ಚಿತ್ರ ಸಾಹಿತಿಗಳನ್ನು ಅಸ್ಪಶ್ಯರಂತೆ ಕಾಣಲಾಗುತ್ತಿದೆ: ದೊಡ್ಡರಂಗೇಗೌಡ

Update: 2018-03-03 13:05 GMT

ಬೆಂಗಳೂರು, ಮಾ.3: ಚಲನಚಿತ್ರ ಸಾಹಿತಿಗಳನ್ನು ಸಾಹಿತ್ಯ ಕ್ಷೇತ್ರದಲ್ಲಿ ಅಸ್ಪಶ್ಯರಂತೆ ನೋಡಲಾಗುತ್ತಿದೆ. ಸಾಹಿತಿಗಳು ಇಂತಹ ಮನೋಭಾವವನ್ನು ದೂರ ಮಾಡಿಕೊಳ್ಳಬೇಕು ಎಂದು ಕವಿ ದೊಡ್ಡರಂಗೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಟೋಟಲ್ ಕನ್ನಡ ಸಂಸ್ಥೆಯು ಹೊರತಂದಿರುವ ಬಿ.ಎಸ್.ಶ್ರೀನಿವಾಸ ಪ್ರಸಾದ್ ಅವರು ಬರೆದಿರುವ ಸಾಹಿತ್ಯ ಶಿಲ್ಪಿ ಚಿ.ಉದಯಶಂಕರ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಿಂದಿ ಭಾಷೆಗಳ ರಾಜ್ಯಗಳಲ್ಲಿರುವ ಚಲನಚಿತ್ರ ಸಾಹಿತಿಗಳಿಗೆ ಕನ್ನಡದ ಚಲನಚಿತ್ರ ಸಾಹಿತಿಗಳಿಗಿರುವ ಸ್ಥಿತಿಯಿಲ್ಲ. ಹಿಂದಿಯಲ್ಲಿ ಗುಲ್ಜಾರ್ ಅವರನ್ನು ಕವಿಯಾಗಿಯೇ ಒಪ್ಪಿಕೊಳ್ಳಲಾಗಿದೆ. ಆದರೆ, ಕನ್ನಡ ನಾಡಿನಲ್ಲಿ ಅಂತಹ ಆರೋಗ್ಯಕರವಾದ ವಾತಾವರಣ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಚಿತ್ರಗೀತೆ, ಸಂಭಾಷಣೆ ರಚನಾಕಾರರನ್ನು ಸಾಹಿತ್ಯ ವಿಮರ್ಶಕರು ಅಸ್ಪಶ್ಯರಾಗಿ ಮಾಡಿಟ್ಟಿದ್ದಾರೆ. ಕನ್ನಡ ಚಿತ್ರರಂಗದ ಪ್ರಮುಖ ಗೀತ ರಚನಕಾರರಾದ ಚಿ.ಉದಯ ಶಂಕರ್ ಕನ್ನಡ ಚಿತ್ರಗೀತೆಗಳನ್ನು ಸುಂದರವಾಗಿ ರಚಿಸಲು ಹೇಳಿಕೊಟ್ಟ ಗುರು ಎಂದು ಸ್ಮರಿಸಿದ ಅವರು, ಹಂಸಲೇಖ ಮುಂತಾದವರನ್ನು ಈ ಸಂದರ್ಭದಲ್ಲಿ ಅವರು ಉಲ್ಲೇಖಿಸಿದರು.

ಕನ್ನಡ ಚಿತ್ರರಂಗದಲ್ಲಿ ಅಪಾರ ಸೇವೆ ಸಲ್ಲಿಸಲು ತಂತ್ರಜ್ಞರು, ಕಲಾವಿದರು, ಪೋಷಕ ಕಲಾವಿದರು ಮುಂತಾದವರ ಆಕರ ಗ್ರಂಥಗಳನ್ನು ಯುವ ಲೇಖಕರು ರಚಿಸಬೇಕು ಹಾಗೂ ಸಾಹಿತ್ಯ ಕ್ಷೇತ್ರದಲ್ಲಿರುವ ಹಿರಿಯ ಸಾಹಿತಿಗಳು ಯುವ ಸಾಹಿತಿಗಳನ್ನು ಪ್ರೋತ್ಸಾಹಿಸಬೇಕು ಎಂದು ದೊಡ್ಡರಂಗೇಗೌಡ ನುಡಿದರು.

ನಿರ್ದೇಶಕ ಭಗವಾನ್ ಮಾತನಾಡಿ, ವರನಟ ಡಾ.ರಾಜ್‌ಕುಮಾರ್ ಹೆಸರು ಎಲ್ಲಿಯವರೆಗೂ ಜೀವಂತವಾಗಿ ಇರುತ್ತದೆಯೋ, ಅಲ್ಲಿಯವರೆಗೂ ಚಿ.ಉದಯಶಂಕರ್ ಅವರ ಹೆಸರು ಚಿರಸ್ಥಾಯಿಯಾಗಿರುತ್ತದೆ. ಇಂದಿನ ಕಾಲದ ಜನರ ಅಭಿರುಚಿಗೆ ತಕ್ಕಂತೆ ಚಲನಚಿತ್ರಗೀತೆಗಳನ್ನು ಬರೆಯುವುದು ಕಷ್ಟ. ಆದರೆ, ಚಿ.ಉದಯಶಂಕರ್ ಅವರು ಬರೆಯುತ್ತಿದ್ದ ಗೀತೆಗಳು ಮತ್ತು ಪದಗಳು ಎಲ್ಲರಿಗೂ ಅರ್ಥವಾಗುತ್ತಿದ್ದವು ಹಾಗೂ ಸಾಮಾನ್ಯ ಭಾಷೆಯಲ್ಲಿರುತ್ತಿದ್ದವು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕ ಭಾರ್ಗವ, ಚಿ.ಉದಯಶಂಕರ್‌ರ ಮಗ ಗುರುದತ್, ಪತ್ರಕರ್ತ ಶ್ರೀಧರಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News