ಬಿಪಿಎಲ್ ಕುಟುಂಬಗಳಿಗೆ ಉಚಿತ, ಎಪಿಎಲ್ ಕುಟುಂಬಗಳಿಗೆ ಶೇ.30ರಷ್ಟು ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ: ಸಿದ್ದರಾಮಯ್ಯ

Update: 2018-03-02 16:18 GMT

ಬೆಂಗಳೂರು, ಮಾ.2: ರಾಜ್ಯ ಜನತೆ ಆರೋಗ್ಯವಾಗಿದ್ದರೆ ಮಾತ್ರ ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರದ ಉತ್ಪಾದನೆ ಹೆಚ್ಚಳವಾಗುತ್ತದೆ. ಹೀಗಾಗಿ ಶ್ರೀಮಂತರಿಗೆ ಸಿಗುವ ಚಿಕಿತ್ಸೆಯ ಮಟ್ಟದಲ್ಲಿಯೆ ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ‘ಆರೋಗ್ಯ ಕರ್ನಾಟಕ’ ಯೋಜನೆ ಜಾರಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶುಕ್ರವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಎಲ್ಲರಿಗೂ ಆರೋಗ್ಯ ಸೇವೆಯನ್ನು ಒದಗಿಸುವಂತಹ ‘ಆರೋಗ್ಯ ಕರ್ನಾಟಕ’ ಯೋಜನೆಯ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಒಂದು ಕೋಟಿ 43 ಲಕ್ಷ ಕುಟುಂಬಗಳಿದ್ದು, ಬಿಪಿಎಲ್ ಕುಟುಂಬಗಳಿಗೆ ಉಚಿತ ಹಾಗೂ ಎಪಿಎಲ್ ಕುಟುಂಬಗಳಿಗೆ ಶೇ.30ರಷ್ಟು ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆಯನ್ನು ನೀಡಲು ‘ಆರೋಗ್ಯ ಕರ್ನಾಟಕ’ ಯೋಜನೆಯನ್ನು ಜಾರಿ ಮಾಡಲಾಗಿದೆ. ಇಂತಹ ಜನಪರ ಯೋಜನೆ ದೇಶದ ಯಾವುದೇ ರಾಜ್ಯದಲ್ಲಿಲ್ಲ. ಹೀಗಾಗಿ ಆರೋಗ್ಯ ಸೇವೆ ಒದಗಿಸುವಲ್ಲಿ ನಮ್ಮ ಸರಕಾರ ಪ್ರಥಮ ಸ್ಥಾನದಲ್ಲಿದೆ ಎಂಬುದಕ್ಕೆ ನನಗೆ ಹೆಮ್ಮೆ ಆಗುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಶವಕ್ಕೆ ಹಣ ಕಟ್ಟಬೇಕಿಲ್ಲ: ಅನಾರೋಗ್ಯ ಪೀಡಿತ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡಲು ಪೋಷಕರು ಆಸ್ಪತ್ರೆಗೆ ಸೇರಿಸಿ, ಲಕ್ಷಾಂತರ ಹಣ ಖರ್ಚು ಮಾಡಿರುತ್ತಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಾಗ ಶವ ಪೋಷಕರಿಗೆ ಹಿಂದಿರುಗಿಸಲು ಆಸ್ಪತ್ರೆಗಳ ಮಾಲಕರು ಪುನಃ ಹಣ ಕೇಳುತ್ತಾರೆ. ಇನ್ನು ಮುಂದೆ ಯಾವ ಆಸ್ಪತ್ರೆಯಲ್ಲಿಯೂ ಶವ ಮುಂದಿಟ್ಟುಕೊಂಡು ಪೋಷಕರ ಬಳಿ ಹಣ ಕೇಳುವಂತಿಲ್ಲ. ವ್ಯಕ್ತಿ ಮೃತಪಟ್ಟ ತಕ್ಷಣ ಶವವನ್ನು ಪೋಷಕರಿಗೆ ಹಿಂದಿರುಗಿಸಬೇಕು ಎಂದು ಅವರು ತಿಳಿಸಿದರು.

ಆರೋಗ್ಯ ಸಚಿವ ರಮೇಶ್‌ಕುಮಾರ್ ಮಾತನಾಡಿ, ಕರ್ನಾಟಕ ಸರಕಾರ ಪ್ರತಿ ವರ್ಷವು ತನ್ನ ಬಜೆಟ್‌ನಲ್ಲಿ ಆರೋಗ್ಯ ಇಲಾಖೆಗೆ ಸಾಕಷ್ಟು ಅನುದಾನ ಕೊಡುತ್ತಿದೆ. 2018-19ರ ಸಾಲಿನಲ್ಲಿ 9ಸಾವಿರ ಕೋಟಿ ರೂ.ಅನುದಾನ ನೀಡಿದೆ. ಈ ಹಣವನ್ನು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ‘ಆರೋಗ್ಯ ಕರ್ನಾಟಕ’ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಟಿ.ನರಸೀಪುರದ 5ಮಂದಿಗೆ ‘ಆರೋಗ್ಯ ಕರ್ನಾಟಕ’ ಕಾರ್ಡ್‌ನ್ನು ವಿತರಿಸಲಾಯಿತು. ಈ ವೇಳೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್, ನಗರಾಭಿವೃದ್ಧಿ ಸಚಿವ ಆರ್.ರೋಷನ್ ಬೇಗ್, ಆರೋಗ್ಯ ಮತ್ತು ಕುಟುಂಬ ಕಲ್ಯಾ ಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಉಮೇಶ್ ಜಿ.ಜಾದವ್, ಬಿಬಿಎಂಪಿ ಮೇಯರ್ ಸಂಪತ್ ರಾಜ್ ಮತ್ತಿತರರಿದ್ದರು.

ಮುಖ್ಯಾಂಶಗಳು
*ಮಾ.5 (ಸೋಮವಾರ)ರಿಂದ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ
 *ಮೊದಲ ಹಂತವಾಗಿ ಕೆ.ಸಿ.ಜನರಲ್ ಆಸ್ಪತ್ರೆ, ಜಯದೇವ ಆಸ್ಪತ್ರೆ, ಪಿಎಂಎಸ್‌ಎಸ್‌ವೈ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕಲಬುರ್ಗಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ.
*ಆ್ಯಂಬುಲೆನ್ಸ್‌ನಲ್ಲಿ ಶುಶ್ರೂಷಕಿ ಹಾಗೂ ಆಧುನಿಕ ಉಪಕರಣ ಇರಲಿದೆ .
*ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಚಿಕಿತ್ಸಾ ವೆಚ್ಚದ ದರಗಳನ್ನು ನಮೂದಿಸಬೇಕು.
*ಜಿಲ್ಲಾ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕಾನಿಂಗ್ ಸೆಂಟರ್ ಇರಲಿದೆ.
*ತಾಲೂಕು ಆಸ್ಪ್ರತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News