ಬಿಬಿಎಂಪಿಯಿಂದ ತೆರಿಗೆ ಹಣ ದುರುಪಯೋಗ: ಎನ್.ಆರ್.ರಮೇಶ್ ಆರೋಪ

Update: 2018-03-05 12:51 GMT

ಬೆಂಗಳೂರು, ಮಾ. 5: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಂಡು ಬಿಬಿಎಂಪಿ ಸದಸ್ಯರಿಗೆ ಐ-ಪಾಡ್ ವಿತರಿಸಿರುವುದು ಜನವಿರೋಧಿ ಕ್ರಮ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಹರಿಹಾಯ್ದಿದ್ದಾರೆ.

ಬಿಬಿಎಂಪಿ 99 ಲಕ್ಷ ರೂ. ಖರ್ಚು ಮಾಡಿ 198 ಸದಸ್ಯರು ಮತ್ತು 20 ನಾಮ ನಿರ್ದೇಶಿತ ಸದಸರಿಗೆ 44 ಸಾವಿರ ರೂ. ಮೌಲ್ಯದ ಐ-ಪಾಡ್ ವಿತರಿಸಿರುವುದಕ್ಕೆ ಸಮಜಾಯಿಷಿ ನೀಡುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹಾಗೂ ಮೇಯರ್ ಸಂಪತ್‌ರಾಜ್ ಅವರಿಗೆ ರಮೇಶ್ ಪತ್ರ ಬರೆದಿದ್ದಾರೆ.

ಸರಕಾರದ ಅನುಮೋದನೆ ಪಡೆಯದೇ 2018-19ನೇಸಾಲಿನ ಬಜೆಟ್ ಮಂಡನೆಯಾದ ಎರಡೇ ದಿನಗಳಲ್ಲಿ ಯಾವುದೇ ಟೆಂಡರ್ ಕರೆಯದೇ ನೇರವಾಗಿ ಖರೀದಿಸಿ 218 ಬಿಬಿಎಂಪಿ ಸದಸ್ಯರಿಗೆ ಐ-ಪಾಡ್ ವಿತರಿಸಿರುವುದು ಕಾನೂನು ಬಾಹಿರ ಎಂದು ಅವರು ಪತ್ರದಲ್ಲಿ ದೂರಿದ್ದಾರೆ.

ಬಿಬಿಎಂಪಿ ಸದಸ್ಯರು 44 ಸಾವಿರ ಖರ್ಚು ಮಾಡಿ ಐ-ಪಾಡ್ ಖರೀದಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಿದ್ದರೂ, ಜನರ ತೆರಿಗೆ ಹಣದಿಂದ ಖರೀದಿಸಲಾಗಿದೆ ಎಂದು ಆರೋಪಿಸಿರುವ ಅವರು, ಬಿಬಿಎಂಪಿ ಶಾಲಾ-ಕಾಲೇಜು ಶೌಚಾಲಯಗಳಲ್ಲಿ ಸ್ಯಾನಿಟರಿ ಇನ್ಸಿನೇಟರ್ ಯಂತ್ರ ಹಾಗೂ ಪ್ರೊಜೆಕ್ಟರ್ ಟಿವಿ ಅಳವಡಿಸಿಕೊಳ್ಳಲು ಹಣ ಬಳಕೆ ಮಾಡಬಹುದಿತ್ತು ಎಂದು ರಮೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News