ಸ್ತ್ರೀಯರೆದುರು ಸಂಕುಚಿತ ಗುರಿಯನ್ನಿಡುವುದು ಉದಾರತೆಯ ಲಕ್ಷಣವಲ್ಲ

Update: 2018-03-08 18:42 GMT

ಹಿಂದೂಗಳಲ್ಲಿ ಹೆಣ್ಣೆಂದರೆ ಗಂಡಸಿನ ಭೋಗದ ವಸ್ತು ಅನ್ನುವ ಸಾಮಾನ್ಯ ನಂಬಿಕೆಯಿದೆ. ಹಾಗೂ ಗಂಡಸಿನ ಇಚ್ಛೆಯನ್ನರಿತು ಬಾಳಬೇಕು ಅನ್ನುವ ರೂಢಿಯಿದೆ. ಹೆಣ್ಣು ಭೋಗದ ವಸ್ತು ಅನ್ನುವ ಅನಿಸಿಕೆಯಿಂದ ಆಕೆಯ ಶರೀರವನ್ನು ವಸ್ತ್ರ ಒಡವೆಗಳಿಂದ ಅಲಂಕರಿಸುವುದರಲ್ಲಿ ಸಾಕಷ್ಟು ಪ್ರೀತಿ ಹಾಗೂ ಹಣ ಖರ್ಚಾಗುತ್ತದೆ ನಿಜ. ಆದರೆ ಆಕೆ ಓರ್ವ ಮನುಷ್ಯಳು ಎಂದುಕೊಂಡು ಆಕೆಗೆ ಯಾವುದೇ ಹಕ್ಕು ಹಿಂದೂ ಧರ್ಮ ಕೊಡುವುದಿಲ್ಲ. ಜಡಸಂಪತ್ತನ್ನು ಕಾಪಾಡಲು ಆಕೆಗೆ ವಾರಸುತನದ ಯಾವುದೇ ಹಕ್ಕಂತೂ ಇಲ್ಲವೇ ಇಲ್ಲ. ವಿದ್ಯೆ ಕಲಿತು ಸುಸಂಸ್ಕೃತಳಾಗುವ ಅಧಿಕಾರವೂ ಆಕೆಗಿಲ್ಲ. ನಮ್ಮ ಶಾಸ್ತ್ರದಲ್ಲಿ ಹಸುವಿಗೆ ಆತ್ಮವಿದೆ ಎಂದು ಹೇಳಿ ಕ್ರಿಶ್ಚಿಯನ್ನರನ್ನು ನಾಚಿಸುವ ಹಿಂದೂಗಳು ಹೆಣ್ಣಿಗೊಂದು ಆತ್ಮವಿದೆ ಎಂದು ನಂಬಿದರೂ ಆಕೆಗಾಗಿ ಏನನ್ನೂ ಮಾಡಲಾರರು. ಈಗೀಗ ಅವರ ಕಣ್ಣು ತೆರೆದಿದೆಯಾದರೂ ಅವರ ಗುರಿ ಅಷ್ಟೇನೂ ಮಹತ್ತರವಾಗಿಲ್ಲ. ಹೆಣ್ಣು ಗೃಹಲಕ್ಷ್ಮಿಯಾಗಿರಬೇಕು! ಆದರೆ ಇದಕ್ಕೂ ಹೆಚ್ಚು ಪ್ರಗತಿ ಆಕೆ ಮಾಡಬೇಕಿಲ್ಲ! ಅನ್ನುವ ಈ ಬಂಧನವನ್ನು ಅಬಲೆಯರಿಗಾಗಿ ಕಷ್ಟಪಡುವ ಅನೇಕ ಸಮಾಜಸುಧಾರಕರೇ ಹೇರಿದ್ದಾರೆ ಅನ್ನುವುದನ್ನು ಕಾಣಬಹುದು.

ನನ್ನ ಮಟ್ಟಿಗಂತೂ ಇಂತಹ ಸಂಕುಚಿತ ಗುರಿಯನ್ನು ಸ್ತ್ರೀಯರೆದುರಿಡುವುದು ಉದಾರತೆಯ ಲಕ್ಷಣವಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಸಂಪೂರ್ಣವಾಗಿ ಬೆಳೆಯುವಂತೆ ಸಮಾಜ ಆತನಿಗೆ ಅವಕಾಶ ಮಾಡಿಕೊಡಬೇಕು ಅನ್ನುವ ತತ್ವವನ್ನು ಒಮ್ಮೆ ಒಪ್ಪಿಕೊಂಡ ಮೇಲೆ ಸ್ತ್ರೀಯರೆದುರು ಇಂತಹ ಕಡಿಮೆ ದರ್ಜೆಯ ಗುರಿಯನ್ನಿಡುವುದು ನಮಗೆ ಆಶ್ಚರ್ಯ ತರಿಸುತ್ತದೆ. ಒಬ್ಬ ಇಂಗ್ಲಿಷ್ ತತ್ವಜ್ಞಾನಿಯು ‘‘ಗುರಿ ತಲುಪದಿರುವುದು ಪಾಪವಲ್ಲ. ಆದರೆ ಕಡಿಮೆ ದರ್ಜೆಯ ಗುರಿಯನ್ನಿಟ್ಟುಕೊಳ್ಳುವುದು ಮಹಾಪಾಪ’’ ಎಂದು ಹೇಳಿದ್ದಾನೆ. ಈ ಅಂಗವಾಗಿ ಸರ್ ಶಂಕರ್ ನಾಯರ್ ಅವರು ಜೂನ್ 17ರಂದು ಪುಣೆಯ ಹಿಂದೂ ಮಹಿಳಾ ಪೀಠದ ಪದವಿದಾನ ಸಮಾರಂಭದಂದು ವಿದ್ಯಾರ್ಥಿನಿಯರಿಗೆ ಹೇಳಿದ ನಾಲ್ಕು ಉಪದೇಶದ ಮಾತುಗಳು ಬಹಳ ಮಹತ್ವದ ಪಾತ್ರ ವಹಿಸುತ್ತವೆ. ಸರ್ ಶಂಕರ್ ನಾಯರ್ ಅವರ ಉಪದೇಶದ ಮಹತ್ವದ ಭಾಗ ನಮ್ಮ ಹಿಂದೂ ಸ್ತ್ರೀಯರು ಕೂಡ ಅಮೆರಿಕನ್, ಚೀನಿ, ಟರ್ಕಿ ಹಾಗೂ ರಶ್ಯನ್ ಸ್ತ್ರೀಯರಂತೆ ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿ ಗಂಡಸರ ಸರಿಸಮಾನ ಹಕ್ಕು ಕೇಳಬೇಕಿತ್ತು ಅನ್ನುವುದಿತ್ತು. ಮೇಲೆ ಹೇಳಿದ ದೇಶದ ಸ್ತ್ರೀ ಪುರುಷರಲ್ಲಿ ಇತ್ತೀಚೆಗಾಗುತ್ತಿರುವ ಜಗಳಗಳನ್ನು ಆಧಾರವಾಗಿಟ್ಟುಕೊಂಡು ಅಲ್ಲಿಯ ಸ್ತ್ರೀಯ ಆದರ್ಶವನ್ನು ತಮ್ಮ ಹೆಣ್ಣುಮಕ್ಕಳೆದುರು ಇಡುವುದು ಅವಿಚಾರವಾಗಬಹುದು ಅನ್ನುವುದು ಕೆಲವರಿಗೆ ಅನ್ನಿಸುವುದು ಸ್ವಾಭಾವಿಕ.

ಇವರ ಪ್ರಕಾರ ಆ ದೇಶಗಳಲ್ಲಿ ಕೆಲಸ, ವ್ಯಾಪಾರಗಳಲ್ಲಿ ಸ್ತ್ರೀಪುರುಷರ ನಡುವೆ ಸ್ಪರ್ಧೆಯಿಂದಾಗುತ್ತಿರುವ ಅನಿಷ್ಟ ಪರಿಣಾಮಗಳನ್ನು ನೋಡಿಯೂ ಕೂಡಾ ಅಂತಹ ಚಳವಳಿಗಳು ಇಲ್ಲಿಯೂ ಆರಂಭವಾಗಬೇಕು ಅನ್ನುವುದು ಸರಿಯಲ್ಲ, ಹೀಗೆಂದುಕೊಳ್ಳುವುದರಲ್ಲಿ ನನ್ನ ಮಟ್ಟಿಗಂತೂ ಅರ್ಥವಿಲ್ಲ. ಗಂಡಸರ ನಡುವೆ ಎಲ್ಲೆಡೆಯೂ ಪೈಪೋಟಿ ನಡೆಯುತ್ತಿದೆ. ಹಾಗೇ ಅದು ಭಾರತದಲ್ಲೂ ನಡೆದಿದೆ. ಇಂತಹ ಸ್ಪರ್ಧೆಗಳಾಗಬಾರದೆಂದೇ ವರ್ಣಾಶ್ರಮ ಪದ್ಧತಿ ಅಸ್ತಿತ್ವಕ್ಕೆ ಬಂತು ಅನ್ನುವುದು ನನ್ನ ನಂಬಿಕೆ. ಬ್ರಾಹ್ಮಣರಾಗುವ ಆಸೆಯಿಂದ ಕ್ಷತ್ರಿಯರು ಅವರಿಗಿಂತ ಮೇಲಾಗಬಾರದು, ಕ್ಷತ್ರಿಯರಾಗುವ ಮಹತ್ವಾಕಾಂಕ್ಷೆಯಿಂದ ವೈಶ್ಯರು ಹಾಗೂ ಶೂದ್ರರಲ್ಲಿ ಜಗಳವಾಗಬಾರದು. ಹಾಗೂ ಅತಿಶೂದ್ರರಂತೂ ಕೊಟ್ಟಷ್ಟರಲ್ಲೇ ಸಮಾಧಾನ ಹೊಂದಬೇಕು ಹಾಗೂ ಒಬ್ಬರಿಂದೊಬ್ಬರಿಗೆ ಹಾನಿಯಾಗಬಾರದು, ಅವರವರ ಅಂತಸ್ತು ಅವರವರಲ್ಲಿರಬೇಕು ಅನ್ನುವುದೇ ವರ್ಣಾಶ್ರಮ ಧರ್ಮದ ಮುಖ್ಯ ಉದ್ದೇಶ. ಆದರೆ ಇಂದು ಕೆಲವು ಜಾತಿಯ ವಿಶೇಷ ಅಧಿಕಾರಿಗಳು ಕೊನೆಗೊಳ್ಳುತ್ತ ಬಂದು ಬ್ರಾಹ್ಮಣರು ಮೂಳೆ ಇಲ್ಲವೆ ಚಪ್ಪಲಿಯನ್ನು ಮಾರುವ ವ್ಯಾಪಾರವನ್ನಾರಂಭಿಸಿ ಅತಿಶೂದ್ರರೊಂದಿಗೆ ಸ್ಪರ್ಧೆಗಳಿದಿದ್ದಾರೆ.

ಕ್ಷತ್ರಿಯರು ತಮ್ಮ ಮರ್ಯಾದೆಯನ್ನು ಉಲ್ಲಂಘಿಸಿ ಪುರೋಹಿತರಾಗುವ ಆಸೆಯನ್ನಿಟ್ಟುಕೊಂಡು ಬ್ರಾಹ್ಮಣರೊಂದಿಗೆ ಈರ್ಷೆ ಬೆಳೆಸಿಕೊಳ್ಳುತ್ತಿದ್ದಾರೆ. ಗಂಡಸರಲ್ಲಿ ಇಂತಹ ಸ್ಪರ್ಧೆ ಹೊತ್ತಿ ಉರಿಯುತ್ತಿರುವಾಗ ಕೆಲವೊಂದು ಕಡೆ ಅದು ವಿಕೋಪಕ್ಕೆ ಹೋಗಿದ್ದರೂ ಅದನ್ನು ನಿಲ್ಲಿಸುವ ಇಲ್ಲವೆ ಇಬ್ಬರೂ ಇನ್ನೊಬ್ಬರ ಸಮಾನರಾಗಬೇಡಿ ಎಂದು ಉಪದೇಶಿಸಿದ್ದಂತೂ ನಾನೆಲ್ಲೂ ಕೇಳಿಲ್ಲ. ಈ ಸ್ಪರ್ಧೆಯಿಂದ ಅನಿಷ್ಟ ಪರಿಣಾಮಗಳಾಗುವ ಭಯ ಕಾಡದಿರುವಾಗ ಇದೇ ಸ್ಪರ್ಧೆಯಲ್ಲಿ ಸ್ತ್ರೀಯರದ್ದೇ ಆದ ಒಂದು ಪ್ರತಿಪಕ್ಷ ತಯಾರಾದರೆ ದೇಶ ಮುಳುಗಿಹೋಗುತ್ತದೆ ಎಂದು ಅನಿಸುವ ಕಾರಣವೇನು? ಇಂತಹ ಸ್ಪರ್ಧೆಗಳಿಂದ ಯೋಗ್ಯ ಮನುಷ್ಯ ಗಂಡಾಗಲಿ ಹೆಣ್ಣಾಗಲಿ ಯೋಗ್ಯ ಸ್ಥಾನ ತಲುಪಿ ಅದರಿಂದ ರಾಷ್ಟ್ರದ ಏಳಿಗೆಯಾದರೂ ಒಳ್ಳೆಯದಲ್ಲವೇ? ಸರ್ ಶಂಕರ್ ಅವರು ಸ್ತ್ರೀ ಶಿಕ್ಷಣದ ಬಗ್ಗೆ ಮತ್ತೊಂದು ಮಹತ್ವದ ವಿಷಯ ಹೇಳಿದರು. ‘‘ಯುರೋಪ್, ಅಮೆರಿಕ, ರಶ್ಯಾ ಹಾಗೂ ಚೀನಾಗಳಲ್ಲಿ ಸ್ತ್ರೀಯರಿಗಾಗಿಯೇ ಇರುವ ಪ್ರತ್ಯೇಕ ವಿದ್ಯಾಪೀಠಗಳು, ಶಾಲಾಕಾಲೇಜುಗಳ ಅಗತ್ಯವಿಲ್ಲ, ಸ್ತ್ರೀಯರ ಶಿಕ್ಷಣ ಗಂಡಸರ ಜೊತೆಜೊತೆಯಾಗಬೇಕು.

ಗಂಡು ಹೆಣ್ಣಿನ ವಿದ್ಯಾಭ್ಯಾಸ ಒಟ್ಟಿಗೆ ಆಗಬಾರದು ಅನ್ನುವುದಕ್ಕೆ ಪುರಾತನ ಕಾಲದವರು ಕಾರಣಗಳನ್ನು ಕೊಡುತ್ತ ಸ್ತ್ರೀಯ ವಿನಯ ಹಾಗೂ ಗಂಡಸಿನ ನೈತಿಕತೆಯನ್ನು ಕಾಪಾಡಲು 7ನೇ ವರ್ಷದಿಂದಲೇ ಇಬ್ಬರಿಗೂ ಪ್ರತ್ಯೇಕ ಶಿಕ್ಷಣವನ್ನು ಕೊಡಬೇಕು. 7ನೇ ವರ್ಷದ ನಂತರ ಶಾರೀರಿಕ ಹಾಗೂ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಗಳಾಗುತ್ತವೆ. ಆದ್ದರಿಂದ ಈ ಕಾಲದಲ್ಲಿ ಹುಡುಗ ಹುಡುಗಿಯರನ್ನು ಬೇರೆ ಇಡಬೇಕು, ಅನ್ನುತ್ತಾರೆ. ಇಬ್ಬರನ್ನು ಬೇರ್ಪಡಿಸಿ ನೈತಿಕತೆಯನ್ನು ಬೆಳೆಸುವ ಈ ಪ್ರಕಾರ ನಮಗಂತೂ ವಿಚಿತ್ರವಾಗಿ ಕಾಣುತ್ತಿದೆ. ಒಬ್ಬ ವಯಸ್ಸಿಗೆ ಬಂದ ಹುಡುಗನಿಗೆ ನಿರ್ಜನ ಅರಣ್ಯದಲ್ಲೆಲ್ಲೋ ಇಲ್ಲವೇ ಹಿಮಾಲಯ ಪರ್ವತಗಳಲ್ಲಿ ಅಡಗಿಸಿಟ್ಟರೆ ಆತ ಕಡೆಯವರೆಗೆ ಬ್ರಹ್ಮಚಾರಿಯಾಗಿಯೇ ಉಳಿಯುತ್ತಾನೆ ಅನ್ನುವುದರಲ್ಲಿ ಅನುಮಾನವಿಲ್ಲ. ಹಾಗೆಯೇ ಒಬ್ಬ ಯುವತಿಯನ್ನು ಜೈಲಿನಲ್ಲಿ ಕೂಡಿ ಹಾಕಿದರೆ ಆಕೆಯೂ ಕಡೆಯತನಕ ಸಾಧ್ವಿಯಾಗಿಯೇ ಬದುಕುತ್ತಾಳೆ. ಆದರೆ ಇಂತಹ ನೈತಿಕತೆಗೆ ಕವಡೆಯಷ್ಟೂ ಬೆಲೆಯಿಲ್ಲ. ಹೆಣ್ಣಿನ ಸಹವಾಸದಲ್ಲಿದ್ದು ಕೂಡ ತನ್ನ ಸಂಯಮವನ್ನು ಕಾಪಾಡುವ ಹಾಗೂ ಗಂಡಿನ ಸಂಪರ್ಕದಲ್ಲಿದ್ದು ಕೂಡ ತನ್ನ ಶೀಲ ಕಾಪಾಡುವವರನ್ನೇ ನಿಜವಾದ ನೀತಿವಂತರು ಅನ್ನಬಹುದು. ಯಾವುದು ನಮಗೆ ಅಪರೂಪದ್ದಾಗಿರುತ್ತದೆಯೋ ಅದು ನಮ್ಮೆದುರಿಗೆ ಬಂದಾಗ ಅದನ್ನು ಅಕ್ರಾಕ್ರಮಕವಾಗಿ ತಮ್ಮದಾಗಿಸಿಕೊಳ್ಳುವುದೇ ಮನಸ್ಸಿನ ಧರ್ಮ. ಯಾರು ಇದರ ವಿರುದ್ಧ ಹೋಗಲು ಸಾಧ್ಯವಿಲ್ಲ.

ಅದೇ ಹೆಣ್ಣು ನಮ್ಮ ಪರಿಚಯದವಳಾಗಿದ್ದರೆ, ಹತ್ತಿರದವಳಾಗಿ ಒಡನಾಟದಲ್ಲಿದ್ದರೆ ಆಕೆಯ ಸಾನಿಧ್ಯದಲ್ಲಿ ಕೂಡ ಯಾವುದೇ ಅಧೀರತೆ ಕಾಡುವುದಿಲ್ಲ. ಸ್ತ್ರೀ ಪುರುಷರ ನೈತಿಕತೆಯನ್ನು ವೃದ್ಧಿಸುವುದಿದ್ದರೆ ಅವರ ಒಡನಾಟವನ್ನು ಆದಷ್ಟು ಹೆಚ್ಚಿಸಬೇಕು. ಅವರನ್ನು ಬೇರ್ಪಡಿಸಿದರೆ ಅನೀತಿಯ ಬೆಂಕಿ ಹೆಚ್ಚು ಭುಗಿಲೇಳುತ್ತದೆ ಅನ್ನುವುದನ್ನು ಎಲ್ಲರೂ ನೆನಪಿಡಿ. ಈ ದೃಷ್ಟಿಯಿಂದ ನೋಡಿದಾಗ ಸರ್ ಶಂಕರ್ ನಾಯರ್ ಅವರು ಹೆಣ್ಣುಮಕ್ಕಳಿಗೆ ಗಂಡುಮಕ್ಕಳ ಜೊತೆ ವಿದ್ಯೆ ಕಲಿಯುವ ಉಪದೇಶ ಕೊಟ್ಟಿರುವುದು ನೈತಿಕತೆಗೆ ಪೋಷಕವಾಗಿದೆ ಎಂದೇ ಹೇಳಬಹುದು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News