ನಾಗಾಲ್ಯಾಂಡ್: ಸರಕಾರ ರಚಿಸಲು ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ, ನೈಫಿಯು ರಿಯೊ, ಮಿತ್ರ ಪಕ್ಷಗಳು

Update: 2018-03-04 17:09 GMT

ಕೋಹಿಮಾ, ಮಾ. 4: ಬಿಜೆಪಿಯ ನಾಯಕ ರಾಮ್ ಮಾದವ್ ಅವರೊಂದಿಗೆ ನಾಗಾಲ್ಯಾಂಡ್‌ನ ಮಾಜಿ ಮುಖ್ಯಮಂತ್ರಿ ನೈಫಿಯು ರಿಯೋ ಹಾಗೂ ಬಿಜೆಪಿ-ಎನ್‌ಡಿಪಿಪಿ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಇತರ ಅಭ್ಯರ್ಥಿಗಳು ರವಿವಾರ ರಾಜ್ಯಪಾಲ ಪಿ.ಬಿ. ಆಚಾರ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಸರಕಾರ ರೂಪಿಸುವುದಾಗಿ ಪ್ರತಿಪಾದಿಸಿದರು.

ವಿಧಾನ ಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಕೂಡಲೇ ತಮ್ಮ ಬೆಂಬಲ ಘೋಷಿಸಿದ ಇಬ್ಬರು ಅಭ್ಯರ್ಥಿಗಳ ನೆರವಿನೊಂದಿಗೆ ಬಿಜೆಪಿ ಹಾಗೂ ಅದರ ನೂತನ ಮಿತ್ರ ಪಕ್ಷ ಎನ್‌ಡಿಪಿಪಿ ನಾಗಾಲ್ಯಾಂಡ್‌ನಲ್ಲಿ ಸರಕಾರ ರೂಪಿಸಲಿದೆ. ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಹಾಗೂ ಎನ್‌ಡಿಪಿಪಿ ಒಟ್ಟಾಗಿ 29 ಸ್ಥಾನಗಳನ್ನು ಪಡೆದುಕೊಂಡಿತ್ತು. ನಿರ್ಗಮನ ಮುಖ್ಯಮಂತ್ರಿ ಟಿ.ಆರ್. ಝೆಲಿಯಾಂಗ್ ಅವರ ಎನ್‌ಪಿಎಫ್ ಕೇವಲ ಎರಡು ಸ್ಥಾನಗಳ ಕೊರತೆಯಿಂದ ಬಹುಮತ ಪಡೆಯಲು ವಿಫಲವಾಯಿತು. ಆದಾಗ್ಯೂ, ಸ್ವತಂತ್ರ ಅಭ್ಯರ್ಥಿ ಟೊಂಗ್‌ಪಾಂಗ್ ಒಝುಕುಮ್ ಹಾಗೂ ಜನತಾ ದಳ (ಸಂಯುಕ್ತ) ನಾಗಾಲ್ಯಾಂಡ್ ಬಿಜೆಪಿಯನ್ನು ಬೆಂಬಲಿಸಲು ನಿರ್ಧರಿಸಿತ್ತು. ಇದರಿಂದ 90 ಸ್ಥಾನ ಬಲವುಳ್ಳ ನಾಗಾಲ್ಯಾಂಡ್ ವಿಧಾನ ಸಭೆಯಲ್ಲಿ ಬಿಜೆಪಿ ಸ್ಥಾನ 31ಕ್ಕೆ ಏರಿದೆ.

ತನ್ನ ಹಳೆಯ ಮಿತ್ರ ಪಕ್ಷ ಬಿಜೆಪಿಯೊಂದಿಗೆ ನೂತನ ಸರಕಾರ ರಚಿಸಲು ನಮ್ಮ ಪಕ್ಷಕ್ಕೆ ಸಂತೋಷವಾಗುತ್ತಿದೆ ಎಂದು ಜೆಲಿಯಾಂಗ್ ತಿಳಿಸಿದ್ದಾರೆ. ಆದರೆ, ಚುನಾವಣೆ ಪೂರ್ವದಲ್ಲಿ ಬಿಜೆಪಿ ನೈಫಿಯು ರಿಯೋ ಅವರ ನೂತನ ಪಕ್ಷವನ್ನು ಮಿತ್ರ ಪಕ್ಷವನ್ನಾಗಿ ಆಯ್ಕೆ ಮಾಡಿತ್ತು ಹಾಗೂ ರಿಯೋ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಪ್ರಚಾರ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News