ರಾಜ್ಯದಲ್ಲಿ ಪ್ರತ್ಯೇಕ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯ: ಬಸವರಾಜರಾಯರೆಡ್ಡಿ

Update: 2018-03-03 12:44 GMT

ಬೆಂಗಳೂರು, ಮಾ.3: ಕೌಶಲ್ಯಾಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರತ್ಯೇಕ ಕೌಶಲ್ಯ ವಿಶ್ವವಿದ್ಯಾಲಯ ಆರಂಭಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ಶನಿವಾರ ನಗರದ ಬಿಎಂಎಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಕಾಲೇಜಿನಲ್ಲಿ ಬಿಎಂ ಶ್ರೀನಿವಾಸಯ್ಯ ಸ್ಕೂಲ್ ಆಫ್ ಆರ್ಕಿಟೆಕ್ಚರ್ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರಕಾರ ನಿರುದ್ಯೋಗಿ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ನಿಟ್ಟಿನಲ್ಲಿ ಕೊಪ್ಪಳ, ದಾಂಡೇಲಿಯಲ್ಲಿ ಕೌಶಲಾಭಿವದ್ಧಿ ಕೇಂದ್ರಗಳನ್ನು ತೆರೆದು ತರಬೇತಿ ನೀಡುತ್ತಿದ್ದು, ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಜತೆಗೆ, ಕೌಶಲ್ಯ ಅಭಿವೃದ್ಧಿ ವಿಶ್ವವಿದ್ಯಾಲಯ ತೆರೆಯಲು ಸರಕಾರ ಚಿಂತನೆ ನಡೆಸಿದೆ ಎಂದರು.

ದೇಶದಲ್ಲಿ ಹದಿನೆಂಟರಿಂದ ಇಪ್ಪತ್ತು ವರ್ಷದೊಳಗಿನ 25 ಕೋಟಿ ಯುವಕರಿದ್ದಾರೆ. ಇವರಿಗೆ ಉದ್ಯೋಗ ಅವಕಾಶ ಕಲ್ಪಿಸಿದರೆ ಭಾರತ ಜಗತ್ತಿನಲ್ಲಿಯೇ ಅತಿ ಶ್ರೀಮಂತ ರಾಷ್ಟ್ರವಾಗುವುದರಲ್ಲಿ ಸಂದೇಹವಿಲ್ಲ. ಹೀಗಾಗಿ ಯುವಕರಿಗೆ ಕೌಶಲ್ಯ ಅಭಿವೃದ್ಧಿಯಂತಹ ತರಬೇತಿಗಳನ್ನು ನೀಡುವ ಅಗತ್ಯವಿದೆ ಎಂದ ಅವರು, ಯುವಕರನ್ನು ಕೌಶಲ್ಯಾಭಿವೃದ್ಧಿಯಲ್ಲಿ ತೊಡಗಿಸುವ ನಿಟ್ಟಿನಲ್ಲಿ ಎಂಜಿನಿಯರಿಂಗ್ ಕಾಲೇಜುಗಳು ಮಹತ್ತರ ಪಾತ್ರವಹಿಸುತ್ತವೆ. ಈ ನಿಟ್ಟಿನಲ್ಲಿ ಯುವಕರಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂದು ನುಡಿದರು.

ಗುಣಮಟ್ಟಕ್ಕೆ ಆದ್ಯತೆ ನೀಡಿ: ನಮ್ಮ ದೇಶದಲ್ಲಿ ಆರ್ಕಿಟೆಕ್ಚರ್‌ಗೆ ತನ್ನದೇ ಆದ ಮಹತ್ವ ಇದೆ. ಯಾವುದೇ ವಿಶ್ವವಿದ್ಯಾಲಯವಿಲ್ಲದ ಕಾಲದಲ್ಲಿ ಪಲ್ಲವರು, ಚೋಳರು, ಹೊಯ್ಸಳರು, ರಾಷ್ಟ್ರಕೂಟರ ಕಾಲದಲ್ಲಿ ಅದ್ಭುತ ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಇತ್ತೀಚಿನ ಆಧುನಿಕ ಯುಗದಲ್ಲಿ ಆರ್ಕಿಟೆಕ್ಚರ್‌ನಲ್ಲಿ ಉಪಯುಕ್ತತೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಧೀರ್ಘ ಬಾಳಿಕೆಗೆ ಹೆಚ್ಚು ಒತ್ತು ನೀಡುತ್ತಿಲ್ಲ ಎಂದ ಅವರು ಉತ್ತಮ ಗುಣಮಟ್ಟದ ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಬೇಕೆಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಟ್ರಸ್ಟಿ ಬಿ.ಎಸ್. ರಾಗಿಣಿ ನಾರಾಯಣ್, ನಿ.ನ್ಯಾಯಮೂರ್ತಿ ಬನ್ನೂರು ಮಠ, ಉದ್ಯಮಿ ಡಾ.ದಯಾನಂದ ಪೈ, ನಿವೃತ್ತ ಐಎಎಸ್ ಅಧಿಕಾರಿ ಜಯರಾಜ್, ಡಾ.ಸ್ವಪ್ನ ಪಾಪು ಸೇರಿದಂತೆ ಪ್ರಮುಖರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News