ಭೂಗತ ಪಾತಕಿ ದಾವೂದ್ ಇಬ್ರಾಹೀಂ ಭಾರತಕ್ಕೆ ಬರುತ್ತಾನಂತೆ...!

Update: 2018-03-07 05:24 GMT

ಥಾಣೆ, ಮಾ.7: ದೇಶಭ್ರಷ್ಟ ಆರೋಪ ಎದುರಿಸುತ್ತಿರುವ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಅರ್ಥರ್ ರೋಡ್ ಜೈಲಿನಲ್ಲಿ ಬಂಧಿಸಿಡುವುದಾದರೆ ಆತ ಭಾರತಕ್ಕೆ ಬರಲು ಸಿದ್ಧ ಎಂದು ಒಪ್ಪಿಕೊಂಡಿದ್ದಾಗಿ ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅಧಿಕಾರಿಗಳು ತಿಳಿಸಿದ್ದಾರೆ.

"ಹಿರಿಯ ವಕೀಲ ರಾಮ್ ಜೇಠ್ಮಲಾನಿ ಬಳಿ ದಾವೂದ್ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ಆದರೆ ಸರ್ಕಾರ ಆತನ ಷರತ್ತುಬದ್ಧ ವಾಪಸ್ಸಾತಿಯನ್ನು ಇಂದಿನವರೆಗೆ ಒಪ್ಪಿಕೊಂಡಿಲ್ಲ. ಅದಕ್ಕೆ ದಾವೂದ್‌ನನ್ನು ಬಂಧಿಸಲು ಸಾಧ್ಯವಾಗಿಲ್ಲ" ಎಂದು ದಾವೂದ್ ತಮ್ಮ ಇಕ್ಬಾಲ್ ಕಾಸ್ಕರ್ ಪರ ಸುಲಿಗೆ ಪ್ರಕರಣದಲ್ಲಿ ವಕಾಲತ್ತು ಮಾಡುತ್ತಿರುವ ಹಿರಿಯ ವಕೀಲ ಶ್ಯಾಮ್ ಕೇಶ್ವಾನಿ ಹೇಳಿದರು.

ಸುಲಿಗೆ ಪ್ರಕರಣದಲ್ಲಿ ಕಸ್ಟಡಿ ಅವಧಿ ವಿಸ್ತರಿಸುವ ಸಲುವಾಗಿ ಕಾಸ್ಕರ್‌ನನ್ನು ಪೊಲೀಸರು ಮಂಗಳವಾರ ಮುಖ್ಯ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಆರ್.ವಿ.ತಮಡೇಕರ್ ಮುಂದೆ ಹಾಜರುಪಡಿಸಿದರು.

ಮೀರಾ ರಸ್ತೆಯ ಬಿಲ್ಡರ್ ಒಬ್ಬರಿಗೆ ಬೆದರಿಸಿ ಸುಲಿಗೆಗೆ ಯತ್ನಿಸಿದ ಪ್ರಕರಣದಲ್ಲಿ ಕಾಸ್ಕರ್ ಹಾಗೂ ದಾವೂದ್ ಆರೋಪಿಗಳಾಗಿದ್ದಾರೆ.

ಕುಟುಂಬದ ಇತರ ಸದಸ್ಯರ ಚಲನವಲನಗಳ ಬಗ್ಗೆ ಮಾಹಿತಿ ಇದೆಯೇ ಎಂದು ನ್ಯಾಯಾಧೀಶರು ಕಾಸ್ಕರ್‌ನನ್ನು ಕೇಳಿದಾಗ "ಇಲ್ಲ" ಎಂಬ ಉತ್ತರ ಬಂತು. ಇತ್ತೀಚಿನ ದಿನಗಳಲ್ಲಿ ದಾವೂದ್ ಜತೆ ಮಾತನಾಡಿದ್ದಿದೆಯೇ ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ ಒಂದು ಕ್ಷಣ ಇಡೀ ನ್ಯಾಯಾಲಯ ಮೌನವಾಯಿತು. ಅಣ್ಣನ ವಾಸಸ್ಥಳದ ಬಗ್ಗೆ ಮಾಹಿತಿ ಇಲ್ಲ ಎಂದು ಕಾಸ್ಕರ್ ಉತ್ತರಿಸಿದ. ಆದರೆ ದಾವೂದ್ ಜತೆ ಮೊಬೈಲ್‌ನಲ್ಲಿ ಮಾತನಾಡಿದ್ದೇನೆ. ಆದರೆ ಆ ಸಂಖ್ಯೆ ಕಾಣುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News