ಜನಪರವಾಗಿಲ್ಲ ಎಂದರೆ ಬದುಕಿದ್ದು ಸತ್ತಂತೆ: ನ್ಯಾ.ಎನ್.ಕುಮಾರ್

Update: 2018-03-02 15:53 GMT

ಬೆಂಗಳೂರು, ಮಾ.2: ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲಿದ್ದು, ಜನಪರವಾಗಿ ಕೆಲಸ ಮಾಡದಿದ್ದರೆ ಬದುಕಿದ್ದು ಸತ್ತಂತೆ ಎಂದು ನಿವೃತ್ತ ನ್ಯಾ.ಎನ್.ಕುಮಾರ್ ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ಪರಿಸರ ಬೆಂಬಲ ತಂಡ(ಇಎಸ್‌ಜಿ) ನಗರದ ಜೈನ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ಬೆಂಗಳೂರಿನ ತ್ಯಾಜ್ಯ

ಸಂಗ್ರಹ ಸ್ಥಳಗಳು, ತ್ಯಾಜ್ಯ ಸಂಸ್ಕರಣಾ ತಾಣಗಳು ಮತ್ತು ತ್ಯಾಜ್ಯ ಎಸೆಯುವ ಗುಂಡಿಗಳ ಮತ್ತು ಪೌರಕಾರ್ಮಿಕರ ಕಾರ್ಯಸ್ಥಿತಿಗಳ’ ಕುರಿತ ಸಮಗ್ರ ವರದಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ತಮ್ಮದೆ ಆದ ಜವಾಬ್ದಾರಿಗಳಿರುತ್ತವೆ. ಆ ಜವಾಬ್ದಾರಿಗಳನ್ನು ಮಾಡದೆ ಹೋದಾಗ ಸಮಸ್ಯೆಗಳು ಉದ್ಬವಿಸುತ್ತವೆ. ಅದರಲ್ಲೂ ಮುಖ್ಯವಾಗಿ ಸರಕಾರಿ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿರುವವರು ತಮ್ಮ ಜವಾಬ್ದಾರಿ ಮರೆತರೆ ಸಮಾಜ ಸಮಸ್ಯೆಯ ಗೂಡಾಗಲಿದೆ. ಇದಕ್ಕೆ ಉದಾಹರಣೆಯಾಗಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಉದ್ಭವಿಸಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣವೆಂದು ಅವರು ಆಪಾದಿಸಿದರು.

ಬೆಂಗಳೂರಿನಲ್ಲಿರುವ ಶೇ.80ರಷ್ಟು ಸರಕಾರಿ ಇಲಾಖೆ ಹಾಗೂ ಖಾಸಗಿ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವವರು ಹಳ್ಳಿಯಿಂದ ಬಂದವರೆ ಆಗಿದ್ದಾರೆ. ಆದರೆ, ನಗರಕ್ಕೆ ಬಂದು ಒಳ್ಳೆಯ ನೌಕರಿ, ಸಂಬಳ ಸಿಕ್ಕ ಕೂಡಲೆ, ತಮ್ಮ ಹಳ್ಳಿಗಳನ್ನು ಮರೆಯುತ್ತಾರೆ. ಹೀಗಾಗಿಯೆ ನಗರದ ಕಸವನ್ನು ಯಾವುದೆ ಸಂಕೋಚವಿಲ್ಲದೆ ಹಳ್ಳಿಗಳಲ್ಲಿ ಸುರಿದು ನಿರಾಳರಾಗುತ್ತಾರೆ. ಆದರೆ, ಈ ಕಸದ ಪರಿಣಾಮವಾಗಿ ತಮ್ಮದಲ್ಲದ ತಪ್ಪಿಗೆ ಹಳ್ಳಿಯ ಮಕ್ಕಳು, ಬಾಣಂತಿ, ಗರ್ಭಿಣಿಯರು ಹಲವು ರೋಗಗಳಿಂದ ನರಳಿ ಸಾಯುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕಸ ಮತ್ತು ಕರ್ತವ್ಯ: ತಮ್ಮ ಮನೆಗಳಲ್ಲಿ ಉತ್ಪಾದನೆಯಾಗುವ ಕಸವನ್ನು ನಿರ್ವಹಿಸುವುದು ಆಯಾ ಮನೆಯವರ ಜವಾಬ್ದಾರಿ ಎಂದು ವಿದೇಶಗಳಲ್ಲಿ ಕಟ್ಟುನಿಟ್ಟಿನ ಕಾನೂನಾಗಿದೆ. ಆದರೆ, ಭಾರತದಲ್ಲಿ ಮಾತ್ರ ಪೌರಕಾರ್ಮಿಕರಿಗೆ ಹಾಗೂ ಸರಕಾರಿ ಸಂಸ್ಥೆಗಳ ಹೆಗಲಿಗೆ ಹಾಕಿ ಜನತೆ ನಿಶ್ಚಿಂತೆಯಿಂದಿರುತ್ತಾರೆ. ಇಂತಹ ಪ್ರವೃತ್ತಿಯನ್ನು ಜನತೆ ಬದಲಿಸಿಕೊಂಡಾಗ ಮಾತ್ರ ಸ್ವಚ್ಛ ಭಾರತವನ್ನು ನಿರ್ಮಿಸಲು ಸಾಧ್ಯವೆಂದು ಅವರು ಹೇಳಿದರು.

ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಮಾತನಾಡಿ, ಪ್ರತಿದಿನ ನಗರದಲ್ಲಿ 4ರಿಂದ 5ಸಾವಿರ ಟನ್ ಕಸ ಉತ್ಪತ್ತಿಯಾಗುತ್ತಿದೆ. ಈ ಹಿಂದೆ ಇದನ್ನು ನಿರ್ವಹಿಸುವುದು ದೊಡ್ಡ ಸವಾಲಿನ ಕಾರ್ಯವಾಗಿತ್ತು. ಆದರೆ, ಈಗ ಪ್ರತಿವಾರ್ಡ್‌ನಲ್ಲಿ ಕಸ ಸಂಸ್ಕರಣ ಘಟಕ ಸ್ಥಾಪಿಸಿ, ಅಲ್ಲಿನ ಕಸವನ್ನು ಅಲ್ಲೆ ಸಂಸ್ಕರಿಸುವಂತಹ ಕೆಲಸ ನಡೆಯುತ್ತಿದೆ. ಇದರಿಂದ ಕಸದ ಸಮಸ್ಯೆ ಕಡಿಮೆಯಾಗುತ್ತಾ ಬಂದಿದೆ ಎಂದು ತಿಳಿಸಿದರು.

ಸಿಂಗಾಪುರದಲ್ಲಿ ಅಲ್ಲಿಗೆ ಬೇಕಾದ ವಿದ್ಯುತ್ ಪ್ರಮಾಣದ ಶೇ.3ರಷ್ಟನ್ನು ಕಸದಿಂದಲೆ ಉತ್ಪಾದಿಸಲಾಗುತ್ತಿದೆ. ಹಾಗೂ ಕಸದಿಂದ ಅನಿಲವನ್ನು ಉತ್ಪಾದಿಸಿ ವಾಹನ ಚಾಲನೆ ಸೇರಿದಂತೆ ಮತ್ತಿತರರ ಕಾರ್ಯಗಳಿಗೆ ಉಪಯೋಗಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಕಸವನ್ನು ಉಪಯುಕ್ತ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ವರದಿಯ ಮುಖ್ಯಾಂಶಗಳು
*ಬೆಂಗಳೂರಿನ ಕಸ ಮಾವಳ್ಳಿ-ಮಂಡೂರಿನಲ್ಲಿ ಸುರಿದಿರುವುದರಿಂದ ಆರೋಗ್ಯ ಸಮಸ್ಯೆ ಉಲ್ಪಣಿಸಿದೆ.
*ಅಂತರ್ಜಲ ಕಲುಷಿತಗೊಂಡು ಕುಡಿಯಲು, ಕೃಷಿ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
*ಗ್ರಾಮಾಂತರ ಪ್ರದೇಶದ ಆರ್ಥಿಕತೆಯೆ ಕುಸಿತಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News