ಶಾಲಾ ಮಕ್ಕಳಿಗೆ ಪುಠ್ಯ ಪುಸ್ತಕ ವಿತರಿಸಲು ಸಚಿವ ಸಂಪುಟ ಒಪ್ಪಿಗೆ: ಟಿ.ಬಿ.ಜಯಚಂದ್ರ

Update: 2018-03-07 15:30 GMT

ಬೆಂಗಳೂರು, ಮಾ.7: 2018-19ನೆ ಸಾಲಿನ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ನೆ ತರಗತಿಯಿಂದ 10ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸರಕಾರಿ ಶಾಲೆಗಳ 4 ರಿಂದ 9ನೆ ತರಗತಿಯ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ ಮತ್ತು 1 ರಿಂದ 12ನೆ ತರಗತಿಯ ವಿದ್ಯಾರ್ಥಿಗಳಿಗೆ ದಿನಚರಿಗಳನ್ನು 152 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ವಿತರಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.

ಇತರ ನಿರ್ಣಯಗಳು: ‘ರಾಜ್ಯ ಸೂಕ್ಷ್ಮ ನೀರಾವರಿ ನೀತಿ-2017’ಕ್ಕೆ ಅನುಮೊದನೆ ಹಾಗೂ ರಾಜ್ಯ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ನಿಯಮಗಳು- 2013ಕ್ಕೆ ತಿದ್ದುಪಡಿ ಮಾಡಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ ಎಂದು ಜಯಚಂದ್ರ ಹೇಳಿದರು.

ಕೆಎಎಸ್ ಅಧಿಕಾರಿ ಸತೀಶ್‌ಕುಮಾರ್ ಹಾಗೂ ಸಾಗರ ತಾಲೂಕು ತಹಶೀಲ್ದಾರ್ ಧರ್ಮೋಜಿರಾವ್ ವಿರುದ್ಧ ಇಲಾಖಾ ವಿಚಾರಣೆಯನ್ನು ವಹಿಸುವಂತೆ ಉಪ ಲೋಕಾಯುಕ್ತರು ಮಾಡಿರುವ ಶಿಫಾರಸ್ಸನ್ನು ತಿರಸ್ಕರಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಅವರು ತಿಳಿಸಿದರು.

ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಕಸಬಾ ಹೋಬಳಿಯ ರಾಯಸಂದ್ರ ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿಯ ವತಿಯಿಂದ ವಸತಿ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಜಮೀನು ಮಾಲಕರಿಗೆ ಸಾಂತ್ವನ ನಿವೇಶನ ಹಂಚಿಕೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಯಚಂದ್ರ ಹೇಳಿದರು.

ನಬಾರ್ಡ್ ನೆರವಿನ ಆರ್‌ಐಡಿಎಫ್-23 ಯೋಜನೆಯಡಿಯಲ್ಲಿ ಅನುಮೋದನೆಯಾಗಿರುವ ಒಟ್ಟು 31 ಆಸ್ಪತ್ರೆ ಕಟ್ಟಡಗಳ 104.11 ಕೋಟಿ ರೂ.ಗಳ ಅಂದಾಜು ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

428 ಕಿ.ಮೀ.ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಲು ಬೇಕಾಗುವ 1361 ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳ ಮೂಲಕ ನೇರವಾಗಿ ಖರೀದಿ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ಹೇಳಿದರು.

ಕೇಂದ್ರ ಸರಕಾರವು 35 ಲಕ್ಷ ಟನ್ ತೊಗರಿ ಖರೀದಿಗೆ ಅನುಮೋದನೆ ನೀಡಿದೆ. ರೈತರಿಗೆ ಕೇಂದ್ರ ಸರಕಾರ ನೀಡುತ್ತಿರುವ ಬೆಂಬಲ ಬೆಲೆ ಜತೆಗೆ ರಾಜ್ಯ ಸರಕಾರವು ಹೆಚ್ಚುವರಿಯಾಗಿ 550 ರೂ.ಗಳನ್ನು ನೀಡುತ್ತಿದೆ. ಇದಕ್ಕಾಗಿ 200 ಕೋಟಿ ರೂ.ಗಳನ್ನು ಆವರ್ಥ ನಿಧಿಯಿಂದ ಬಿಡುಗಡೆ ಮಾಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಅವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ 2.46 ಕಿ.ಮೀ. ಉದ್ದದ ರಸ್ತೆಗಳನ್ನು 32.50 ಕೋಟಿ ರೂ.ಮೊತ್ತದಲ್ಲಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಸೇರಿದ ಒಟ್ಟು 5.59 ಕಿ.ಮೀ ಉದ್ದದ ರಸ್ತೆಗಳನ್ನು 36.10 ಕೋಟಿ ರೂ.ಗಳ ಮೊತ್ತದಲ್ಲಿ ಕಾಂಕ್ರೀಟ್ ರಸ್ತೆಗಳನ್ನಾಗಿ ಉನ್ನತೀಕರಿಸಲು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.33ರಲ್ಲಿ 25 ಸೆಂಟ್ಸ್ ಪ್ರದೇಶದಲ್ಲಿರುವ ಶಿಥಿಲವಾದ ಕದ್ರಿ ಮಾರುಕಟ್ಟೆ ಸಂಕೀರ್ಣವನ್ನು ನೆಲಸಮಗೊಳಿಸಿ ಒಟ್ಟು 45 ಸೆಂಟ್ಸ್ ಜಾಗದಲ್ಲಿ 12.30 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಹೊಸ ಮಾರುಕಟ್ಟೆ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ಹೇಳಿದರು.

ರಾಜ್ಯದ ಎಲ್ಲ ಸ್ಮಾರ್ಟ್ ಸಿಟಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾಂಪ್ರದಾಯಿಕ ಬೀದಿ ದೀಪಗಳ ಬದಲಿಗೆ ಕೇಂದ್ರೀಕೃತ ನಿಯಂತ್ರಣ ಮತ್ತು ಉಸ್ತುವಾರಿ ಹೊಂದಿದ ಎಲ್‌ಇಡಿ ದೀಪಗಳನ್ನು ಅಳವಡಿಸುವ ಇಂಧನ ಕ್ಷಮತಾ ಯೋಜನೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೂಸನೂರು ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ 90.17 ಎಕರೆ ಜಮೀನಿನಲ್ಲಿ ವಸತಿ ಯೋಜನೆ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ಹೇಳಿದರು.

ದೊಡ್ಡಬೆಲೆ ತ್ಯಾಜ್ಯ ನೀರು ಶುದ್ಧೀಕರಣ ಘಟಕದ ಹತ್ತಿರದಿಂದ ರಾಮನಗರ ತಾಲೂಕಿನ ಬಿಡದಿ ಹೋಬಳಿ ಹಾಗೂ ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ 146 ಕೋಟಿ ರೂ.ಗಳ ಮೊತ್ತದ ಯೋಜನೆಯ ಮಾರ್ಪಡಿತ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಪಾಂಡವಪುರ ತಾಲೂಕಿನಲ್ಲಿ ಅಸ್ತಿತ್ವದಲ್ಲಿರುವ ಮಲ್ಲಿಗೆರೆ ಏತ ನೀರಾವರಿ ಯೋಜನೆಯನ್ನು ಅಭಿವೃದ್ಧಿಪಡಿಸಿ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸುವ 22 ಕೋಟಿ ರೂ.ಗಳ ಮೊತ್ತದ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ಹೇಳಿದರು.

ಕಾವೇರಿ ನೀರಾವರಿ ನಿಗಮದ ವಶದಲ್ಲಿರುವ ಮಂಚನಬೆಲೆ ವ್ಯಾಪ್ತಿಯ ವಾಡಹಳ್ಳಿಯಲ್ಲಿ 1-20 ಎಕರೆ ಜಮೀನನ್ನು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಕುಂಬಳಗೋಡು ಮತ್ತು 32 ಗ್ರಾಮಗಳಿಗೆ ಸುರಕ್ಷಿತ ಕುಡಿಯುವ ನೀರು ಸರಬರಾಜು ಯೋಜನೆಯ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಹಸ್ತಾಂತರಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

 ಮೈಸೂರು ಜಿಲ್ಲೆ ಮತ್ತು ತಾಲೂಕಿನ ಇಲವಾಲ ಹೋಬಳಿಯ ಬತ್ತಿ ಹೋಗಿರುವ ಕೆರೆಗಳಿಗೆ ನೀರು ತುಂಬಿಸುವ ಆನಂದೂರು ಕೊಪ್ಪಲ್ ಬಳಿ ಏತ ನೀರಾವರಿ ಕಾಮಗಾರಿಯ 31 ಕೋಟಿ ರೂ.ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ಹೇಳಿದರು.

ಮಾದಿಗ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕವಾಗಿ ಡಾ.ಬಾಬು ಜಗಜೀವನ್‌ರಾಮ್ ನಿಗಮ ಸ್ಥಾಪಿಸಲು ಸಚಿವ ಸಂಪುಟ ಸಭೆ ತೀರ್ಮಾನ ಮಾಡಿದ್ದು, ಪ್ರತಿ ವರ್ಷ ಇದಕ್ಕೆ 500 ಕೋಟಿ ರೂ.ಅನುದಾನ ಒದಗಿಸಲು ನಿರ್ಧರಿಸಲಾಗಿದೆ.
-ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ 

ನ್ಯಾ.ವಿಶ್ವನಾಥ್ ಶೆಟ್ಟಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ಹೋಗಿ ಅವರ ಆರೋಗ್ಯ ವಿಚಾರಿಸಿದ್ದೇನೆ. ಲೋಕಾಯುಕ್ತ ಕಚೇರಿಯಲ್ಲಿ ಎಲ್ಲಿ ಭದ್ರತಾ ಲೋಪವಾಗಿದೆ ಅನ್ನೋದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ.
-ಟಿ.ಬಿ.ಜಯಚಂದ್ರ, ಕಾನೂನು ಸಚಿವ

ಲೋಕಾಯುಕ್ತ ನ್ಯಾಯಮೂರ್ತಿ ಮೇಲೆ ನಡೆದಿರುವ ಹಲ್ಲೆಯು ದುರಾದೃಷ್ಟಕರ ಪ್ರಕರಣ. ಬಿಜೆಪಿ ಕಾಲದಲ್ಲಿ ಯಾವ ಕೊಲೆಗಳು ಆಗಲಿಲ್ಲವೇ? ನಾವು ಮಾನವ ಸಮಾಜದಲ್ಲಿದ್ದೇವೆ. ಸಾಮಾಜಿಕ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ಸಹಜ. ಎಲ್ಲ ಕಾಲದಲ್ಲೂ ಇಂತಹ ಘಟನೆಗಳು ನಡೆದಿವೆ. ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನಡಿಯನ್ನೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
-ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News