ಮಾ.23ಕ್ಕೆ ರಾಜ್ಯಸಭಾ ಚುನಾವಣೆ: ಮಾ.5 ರಿಂದ 12 ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ

Update: 2018-03-05 13:32 GMT

ಬೆಂಗಳೂರು, ಮಾ. 5: ವಿಧಾನಸಭೆಯ ಚುನಾಯಿತ ಸದಸ್ಯರಿಂದ ರಾಜ್ಯಸಭೆಗೆ ಆಯ್ಕೆಗೊಂಡ 4 ಸದಸ್ಯರು 2018ರ ಎಪ್ರಿಲ್ 2ರಂದು ನಿವೃತ್ತರಾಗಲಿರುವುದರಿಂದ ಅವರ ಸ್ಥಾನಗಳನ್ನು ತುಂಬಲು ಮಾ.23ಕ್ಕೆ ಚುನಾವಣಾ ಅಧಿಸೂಚನೆ ಪ್ರಕಟಿಸಲಾಗಿದೆ.

ಮಾ.5ರಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮಾ.12ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ. ಮಾ.13ಕ್ಕೆ ನಾಮಪತ್ರ ಪರಿಶೀಲನೆ, ಮಾ.15ರ ಗುರುವಾರ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ ಎಂದು ತಿಳಿಸಲಾಗಿದೆ.

ಮಾ.23ರ ಶುಕ್ರವಾರ ಬೆಳಗ್ಗೆ 9ರಿಂದ ಸಂಜೆ 4ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5ಗಂಟೆಗೆ ಮತ ಎಣಿಕೆ ಕಾರ್ಯ ಜರುಗಲಿದೆ. ವಿಧಾನಸಭಾ ಕಾರ್ಯದರ್ಶಿ ಎಸ್.ಮೂರ್ತಿ-ಚುನಾವಣಾಧಿಕಾರಿಯಾಗಿದ್ದು, ಜಂಟಿ ಕಾರ್ಯದರ್ಶಿ ಕುಮಾರಸ್ವಾಮಿ- ಸಹಾಯಕ ಚುನಾವಣಾಧಿಯಾಗಿರಲಿದ್ದಾರೆ.

ನಾಮಪತ್ರ ಸಲ್ಲಿಕೆ: ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾ.12ರ ವರೆಗೆ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿ ಕಚೇರಿಯಲ್ಲಿಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದ್ದು, ಮಾ.10(ಎರಡನೆ ಶನಿವಾರ) ಮತ್ತು 11ರಂದು (ರವಿವಾರ) ರಜಾದಿನಗಳಾಗಿದ್ದು, ಆ ದಿನಗಳಂದು ನಾಮಪತ್ರ ಸ್ವೀಕರಿಸುವುದಿಲ್ಲ.

10 ಸಾವಿರ ರೂ.ಠೇವಣಿ: ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ನಾಮಪತ್ರದ ದಸ್ತಾವೇಜನ್ನು ನಿಗದಿತ ನಮೂನೆ 2‘ಸಿ’ಯಲ್ಲಿ ಸಲ್ಲಿಸಬೇಕು ಮತ್ತು ಅವರ ಉಮೇದುವಾರಿಕೆಗೆ ಸೂಚಕರಾಗಿ, ಕನಿಷ್ಟ 10 ಮಂದಿ ಹಾಲಿ ಶಾಸಕರು ಸಹಿ ಮಾಡಿರಬೇಕು.

ಈ ಸಂಬಂಧದಲ್ಲಿ 1951ನೆ ಇಸಯ ಪ್ರಜಾಪ್ರಾತಿನಿಧ್ಯ ಅಧಿನಿಯಮದ 34(1)(ಬಿ) ಯೊಂದಿಗೆ ಓದಲಾದ ಪ್ರಕರಣ 39(2) ಕ್ಕೆ ಅಭ್ಯರ್ಥಿಗಳ ಗಮನವನ್ನು ಸೆಳೆಯಲಾಗಿದೆ. ಎಸ್ಸಿ-ಎಸ್ಟಿ ಅಭ್ಯರ್ಥಿಗಳು ನಾಮಪತ್ರದೊಂದಿಗೆ 5 ಸಾವಿರ ರೂ. ಹಾಗೂ ಇತರ ಅಭ್ಯರ್ಥಿಗಳು 10 ಸಾವಿರ ರೂ.ಠೇವಣಿ ಇಡಬೇಕಾಗುತ್ತದೆ ಎಂದು ಚುನಾವಣಾಧಿಕಾರಿ ಎಸ್.ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News