ಸುಳ್ಳು ಪ್ರಕರಣ ಬಳಸಿ ಕಿರುಕುಳ ನೀಡುತ್ತಿರುವ ಗುಜರಾತ್ ಸರಕಾರ: ಆರೋಪ

Update: 2018-03-07 16:39 GMT

ಹೊಸದಿಲ್ಲಿ, ಮಾ.7: ರಾಜ್ಯ ಸರಕಾರವು ದುರುದ್ದೇಶಪೂರಿತ ಮತ್ತು ಸುಳ್ಳು ಪ್ರಕರಣಗಳನ್ನು ಬಳಸಿ ತನ್ನ ಮೇಲೆ ನಿಯಂತ್ರಣ ಹೇರಲು ಪ್ರಯತ್ನಿಸುತ್ತಿದೆ ಎಂದು 2002ರ ಗುಜರಾತ್ ನರಮೇಧದ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಮತ್ತು ಸೌಹಾರ್ದ ಮೂಡಿಸಲು ದುಡಿಯುತ್ತಿರುವ ಸಿಟಿಝನ್ ಫಾರ್ ಜಸ್ಟಿಸ್ ಆ್ಯಂಡ್ ಪೀಸ್ ಆರೋಪಿಸಿದೆ.

ಸಂಸ್ಥೆಯ ಕಾರ್ಯದರ್ಶಿ ತೀಸ್ತಾ ಸೆಟಲ್ವಾಡ್‌ಗೆ 2011ರಲ್ಲಿ ನೀಡಲಾಗಿರುವ ನಿರೀಕ್ಷಣಾ ಜಾಮೀನನ್ನು ರದ್ದು ಮಾಡಲು ಹವಣಿಸುತ್ತಿರುವುದರಿಂದ ಅವರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಪಾಯ ಎದುರಾಗಿದೆ ಎಂದು ಸಂಸ್ಥೆ ಆರೋಪಿಸಿದೆ. ಈ ಸಂಕಷ್ಟದ ಸಮಯದಲ್ಲಿ ತನಗೆ ಬೆಂಬಲ ನೀಡುವಂತೆ ಸ್ನೇಹಿತರಲ್ಲಿ ಮನವಿ ಮಾಡಿರುವ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಹಲವು ಬಾರಿ ತನ್ನ ಮೇಲೆ ದೌರ್ಜನ್ಯ ಮತ್ತು ಆರೋಪವನ್ನು ಹೊರಿಸಲಾಗಿದೆ ಎಂದು ಆರೋಪಿಸಿದೆ. ತೀರಾ ಇತ್ತೀಚೆಗೆ, ಸಂಸ್ಥೆಯು ನರೋಡಾ ಗ್ರಾಮ್ ಪ್ರಕರಣದಲ್ಲಿ ಪೊಲೀಸರಿಗೆ ತನಿಖೆಯಲ್ಲಿ ಸಹಕರಿಸುತ್ತಿಲ್ಲ ಎಂದು ಆರೋಪಿಸಲಾಗಿದ್ದು, ಈ ಪ್ರಕರಣದಲ್ಲಿ ನೀಡಲಾಗಿರುವ ನಿರೀಕ್ಷಣಾ ಜಾಮೀನನ್ನು ರದ್ದು ಮಾಡಬೇಕೆಂದು ಕೋರಿ ಗುಜರಾತ್ ಸರಕಾರವು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಗುಜರಾತ್ ಹೈಕೋರ್ಟ್‌ನಲ್ಲಿ ತೀಸ್ತಾ ಸೆಟಲ್ವಾಡ್ ಹಾಕಿರುವ ಅರ್ಜಿಯಲ್ಲಿ ತನ್ನ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. 2011ರ ಫೆಬ್ರವರಿಯಲ್ಲಿ ಕೆಳ ನ್ಯಾಯಾಲಯ ನನ್ನ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು ಮತ್ತು ನನಗೆ ರಕ್ಷಣೆ ಒದಗಿಸಿತ್ತು ಎಂದು ತೀಸ್ತಾ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News