೇತ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಬಸವಲಿಂಗಪ್ಪಸಮಾಧಿ ಜೀರ್ಣೋದ್ಧಾರಕ್ಕೆ 50 ಲಕ್ಷ ಮೀಸಲು, ಕೌಶಲ್ಯಾಭಿವೃದ್ಧಿ ತರಬೇತಿಗೆ 5 ಕೋಟಿ ರೂ. ಮೀಸಲು, ಹಿರಿಯ ನಾಗರಿಕರ ಕಲ್ಯಾಣಕ್ಕೆ 3 ಕೋಟಿ ರೂ. ತೃತೀಯ ಲಿಂಗಿಗಳ ಕಲ್ಯಾಣಕ್ಕೆ 1 ಕೋಟಿ, ಶವ ರಕ್ಷಣೆಗೆ ಬಾಡಿಗೆ ರಹಿತ 40 ಫ್ರೀಜರ್ ಒದಗಿಸಲು 2 ಕೋಟಿ ಅನುದಾನ, ನಿರಾಶ್ರಿತರ ತಂಗುದಾಣಗಳ ಉನ್ನತೀಕರಣಕ್ಕೆ 2.5 ಕೋಟಿ, ಮೀಸಲಿಡುವುದು ಸೇರಿದಂತೆ ಪ್ರತಿ ವಾರ್ಡ್‌ಗೆ ಹೊಲಿಗೆ ಯಂತ್ರ ಮತ್ತು ಸೈಕಲ್ ವಿತರಿಸಲಾಗುವುದು.

ಎಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಶಾಲಾ ಆವರಣಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಗೆ 5 ಕೋಟಿ ರೂ., ಮಹಾಪೌರರು ಮತ್ತು ಆಯುಕ್ತರ ಭವನ ನಿರ್ಮಿಸಲು 5 ಕೋಟಿ ರೂ.ಪಾಲಿಕೆ ಸದಸ್ಯರ ವೈದ್ಯಕೀಯ ಅನುದಾನ 4 ಲಕ್ಷದಿಂದ 6 ಲಕ್ಷಕ್ಕೆ ಹೆಚ್ಚಳ, ವೈದ್ಯಕೀಯ ಅನುದಾನಕ್ಕೆ ಆಧಾರ್ ಸಂಖ್ಯೆ ಕಡ್ಡಾಯ, ಪಾಲಿಕೆಯ ಎಲ್ಲ ಸದಸ್ಯರಿಗೆ ಟ್ಯಾಬ್ ವಿತರಣೆ.

ವಿದೇಶ, ಹೊರ ರಾಜ್ಯಗಳ ಅತಿಥಿಗಳ ಉಪಚಾರಕ್ಕೆ 60 ಲಕ್ಷ ಮೀಸಲು, ಪಾಲಿಕೆಯ ಎಲ್ಲ ಸಿಬ್ಬಂದಿಗೆ ಕೌಶಲ್ಯ ತರಬೇತಿ, ಕಂದಾಯ ಸೋರಿಕೆ ತಡೆಗಟ್ಟಲು ಕಂದಾಯ ಜಾಗೃತ ದಳ ಸ್ಥಾಪನೆ, ಸೈನಿಕರು ವಾಸಿಸುವ ವಾಸದ ವಸತಿ ಕಟ್ಟಡಕ್ಕೆ ಶೇ.100ರಷ್ಟು ವಿನಾಯಿತಿ ನೀಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಬಜೆಟ್ ಪ್ರಮುಖಾಂಶಗಳು
* ತೃತೀಯ ಲಿಂಗಿಗಳ ಕಲ್ಯಾಣಕ್ಕೆ 1 ಕೋಟಿ ರೂ.
* ಶವ ರಕ್ಷಣೆಗೆ ಬಾಡಿಗೆರಹಿತ 40 ಫ್ರೀಜರ್ ಒದಗಿಸಲು 2 ಕೋಟಿ ರೂ. ಮೀಸಲು
* ಹೆಣ್ಣುಮಕ್ಕಳ ಶುಚಿತ್ವಕ್ಕಾಗಿ ಸ್ಯಾನಿಟರಿ ಇನ್ಸಿನೇಟರ್ ಯಂತ್ರ ಅಳವಡಿಕೆ
* ಪಾಲಿಕೆ ಹೆರಿಗೆ ಆಸ್ಪತ್ರೆಯಲ್ಲಿ ಜನಿಸಿದ ವರ್ಷದ ಮೊದಲ ಹೆಣ್ಣು ಮಗುವಿಗೆ ಪಿಂಕ್ ಬೇಬಿಗೆ 5 ಲಕ್ಷ ಠೇವಣಿ
* ಇಂದಿರಾ ಕ್ಯಾಂಟೀನ್‌ಲ್ಲಿ ಜನೌಷಧ ಕೇಂದ್ರ
* ಸೈನಿಕರು ವಾಸದ ವಸತಿಕಟ್ಟಡಕ್ಕೆ ಶೇ.100 ವಿನಾಯಿತಿಗೆ ಸರಕಾರಕ್ಕೆ ಪ್ರಸ್ತಾವನೆ
* ನಗರದ 400 ಸ್ಥಳಗಳಲ್ಲಿ ಉಚಿತ ವೈಫೈ
* ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಪತ್ರಕರ್ತರಿಗೆ ಆರೋಗ್ಯ ವಿಮೆ
* ಕೈಗಾರಿಕೆ ಶೆಡ್‌ಗಳಲ್ಲಿ ಕಸ ಸಂಸ್ಕರಣಾ ಘಟಕ ಸ್ಥಾಪನೆ
* ಚರಂಡಿ ಕಾಮಗಾರಿಗಳಲ್ಲಿ ಮಳೆನೀರು ಇಂಗುಗುಂಡಿ ನಿರ್ಮಾಣ
* ಉದ್ಯಾನಗಳಲ್ಲಿ ಸಾಹಿತಿಗಳ ವ್ಯಕ್ತಿ ಪರಿಚಯ, ಹಿತೋಕ್ತಿಗಳ ಫಲಕ ಅಳವಡಿಕೆ
* ಓಎಫ್‌ಸಿ ಶುಲ್ಕದಿಂದ 200 ಕೋಟಿ ರೂ. ಸಂಗ್ರಹ ಗುರಿ
* ನಗರ ಯೋಜನಾ ವಿಭಾಗದಿಂದ 768 ಕೋಟಿ ರೂ. ಸಂಗ್ರಹ ಗುರಿ
* ಕೇಂದ್ರ ಸರಕಾರದ ಅನುದಾನ 306.87 ಕೋಟಿ ರೂ.
* ಪಾಲಿಕೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಪಿಂಚಣಿಗೆ ಆಧಾರ್ ಜೋಡಣೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News