ಕೆಂಪೇಗೌಡರ ಭಾವಚಿತ್ರ ತಪ್ಪಾಗಿ ಮುದ್ರಣ: ಬಿಬಿಎಂಪಿ ಮೇಯರ್ ಕ್ಷಮೆ ಯಾಚನೆ

Update: 2018-03-05 12:48 GMT

ಬೆಂಗಳೂರು, ಮಾ. 5: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಜೆಟ್ ಕೈಪಿಡಿಯಲ್ಲಿ ನಾಡಪ್ರಭು ಕೆಂಪೇಗೌಡ ಅವರ ಭಾವಚಿತ್ರ ತಪ್ಪಾಗಿ ಮುದ್ರಿಸಿದ್ದಕ್ಕೆ ಮೇಯರ್ ಸಂಪತ್ ರಾಜ್ ಅವರು ಬಿಬಿಎಂಪಿ ಸಭೆಯಲ್ಲಿ ಕ್ಷಮೆ ಯಾಚಿಸಿದ್ದಾರೆ.

ಸೋಮವಾರ ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಿದ್ದ ಬಜೆಟ್ ಚರ್ಚೆ ಸಭೆಯಲ್ಲಿ ಕ್ಷಮಾಪಣೆ ಕೋರಿದ ಅವರು, ಕೆಲ ತಾಂತ್ರಿಕ ದೋಷಗಳಿಂದ ಭಾವಚಿತ್ರ ತಪ್ಪಾಗಿ ಮುದ್ರಿತವಾಗಿದ್ದು, ನಮ್ಮಿಂದ ತಪ್ಪಾಗಿದೆ. ಹೀಗಾಗಿ, ಬೇರೆ ಪುಸ್ತಕಗಳನ್ನು ಮುದ್ರಿಸಿ ಹಂಚುವುದು ಎಂದು ತಿಳಿಸಿದರು.

ಆಡಳಿತ ಪಕ್ಷದ ನಾಯಕ ಶಿವರಾಜ್ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಬಗ್ಗೆ ನಮಗೆ ಅಪಾರ ಗೌರವವಿದೆ. ಕೆಂಗಲ್ ಹನುಮಂತಯ್ಯನವರ ಕಾಲದಿಂದಲೂ ಕೆಂಪೇಗೌಡರ ಅಧ್ಯಯನ ಪೀಠಕ್ಕೆ ಯಾವುದೇ ಸರಕಾರ ಹಣ ಮೀಸಲಿಟ್ಟಿರಲಿಲ್ಲ. ಆದರೆ ನಮ್ಮ ಸರಕಾರ ಕೆಂಪೇಗೌಡ ಅಧ್ಯಯನ ಪೀಠಕ್ಕೆ 50 ಕೋಟಿ ರೂ. ಅನುದಾನ ಮೀಸಲಿಟ್ಟಿದೆ ಎಂದರು.

ಮಾಜಿ ಮೇಯರ್ ಮಂಜುನಾಥ ರೆಡ್ಡಿ ಮಾತನಾಡಿ, ನಮ್ಮ ತಪ್ಪಿಗೆ ನಾವು ಕ್ಷಮೆ ಕೇಳಿದ್ದೇವೆ. ಬೆಂಗಳೂರು ರಕ್ಷಿಸಿ ಪಾದಯಾತ್ರೆ ವೆಬ್ ಸೈಟ್‌ನಲ್ಲಿ ಬೇರೆ ರಾಜ್ಯಗಳ ರಸ್ತೆ ಹಾಗೂ ಕಸದ ಫೋಟೋಗಳನ್ನು ಹಾಕಿದ್ದೀರಲ್ಲ. ಈಗ ನೀವು ಕ್ಷಮೆ ಕೇಳಬೇಕು ಎಂದು ಪ್ರತಿಪಕ್ಷದ ಮೇಲೆ ಹರಿಹಾಯ್ದರು.

ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು. ಕ್ಷಮೆ ಕೇಳದಿದ್ದರೆ ಹಲಸೂರು ಠಾಣೆಯಲ್ಲಿ ದೂರು ನೀಡುವುದು ಎಂದು ಮಂಜುನಾಥ್ ರೆಡ್ಡಿ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News