ತ್ರಿಪುರಾದ ಬಿಜೆಪಿ ಗೆಲುವಿನ ಸೂತ್ರಧಾರ ಸುನಿಲ್ ದಿಯೋಧರ್

Update: 2018-03-03 10:56 GMT

ಹೊಸದಿಲ್ಲಿ, ಮಾ.3: ತ್ರಿಪುರಾ ರಾಜ್ಯದಲ್ಲಿ 25 ವರ್ಷಗಳ ನಂತರ ಎಡಪಕ್ಷ ಆಡಳಿತಕ್ಕೆ ಬಿಜೆಪಿ ಅಂತ್ಯ ಹಾಡಿದೆಯೆಂದಾದರೆ ಅದಕ್ಕೆ ಒಬ್ಬ ವ್ಯಕ್ತಿ ಪ್ರಮುಖ ಕಾರಣರಾಗಿದ್ದಾರೆ. ಅವರೇ ಆರೆಸ್ಸೆಸ್ ಪ್ರಚಾರಕ, ಬಿಜೆಪಿ ಚುನಾವಣಾ ತಂತ್ರಜ್ಞ ಮಹಾರಾಷ್ಟ್ರ ಮೂಲದ 52 ವರ್ಷದ ಸುನಿಲ್ ದಿಯೋಧರ್. ಮಹಾರಾಷ್ಟ್ರದವರಾದರೂ ಅವರೀಗ ವಸ್ತುಶಃ ತ್ರಿಪುರಾದವರಾಗಿ ಬಿಟ್ಟಿದ್ದಾರೆ.

1985ರಲ್ಲಿ ಆರೆಸ್ಸೆಸ್ ಸೇರಿದ್ದ ಅವರನ್ನು ಮೇಘಾಲಯದಲ್ಲಿ ಪ್ರಚಾರಕರಾಗಿ ನೇಮಿಸಲಾಗಿತ್ತು. ದೇಶಾದ್ಯಂತ ಹರಡಿರುವ ಈಶಾನ್ಯ ಭಾರತಕ್ಕೆ ಸೇರಿದ  ವಿದ್ಯಾರ್ಥಿಗಳಿಗೆ ಸಹಾಯ ಮಾಡಲೆಂದು ಅವರು 'ಮೈ ಹೋಮ್ ಇಂಡಿಯಾ' ಎಂಬ ಸಂಘಟನೆಯನ್ನೂ ಸ್ಥಾಪಿಸಿದ್ದರು. 2012ರಲ್ಲಿ ಗುಜರಾತ್ ಚುನಾವಣೆಯ ಸಂದರ್ಭ ದಾಹೋದ್ ಜಿಲ್ಲೆಯ ಉಸ್ತುವಾರಿ ಅವರಿಗೆ ವಹಿಸಲಾಗಿದ್ದರೆ, 2013ರ ಚುನಾವಣೆ ವೇಳೆ ಅವರನ್ನು ದಕ್ಷಿಣ ದಿಲ್ಲಿಯ ಉಸ್ತುವಾರಿಯನ್ನಾಗಿಸಲಾಗಿತ್ತು.

2014ರ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿಯ ವಾರಣಾಸಿ ಕ್ಷೇತ್ರದ ಉಸ್ತುವಾರಿಯಾಗಿದ್ದ ಅವರಿಗೆ ನವೆಂಬರ್ 2014ರಲ್ಲಿ ತ್ರಿಪುರಾದ ಉಸ್ತುವರಿ ವಹಿಸಲಾಗಿತ್ತು. ಪಕ್ಷ ಒಂದೇ ಒಂದು ಸ್ಥಾನ ಪಡೆದಿಲ್ಲದ ರಾಜ್ಯವಾಗಿದ್ದ ತ್ರಿಪುರಾ ಇಂದು ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದರೆ ಅದಕ್ಕೆ ದಿಯೋಧರ್ ಅವರೇ ಕಾರಣ. ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಅಮಿತ್ ಶಾ ನಿರ್ದೇಶನದಂತೆ ಪುಟ ಪ್ರಮುಖರನ್ನೂ ನೇಮಿಸಿದ್ದರಲ್ಲದೆ ಬೂತ್ ಮಟ್ಟದ ಸಮಿತಿ, ಶಕ್ತಿ ಕೇಂದ್ರಗಳು ಹಾಗೂ ವಿವಿಧ ಸಮಿತಿಗಳನ್ನು ಬಲ ಪಡಿಸಿದ್ದರು. ರಾಜ್ಯದಲ್ಲಿ ಮಾಣಿಕ್ ಶಾ ಸರಕಾರದ ವಿರೋಧಿ ಅಲೆ ಇದೆ ಎಂದು ಕಂಡುಕೊಂಡಿದ್ದ ಅವರು, ಅದಕ್ಕೆ ತಕ್ಕಂತೆ ಪಕ್ಷದ ತಂತ್ರಗಾರಿಕೆ ಹೂಡುವಲ್ಲಿ ಶ್ರಮಿಸಿದ್ದರು. ಅಲ್ಲಿನ ಪಕ್ಷ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಿ ಜನರಲ್ಲಿ  ಪಕ್ಷದ ಬಗ್ಗೆ ಉತ್ತಮ ಭಾವನೆ ಮೂಡುವಂತೆಯೂ ಮಾಡಿದ್ದರು.

ಸಂಗೀತ ಪ್ರೇಮಿಯೂ ಆಗಿರುವ ಅವರು ತ್ರಿಪುರಾದ ಆದಿವಾಸಿ ಭಾಷೆಯಾದ ಕೊಕ್ಬರೊಕ್ ಕೂಡ ಅಲ್ಪಸ್ವಲ್ಪ ಮಾತನಾಡುತ್ತಾರಲ್ಲದೆ ಖಾಸಿ, ಗುಜರಾತಿ, ಬಂಗಾಳಿ ಮತ್ತು ಮರಾಠಿ ಭಾಷೆ ಕೂಡ ಬಲ್ಲವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News