ಭ್ರಷ್ಟರ ರಕ್ಷಣೆಗೆ ಸದಾ ಸಿದ್ಧ ಸರಕಾರ: ಆಮ್ ಆದ್ಮಿ ಟೀಕೆ

Update: 2018-03-05 12:55 GMT

ಬೆಂಗಳೂರು, ಮಾ.5: ನೈಸ್ ಯೋಜನೆಯಲ್ಲಿ ಅಕ್ರಮ ಎಸಗಿದ ಆರೋಪ ಹೊತ್ತಿರುವ ಬೀದರ್ ದಕ್ಷಿಣದ ಶಾಸಕ ಆಶೋಕ್ ಖೇಣಿಯನ್ನು ಕಾಂಗ್ರೆಸ್‌ಗೆ ಬರಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಅಸಲಿ ಬಣ್ಣವನ್ನು ಜನತೆಗೆ ತೆರೆದಿಟ್ಟಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ವಕ್ತಾರ ಶಿವಕುಮಾರ್ ಚೆಂಗಲರಾಯ ಟೀಕಿಸಿದ್ದಾರೆ.

ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಬಗ್ಗೆ ಕೀಳಾಗಿ ಮಾತನಾಡಿದ್ದ, ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ನೋಟಿನ ಕಂತೆ ತೋರಿಸಿ ಅವಮಾನಿಸಿದ, ರಾಷ್ಟ್ರೀಯ ಮಾಧ್ಯಮದ ಪತ್ರಕರ್ತೆಯೊಬ್ಬರಿಗೆ ಅವಾಚ್ಯ ಶಬ್ದ ಬಳಸಿದ್ದ, ನೈಸ್ ಯೋಜನೆಯ ಎಲ್ಲ ಒಪ್ಪಂದಗಳನ್ನು ಗಾಳಿಗೆ ತೂರಿರುವ, ಕಾಂಕ್ರೀಟ್ ರಸ್ತೆ ನಿರ್ಮಿಸಲು ಟೆಂಡರ್ ಪಡೆದು ಡಾಂಬರು ರಸ್ತೆ ನಿರ್ಮಿಸಿರುವ, ಅಕ್ರಮ ಭೂ ಒತ್ತುವರಿ, ಅಕ್ರಮ ಗಣಿಗಾರಿಕೆಯೂ ಸೇರಿದಂತೆ ಆರೋಪ ಹಾಗೂ ಹಗರಣಗಳ ಮೂಟೆಯನ್ನೆ ಹೊತ್ತಿರುವ ಶಾಸಕ ಆಶೋಕ್ ಖೇಣಿಯನ್ನು ಯಾವ ನಾಚಿಕೆಯೂ ಇಲ್ಲದಂತೆ ಕಾಂಗ್ರೆಸ್ ಪಕ್ಷ ಸೇರಿಸಿಕೊಂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ರಮ ಗಣಿಗಾರಿಕೆ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷವು, ಗಣಿ ಗ್ಯಾಂಗ್‌ನ ಆನಂದ್ ಸಿಂಗ್ ಅವರನ್ನು ಈಗಾಗಲೇ ತನ್ನ ಪಕ್ಷಕ್ಕೆ ಸೇರಿಸಿಕೊಂಡಿದೆ. ಈಗ ಅಶೋಕ್ ಖೇಣಿ ಸರದಿ, ಮುಂದೆ ಸಮಾಜವಾದಿ ಸಿದ್ದರಾಮಯ್ಯನವರು ಜನಾರ್ದನ ರೆಡ್ಡಿಗೂ ಶಾಲು ಹಾಕಿ ಪಕ್ಷಕ್ಕೆ ಸೇರಿಸಿಕೊಂಡರೂ ಆಶ್ಚರ್ಯ ಪಡೆಬೇಕಿಲ್ಲ ಎಂದು ಅವರು ಪ್ರಕಟನೆಯಲ್ಲಿ ದೂರಿದ್ದಾರೆ.

ಸಿದ್ದರಾಮಯ್ಯ ಅಧಿಕಾರವಧಿಯಲ್ಲೆ ನೈಸ್ ಅಕ್ರಮಗಳ ಕುರಿತಂತೆ ಸಚಿವ ಟಿ.ಬಿ ಜಯಚಂದ್ರ ನೇತೃತ್ವದ 11 ಜನರ ಸದನ ಸಮಿತಿಯು ಸಲ್ಲಿಸಿದ್ದ 392 ಪುಟಗಳ ವರದಿಯಲ್ಲಿ ನೈಸ್ ಅಕ್ರಮದ ಆಳ-ಅಗಲವನ್ನು ಬಿಚ್ಚಿಟ್ಟಿದ್ದು ಮಾತ್ರವಲ್ಲದೇ ಖೇಣಿ ವಿರುದ್ಧ 580 ಕೋಟಿ ರೂ.ಗಳಷ್ಟು ದಂಡವನ್ನು ಹಾಗೂ ಕಠಿಣ ಕ್ರಮಗಳನ್ನೂ ಶಿಫಾರಸ್ಸು ಮಾಡಿತ್ತು. ಅಂದು ಮಾಧ್ಯಮಗಳ ಮುಂದೆ ಸಚಿವ ಟಿ.ಬಿ ಜಯಚಂದ್ರ, ಅಶೋಕ ಖೇಣಿಯ ವಿರುದ್ಧ ಗುಡುಗಿದ್ದರು. ಇಂತಹ ವ್ಯಕ್ತಿಯ ಮೇಲೆ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಜೈಲಿಗೆ ಕಳುಹಿಸುವ ಬದಲು, ಒಳ ಒಪ್ಪಂದ ಮಾಡಿಕೊಂಡು ಶಾಲು ಹಾಕಿ ಸನ್ಮಾನ ಮಾಡಿಕೊಂಡು ಕಾಂಗ್ರೆಸ್ ಪಕ್ಷ ಖೇಣಿಯನ್ನು ಯಾವುದೇ ನಾಚಿಕೆ ಇಲ್ಲದೇ ಬರಸೆಳೆದು ಅಪ್ಪಿಕೊಳ್ಳುತ್ತಿದೆ ಎಂದು ಅವರು ಕಿಡಿಗಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News