ಕೋಮು ಶಕ್ತಿಗಳನ್ನು ತಡೆಯದಿದ್ದರೆ ದಲಿತರಿಗೆ ಉಳಿಗಾಲವಿಲ್ಲ: ಎಚ್.ಸಿ.ಮಹದೇವಪ್ಪ

Update: 2018-03-08 12:12 GMT

ಬೆಂಗಳೂರು, ಫೆ.8: ರಾಜ್ಯದಲ್ಲಿ ಕೋಮು ಹಾಗೂ ಮೂಲಭೂತವಾದಿ ಶಕ್ತಿಗಳನ್ನು ತಲೆಯೆತ್ತದಂತೆ ತಡೆಯದಿದ್ದರೆ ದಲಿತ, ಹಿಂದುಳಿದ ಹಾಗೂ ಮಹಿಳಾ ಸಮುದಾಯಕ್ಕೆ ಉಳಿಗಾಲವಿಲ್ಲವೆಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಎಚ್ಚರಿಸಿದರು.

ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ಜಾಗೃತ ನೌಕರರ 3ನೆ ರಾಜ್ಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೋಮುವಾದಿ ಶಕ್ತಿಗಳಿಗೆ ದೇಶದ ಸಂವಿಧಾನದ ಮೇಲೆ ನಂಬಿಕೆಯಿಲ್ಲ. ಹೀಗಾಗಿ ಸಂವಿಧಾನಕ್ಕೆ ಪರ್ಯಾಯವಾಗಿ ಧರ್ಮ ಸಂಸತ್ ನಡೆಸಿ, ಮನುವಾದಿ ನಿಯಮಗಳನ್ನು ಜಾರಿ ಮಾಡಲು ಹೊರಟಿದ್ದಾರೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಳ್ಳುವತ್ತ ಸಾಗಿದೆ. ಇಂತಹ ಸಂದರ್ಭದಲ್ಲಿ ದಲಿತ ಹಾಗೂ ಪ್ರಗತಿಪರ ಚಳವಳಿಗಳು ಶಕ್ತಿಯುತವಾಗಿ ಬೆಳೆಯಬೇಕಾಗಿದೆ ಎಂದು ಅವರು ಹೇಳಿದರು.

ದೇಶಾದ್ಯಂತ ಕೋಮುವಾದಿಗಳ ಉಪಟಳ ಹೆಚ್ಚಾಗಿದೆ. ಹಸುವಿನ ಚರ್ಮ ಸಾಗಿಸುತ್ತಿದ್ದ ದಲಿತ ಯುವಕರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಹೀಗೆ ಕ್ಷುಲಕ ಕಾರಣಗಳಿಗೆ ದಲಿತರ ಮೇಲೆ ಹಲ್ಲೆ, ಕೊಲೆ, ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಾರೆ. ಕೋಮುವಾದಿಗಳ ಇಂತಹ ದಾಳಿಗಳಿಗೆ ದಲಿತ ಸಮುದಾಯ ಪ್ರತಿದಾಳಿ ನಡೆಸಲು ಸಮರ್ಥವಾಗಬೇಕೆಂದು ಅವರು ಹೇಳಿದರು.

ಎಸ್ಸಿ, ಎಸ್ಟಿ ನೌಕರರ ಜವಾಬ್ದಾರಿ ಹೆಚ್ಚು: ದೇಶದ ಎಸ್ಸಿ, ಎಸ್ಟಿ ಸರಕಾರಿ ನೌಕರರು ಹಾಗೂ ದಲಿತ ಜನಪ್ರತಿನಿಧಿಗಳು ಡಾ.ಬಿ.ಆರ್.ಅಂಬೇಡ್ಕರ್‌ರವರ ಫಲಾನುಭವಿಗಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ನಮಗೆ ಸಿಕ್ಕಿರುವ ಅವಕಾಶ ಹಾಗೂ ಅಧಿಕಾರವನ್ನು ದಲಿತ ಸಮುದಾಯದ ಏಳಿಗೆಗೆ ಬಳಸಿಕೊಳ್ಳಬೇಕು ಎಂದು ಅವರು ಆಶಿಸಿದರು.

ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷ ಶಿವಶಂಕರ್ ಮಾತನಾಡಿ, ದೇಶದಲ್ಲಿ ರಾಜಸ್ಥಾನ ಹಾಗೂ ತಮಿಳುನಾಡಿನಲ್ಲಿ ಎಸ್ಸಿ, ಎಷ್ಟಿ ಸರಕಾರಿ ನೌಕರರ ಭಡ್ತಿ ಮೀಸಲಾತಿ ರದ್ದಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮುತುವರ್ಜಿಯಿಂದ ಕರ್ನಾಟಕದಲ್ಲಿ ಭಡ್ತಿ ಮೀಸಲಾತಿ ಕಾಯ್ದೆ ತಂದು ಸದನದಲ್ಲಿ ಅನುಮೋದಿಸಿ ರಾಜ್ಯಪಾಲರ ಒಪ್ಪಿಗೆ ಪಡೆದು, ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಐದು ವರ್ಷದ ಆಡಳಿತದಲ್ಲಿ ದಲಿತ ಸಮುದಾಯಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಆಡಳಿತದಲ್ಲಿ ಎಲ್ಲ ಜಾತಿ ಸಮುದಾಯಗಳು ಸಾಕಷ್ಟು ಅನುದಾನಗಳನ್ನು ಪಡೆದು ಆರ್ಥಿಕ ಹಾಗೂ ಸಾಮಾಜಿಕವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಹಿರಿಯ ಕವಿ ಡಾ.ಸಿದ್ಧಲಿಂಗಯ್ಯ, ಪ್ರೊ.ಕೆ.ಬಿ.ಸಿದ್ದಯ್ಯ, ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ಡಾ.ಎಸ್.ವಿಜಯಕುಮಾರ್ ಮತ್ತಿತರರಿದ್ದರು.

ಸಿದ್ದರಾಮಯ್ಯ ನೂರಕ್ಕೆ ನೂರು ದಲಿತ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ಜಾತಿಯಲ್ಲಿ ಹುಟ್ಟಿದ್ದರೂ ದಲಿತ ನಾಯಕನಂತೆ ಕೆಲಸ ಮಾಡಿದ್ದಾರೆ. ಎಸ್ಸಿಪಿ-ಟಿಎಸ್ಪಿ ಅನುದಾನದಡಿ ದಲಿತ ಸಮುದಾಯಕ್ಕೆ ಕಳೆದ ನಾಲ್ಕೂವರೆ ವರ್ಷದಲ್ಲಿ 80 ಸಾವಿರ ಕೋಟಿ ರೂ. ನೀಡಿದ್ದಾರೆ. ಇಷ್ಟು ಅನುದಾನವನ್ನು ದಲಿತ ಮುಖ್ಯಮಂತ್ರಿಯಾಗಿದ್ದರೂ ನೀಡುತ್ತಿರಲಿಲ್ಲ. ಐಐಟಿ, ಐಐಎಂಗಳಲ್ಲಿ ದಲಿತರಿಗೆ ಮೀಸಲಾತಿ ನೀಡಲು ಕ್ರಮ ಕೈಗೊಂಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೂರಕ್ಕೆ ನೂರು ದಲಿತ ಮುಖ್ಯಮಂತ್ರಿಯಾಗಿದ್ದಾರೆ.
-ಎಚ್.ಸಿ.ಮಹದೇವಪ್ಪ ಲೋಕೋಪಯೋಗಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News