ಭಾರತ ಭೇಟಿಯ ಬಳಿಕ ಟ್ರೂಡೊ ಜನಪ್ರಿಯತೆ ಕುಸಿತ

Update: 2018-03-03 17:22 GMT

ಟೊರಾಂಟೊ, ಮಾ. 3: ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊರ ಭಾರತ ಯಾತ್ರೆ ಅವರ ರಾಜಕೀಯ ಭವಿಷ್ಯಕ್ಕೆ ಮುಳುವಾಗಿದೆಯೇ?

ನೂತನ ಸಮೀಕ್ಷೆಗಳ ಪ್ರಕಾರ, ಕೆನಡ ಸಂಸತ್ತಿಗೆ ಈಗ ಚುನಾವಣೆ ನಡೆದರೆ ಟ್ರೂಡೊರ ಲಿಬರಲ್ ಪಾರ್ಟಿಯು ಪ್ರತಿಪಕ್ಷ ಕನ್ಸರ್ವೇಟಿವ್ ಪಕ್ಷದ ವಿರುದ್ಧ ಸೋಲುತ್ತದೆ ಹಾಗೂ ಅವರ ಜನಪ್ರಿಯತೆ ಕುಸಿಯಲು ಕಾರಣವಾದ ಹಲವು ಅಂಶಗಳಲ್ಲಿ ಅವರ ಇತ್ತೀಚಿನ 8 ದಿನಗಳ ಭಾರತ ಪ್ರವಾಸವೂ ಒಂದು.

ಲಿಬರಲ್ ಪಕ್ಷವು 33 ಶೇಕಡ ಮತಗಳನ್ನು ಪಡೆದರೆ, ಕನ್ಸರ್ವೇಟಿವ್ ಪಕ್ಷವು 38 ಶೇಕಡ ಮತಗಳನ್ನು ಪಡೆಯುತ್ತದೆ ಎಂದು ‘ಗ್ಲೋಬಲ್ ನ್ಯೂಸ್’ಗಾಗಿ ‘ಇಪ್‌ಸಾಸ್’ ಮಾಡಿದ ಸಮೀಕ್ಷೆ ಹೇಳುತ್ತದೆ.

ಟ್ರೂಡೊ ಭಾರತ ಪ್ರವಾಸವು ಉಭಯ ದೇಶಗಳ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಿದೆ ಎಂಬುದಾಗಿ 40 ಶೇ. ಕೆನಡಿಯನ್ನರು ಭಾವಿಸುತ್ತಾರೆ ಎಂಬುದನ್ನು ಸಮೀಕ್ಷೆ ಕಂಡುಕೊಂಡಿದೆ. ಪ್ರವಾಸದಿಂದ ಧನಾತ್ಮಕ ಪರಿಣಾಮ ಉಂಟಾಗಿದೆ ಎಂಬುದಾಗಿ ಭಾವಿಸುವವರ ಸಂಖ್ಯೆ ಕೇವಲ 16 ಶೇ.

ಪಂಜಾಬ್‌ನ ಪ್ರತ್ಯೇಕತಾವಾದಿ ‘ಖಾಲಿಸ್ತಾನ’ ಆಂದೋಲನದ ಬಗ್ಗೆ ಟ್ರೂಡೊ ಹೊಂದಿರುವ ಮೃದು ಧೋರಣೆ ಅವರ ಭಾರತ ಪವಾಸದ ವೇಳೆ ಮುನ್ನೆಲೆಗೆ ಬಂತು. ಅಪರಾಧಿಯೆಂದು ಸಾಬೀತಾಗಿರುವ ಖಾಲಿಸ್ತಾನ ಭಯೋತ್ಪಾದಕನಿಗೆ ಅವರ ಭೋಜನದಲ್ಲಿ ಭಾಗವಹಿಸಲು ನೀಡಿರುವ ಆಹ್ವಾನವು ಅವರ ಮುಜುಗರಕ್ಕೆ ಕಾರಣವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News