ಶಿವಾಜಿ ಪ್ರತಿಮೆ ವಿಚಾರದಲ್ಲಿ ಹೊಸ ವಿವಾದ

Update: 2018-03-08 13:50 GMT

ಮುಂಬೈ, ಮಾ.8: ಅರಬ್ಬೀ ಸಮುದ್ರದಲ್ಲಿ ನಿರ್ಮಿಸಲಾಗುವ ಶಿವಾಜಿ ಪ್ರತಿಮೆಯ ಎತ್ತರವನ್ನು ತಗ್ಗಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ವಿಪಕ್ಷಗಳು ಆರೋಪಿಸಿದ್ದು, ವಿಧಾನಸಭೆಯಲ್ಲಿ ಸರಕಾರ ಹಾಗೂ ವಿಪಕ್ಷಗಳ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು.

 2,500 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುವ ಶಿವಾಜಿ ಪ್ರತಿಮೆಯ ಎತ್ತರವನ್ನು 34 ಮೀಟರ್‌ನಷ್ಟು ಕುಗ್ಗಿಸಿ, ಸಿಮೆಂಟ್‌ನ ಆಧಾರಪೀಠದ ಎತ್ತರವನ್ನು ಹೆಚ್ಚಿಸಲಾಗಿದೆ ಎಂದು ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಆಡಳಿತ ಪಕ್ಷವನ್ನು ತರಾಟೆಗೆತ್ತಿಕೊಂಡವು.

  ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮೂಲಕ ವಿಷಯ ಪ್ರಸ್ತಾವಿಸಿದ ಎನ್‌ಸಿಪಿ ಹಿರಿಯ ಮುಖಂಡ ಜಯಂತ್ ಪಾಟೀಲ್, ಶಿವಾಜಿ ಪ್ರತಿಮೆ ನಿರ್ಮಾಣದ ವಿಷಯದಲ್ಲಿ ಈ ಹಿಂದಿನ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಮತ್ತು ಹಾಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿಭಿನ್ನ ದೃಷ್ಟಿಕೋನ ತಳೆದಿದ್ದಾರೆ ಎಂದರು.

 ನಮ್ಮ ಸರಕಾರದ ಸಂದರ್ಭದಲ್ಲಿ ಮುಖ್ಯಮಂತ್ರಿ ಚವಾಣ್ , ಶಿವಾಜಿ ಪ್ರತಿಮೆ ಅತ್ಯಂತ ಎತ್ತರವಾಗಿರಬೇಕೆಂದು ಅತ್ಯಂತ ಎಚ್ಚರಿಕೆ ವಹಿಸಿದ್ದರು. ಆದರೆ ಈಗಿನ ಸರಕಾರ, ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಪ್ರತಿಮೆಯ ಎತ್ತರ ತಗ್ಗಿಸಿ, ಆಧಾರಪೀಠದ ಎತ್ತರ ಹೆಚ್ಚಿಸಲು ನಿರ್ಧರಿಸಿದೆ. ಇದು ಮರಾಠ ದೊರೆಗೆ ಮಾಡಿರುವ ಅವಮಾನವಾಗಿದೆ ಎಂದು ಆರೋಪಿಸಿದರು. ಪ್ರತಿಮೆ ನಿರ್ಮಾಣ ಯೋಜನೆಯ ನೀಲನಕಾಶೆಗೆ 2015ರ ಫೆಬ್ರವರಿಯಲ್ಲೇ ಅನುಮೋದನೆ ದೊರೆತರೂ ಇನ್ನೂ ಯಾಕೆ ಕಾಮಗಾರಿ ಆರಂಭಿಸಿಲ್ಲ ಎಂದು ಅವರು ಸರಕಾರವನ್ನು ಪ್ರಶ್ನಿಸಿದರು.

 ಯೋಜನೆಗೆ ಅನುಮೋದನೆ ನೀಡುವಾಗ ಪ್ರತಿಮೆಯ ಎತ್ತರ 160 ಮೀಟರ್ ಹಾಗೂ ಸಿಮೆಂಟ್ ಆಧಾರಪೀಠದ ಎತ್ತರ 32 ಮೀಟರ್ ಎಂದು ನಿರ್ಧರಿಸಲಾಗಿತ್ತು. ಬಳಿಕ ಫಡ್ನವೀಸ್ ಸರಕಾರ ಪ್ರತಿಮೆಯ ಎತ್ತರವನ್ನು 210 ಮೀಟರ್‌ಗೆ ಹೆಚ್ಚಿಸುವ ಮೂಲಕ ವಿಶ್ವದ ಅತೀ ಎತ್ತರದ ಪ್ರತಿಮೆ ನಿರ್ಮಿಸುವುದಾಗಿ ಹೇಳಿಕೊಂಡಿತ್ತು. ಆದರೆ ಇದು ಪೊಳ್ಳು ಭರವಸೆ ಎಂಬುದು ಇದೀಗ ನಿಚ್ಚಳವಾಗಿದೆ ಎಂದು ಚವಾಣ್ ಹೇಳಿದರು.

 ಅಲ್ಲದೆ 2016ರ ಡಿಸೆಂಬರ್‌ನಲ್ಲಿ ಶಿವಾಜಿ ಸ್ಮಾರಕದ ಸ್ವರೂಪದಲ್ಲಿ ಬದಲಾವಣೆಯಾಗಿದೆ. ಪ್ರತಿಮೆಯ ಎತ್ತರವನ್ನು 126 ಮೀಟರ್‌ಗೆ ತಗ್ಗಿಸಿ, ಸಿಮೆಂಟ್ ಆಧಾರಪೀಠದ ಎತ್ತರವನ್ನು 84 ಮೀಟರ್‌ಗೆ ಹೆಚ್ಚಿಸಲಾಗಿದೆ. ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆಯ ಎತ್ತರ 157 ಮೀಟರ್, ಆಧಾರಪೀಠದ ಎತ್ತರ 25 ಮೀಟರ್ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು ಎಂದು ಚವಾಣ್ ತಿಳಿಸಿದರು. ಅಲ್ಲದೆ ಯೋಜನೆಗೆ ಪರಿಸರ ಇಲಾಖೆಯ ಮಂಜೂರಾತಿ ದೊರೆತಿಲ್ಲ. ರಾಜ್ಯ ಸರಕಾರದಲ್ಲಿ ಆರ್ಥಿಕ ಸಂಪನ್ಮೂಲದ ಕೊರತೆ ಇರುವ ಕಾರಣ ಕಂಚಿನ ಪ್ರತಿಮೆಯ ಎತ್ತರ ತಗ್ಗಿಸಿ ವೆಚ್ಚ ಉಳಿಸುವ ಆಲೋಚನೆ ಇರಬಹುದು ಎಂದು ಚವಾಣ್ ಹೇಳಿದರು ಹಾಗೂ ಮುಖ್ಯಮಂತ್ರಿ ಫಡ್ನವೀಸ್ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಎಚ್ಚರಿಸಿದರು.

  ಈ ಸಂದರ್ಭ ಹೇಳಿಕೆ ನೀಡಿದ ಮುಖ್ಯಮಂತ್ರಿ ಫಡ್ನವೀಸ್, ಈ ಹಿಂದಿನ ಸರಕಾರ ರೂಪಿಸಿದ್ದ ಯೋಜನೆಗೆ ಅನುಮೋದನೆ ದೊರಕಿರದ ಕಾರಣ ಪ್ರತಿಮೆಯ ಎತ್ತರ ತಗ್ಗಿಸುವ ಪ್ರಶ್ನೆಯೇ ಇಲ್ಲ. ಜಾಗತಿಕ ಮಾನದಂಡದಂತೆ ಪ್ರತಿಮೆ ಹಾಗೂ ಆಧಾರಪೀಠದ ಎತ್ತರ ಇರಲಿದೆ. ಪ್ರತಿಮೆ ಹಾಗೂ ಆಧಾರ ಪೀಠದ ಎತ್ತರಕ್ಕೆ 60:40 ಪ್ರಮಾಣದ ಜಾಗತಿಕ ಮಾನದಂಡವಿದೆ. ಈ ಪ್ರಕಾರ ನಾವು ಮುಂದುವರಿಯುತ್ತೇವೆ. ಇಂತಹ ಸ್ಮಾರಕಗಳು ತಲೆತಲಾಂತರದವರೆಗೂ , ಹಲವು ಶತಮಾನದವರೆಗೂ ಸುರಕ್ಷಿತವಾಗಿರಬೇಕು ಎಂಬ ಕಾಳಜಿ ನಮಗಿದೆ ಎಂದಿದ್ದಾರೆ. ಅಲ್ಲದೆ ಚವಾಣ್ ಹಕ್ಕುಚ್ಯುತಿ ಮಂಡಿಸಲಿ ಎಂದು ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News