ಬಿಜೆಪಿ- ಟಿಡಿಪಿ ಮೈತ್ರಿ ಖತಂ?

Update: 2018-03-07 04:13 GMT

ವಿಜಯವಾಡ, ಮಾ.7: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ನಿರಾಕರಿಸುವುದರೊಂದಿಗೆ ಕೇಂದ್ರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದಿಂದ ತೆಲುಗು ದೇಶಂ ಪಕ್ಷ ಹೊರ ನಡೆಯುವುದು ಬಹುತೇಕ ಖಚಿತವಾಗಿದೆ.

ಕೇಂದ್ರದ ನಿರಾಕರಣೆ ಹಿನ್ನೆಲೆಯಲ್ಲಿ ತೆಲುಗುದೇಶಂ ಪಕ್ಷದ ಹಲವು ವಿಧಾನಸಭಾ ಹಾಗೂ ವಿಧಾನ ಪರಿಷತ್ ಸದಸ್ಯರು ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಳ್ಳಲು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೇಂದ್ರದಲ್ಲಿರುವ ಇಬ್ಬರು ಟಿಡಿಪಿ ಸಚಿವರಾದ ಅಶೋಕ್ ಗಜಪತಿರಾಜು ಹಾಗೂ ವೈ.ಎಸ್.ಚೌಧರಿಯವರ ರಾಜೀನಾಮೆ ಕೇಳುವ ಮೂಲಕ ವಿಚ್ಛೇದನ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

ಮಂಗಳವಾರ ವಿಜಯವಾಡದಲ್ಲಿ ನಡೆದ ತೆಲುಗುದೇಶಂ ಶಾಸಕಾಂಗ ಪಕ್ಷದ ಸಭೆಯಲ್ಲಿ ಗೈರುಹಾಜರಾಗಿದ್ದ ಆರು ಮಂದಿಯನ್ನು ಹೊರತುಪಡಿಸಿ 125 ವಿಧಾನಸಭಾ ಸದಸ್ಯರು ಹಾಗೂ 34 ವಿಧಾನ ಪರಿಷತ್ ಸದಸ್ಯರು, ಬಿಜೆಪಿ ಮೈತ್ರಿ ಮುರಿದುಕೊಳ್ಳುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು ಎಂದು ತಿಳಿದು ಬಂದಿದೆ. ಮಾರ್ಚ್ 10ರಂದು ಟಿಡಿಪಿಯ ಇಬ್ಬರು ಕೇಂದ್ರ ಸಚಿವರು ರಾಜೀನಾಮೆ ನೀಡುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ಇದಾದ ಕೆಲವೇ ದಿನಗಳಲ್ಲಿ ಕೇಂದ್ರಕ್ಕೆ ನೀಡಿದ ಬೆಂಬಲವನ್ನು ಪಕ್ಷ ವಾಪಸ್ ಪಡೆಯಲಾಗುವುದು ಎಂದು ಮೂಲಗಳು ವಿವರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News