ಶೋಪಿಯಾನ್ ನಾಗರಿಕರ ಹತ್ಯೆ ಪ್ರಕರಣ: ಎಫ್‌ಐಆರ್‌ನಲ್ಲಿ ಮೇಜರ್ ಹೆಸರು ಕೈಬಿಟ್ಟ ಕಾಶ್ಮೀರ ಸರಕಾರ

Update: 2018-03-05 17:07 GMT

ಹೊಸದಿಲ್ಲಿ,ಮಾ.5: ಕಳೆದ ಜನವರಿಯಲ್ಲಿ ಜಮ್ಮುಕಾಶ್ಮೀರದ ಶೋಪಿಯಾನ್‌ನಲ್ಲಿ ಸೇನಾಪಡೆಗಳ ಗುಂಡೇಟಿಗೆ ಮೂವರು ನಾಗರಿಕರು ಮೃತಪಟ್ಟ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.

  ಶೋಪಿಯಾನ್ ನಾಗರಿಕರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿದ ಪ್ರಾಥಮಿಕ ಮಾಹಿತಿ ವರದಿ (ಎಫ್‌ಐಆರ್)ನಲ್ಲಿ ಮೇಜರ್ ಆದಿತ್ಯನಾಥ್ ಅವರನ್ನು ಹೆಸರಿಸಿಲ್ಲವೆಂದು ಜಮ್ಮುಕಾಶ್ಮೀರ ಸರಕಾರವು ಸುಪ್ರೀಂಕೋರ್ಟ್‌ಗೆ ತಿಳಿಸಿತು. ಈ ಹಿನ್ನೆಲೆಯಲ್ಲಿ ಶೋಪಿಯಾನ್ ಗುಂಡೆಸೆತ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾದೀಶ ದೀಪಕ್‌ಮಿಶ್ರಾ, ವೈ.ವಿ.ಚಂದ್ರಚೂಡ ಹಾಗೂ ವಿ.ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿದ್ದು, ಎಪ್ರಿಲ್ 24ರಂದು ಈ ಬಗ್ಗೆ ತೀರ್ಪು ನೀಡುವುದಾಗಿ ತಿಳಿಸಿದೆ.

 ಇಂದು ಪ್ರಕರಣದ ಆಲಿಕೆ ನಡೆಸಿದ ದೀಪಕ್‌ಮಿಶ್ರಾ ನೇತೃತ್ವದ ನ್ಯಾಯಪೀಠವು, ಮೇಜರ್ ಆದಿತ್ಯಕುಮಾರ್ ಸೇನಾಧಿಕಾರಿಯಾಗಿದ್ದು, ಆತನನ್ನು ಸಾಮಾನ್ಯ ಅಪರಾಧಿಯಂತೆ ಪರಿಗಣಿಸಲು ಸಾಧ್ಯವಿಲ್ಲವೆಂದು ಅಭಿಪ್ರಾಯಿಸಿತು.

ಜನವರಿ 27ರಂದು ಶೋಪಿಯಾನ್‌ನ ಗನೊವ್‌ಪೊರಾ ಗ್ರಾಮದಲ್ಲಿ ತಮ್ಮ ಮೇಲೆ ಕಲ್ಲೆಸೆತದಲ್ಲಿ ತೊಡಗಿದ್ದರೆನ್ನಲಾದ ಜನರಗುಂಪಿನ ಮೇಲೆ ಪೊಲೀಸರ ಬೆಂಗಾವಲು ವಾಹನದಲ್ಲಿದ್ದ ಸೇನಾ ಸಿಬ್ಬಂದಿ ಗುಂಡು ಹಾರಿಸಿದಾಗ ಮೂವರು ನಾಗರಿಕರು ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಮೇಜರ್ ಆದಿತ್ಯ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಆದರೆ ಇದೀಗ ಬಹಿರಂಗಗೊಂಡಿರುವ ವಸ್ತುಸ್ಥಿತಿ ವರದಿ ಅನ್ವಯ ಎಫ್‌ಐಆರ್‌ನಿಂದ ಆದಿತ್ಯ ಕುಮಾರ್ ಅವರ ಹೆಸರನ್ನು ತೆಗೆದುಹಾಕಿರುವುದು ತಿಳಿದುಬಂದಿದೆ.

 ಶೋಪಿಯಾನ್ ಪ್ರಕರಣದಲ್ಲಿ ತನ್ನ ಪುತ್ರನ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಪ್ರಶ್ನಿಸಿ ಮೇಜರ್ ಆದಿತ್ಯ ಕುಮಾರ್ ಅವರ ತಂದೆ ಲೆ.ಕ. ಕರಮ್‌ವೀರ್ ಸಿಂಗ್ ಕಳೆದ ತಿಂಗಳು ಸುಪ್ರೀಂಕೋರ್ಟ್‌ನ ಮೆಟ್ಟಲೇರಿದ್ದರು. ಸೇನಾಧಿಕಾರಿಯಾದ ತನ್ನ ಪುತ್ರ ಕರ್ತವ್ಯವನ್ನಷ್ಟೇ ನಿರ್ವಹಿಸಿದ್ದಾನೆ. ಆತನ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ತಪ್ಪು ನಿರ್ಧಾರವಾಗಿದೆಯೆಂದು ಅವರು ವಾದಿಸಿದ್ದರು ಹಾಗೂ ತನ್ನ ಪುತ್ರನ ವಿರುದ್ಧದ ಎಫ್‌ಐಆರ್‌ನ್ನು ರದ್ದುಪಡಿಸುವಂತೆ ಅವರು ಆಗ್ರಹಿಸಿದ್ದರು.

ಶೋಪಿಯಾನ್ ನಾಗರಿಕರ ಮೇಲೆ ಗೋಲಿಬಾರ್ ನಡೆದ ಸಂದರ್ಭದಲ್ಲಿ ತನ್ನ ಪುತ್ರ ಸ್ಥಳದಲ್ಲಿರಲಿಲ್ಲವೆಂದು ಕಾರ್ಗಿಲ್ ಯುದ್ಧದಲ್ಲೂ ಪಾಲ್ಗೊಂಡಿದ್ದ ಲೆ.ಕ.ಸಿಂಗ್ ತಿಳಿಸಿದ್ದರು. ಸೇವಾ ನಿರತ ಸೇನಾಸಿಬ್ಬಂದಿಯ ಮೇಲೆ ಎಫ್‌ಐಆರ್ ದಾಖಲಿಸುವುದರಿಂದ, ಪ್ರತಿಕೂಲ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧರ ನೈತಿಕಸ್ಥೆರ್ಯವನ್ನು ಕುಗ್ಗಿಸುವುದೆಂದು ಅವರು ಅರ್ಜಿಯಲ್ಲಿ ತಿಳಿಸಿದ್ದರು.

   ಶೋಪಿಯಾನ್‌ನಲ್ಲಿ ನಾಗರಿಕರ ಗುಂಡೆಸೆತವನ್ನು ಸಮರ್ಥಿಸಿದ್ದ ಸೇನೆಯು, ಪ್ರತಿಭಟನಕಾರರು ಗರಿಷ್ಠ ಮಟ್ಟಕ್ಕೆ ತಮ್ಮನ್ನು ಪ್ರಚೋದಿಸಿದ ಹಿನ್ನೆಲೆಯಲ್ಲಿ ತನ್ನ ಯೋಧರು ಗುಂಡು ಹಾರಿಸಬೇಕಾಯಿತೆಂದು ತಿಳಿಸಿತ್ತು. ಇಂದು ನಡೆದ ಆಲಿಕೆಯ ವೇಳೆ ಕೇಂದ್ರ ಸರಕಾರವು ವಾದ ಮಂಡಿಸುತ್ತಾ ಜಮ್ಮುಕಾಶ್ಮೀರದಲ್ಲಿ ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆ ಜಾರಿಯಲ್ಲಿರುವುದರಿಂದ ಕೇಂದ್ರದ ಅನುಮತಿಯಿಲ್ಲದೆ ಮೇಜರ್ ಆದಿತ್ಯ ಕುಮಾರ್ ಹಾಗೂ ಇತರ ಸೇನಾ ಸಿಬ್ಬಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲು ಸಾಧ್ಯವಾಗದು ಎಂದು ಒತ್ತಿ ಹೇಳಿದೆ. ಆದರೆ ಇದನ್ನು ವಿರೋಧಿಸಿದ ರಾಜ್ಯ ಸರಕಾರವು, ಪ್ರಕರಣ ದಾಖಲಿಸಲು ರಾಜ್ಯದ ಪೊಲೀಸರಿಗೆ ಯಾವುದೇ ನಿರ್ಬಂಧಗಳಿಲ್ಲವೆಂದು ಪ್ರತಿಪಾದಿಸಿದೆ.

ಶೋಪಿಯಾನ್ ನಾಗರಿಕರ ಹತ್ಯೆಯು ಕಾಶ್ಮೀರದಲ್ಲಿ ಭಾರೀ ಅಶಾಂತಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸುವುದಾಗಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಭರವಸೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News