ಅನುವಾದ ಪುಸ್ತಕಗಳು ಓದುಗರಿಗೆ ತಲುಪಲಿ: ಡಾ.ಕೆ.ಮರುಳಸಿದ್ದಪ್ಪ

Update: 2018-03-10 13:02 GMT

ಬೆಂಗಳೂರು, ಮಾ.10: ವಿವಿಧ ಭಾಷೆಗಳಲ್ಲಿ ಕೆಲವು ಕೃತಿಗಳನ್ನು ಅನುವಾದ ಮಾಡಲಾಗಿದ್ದು, ಈ ಪುಸ್ತಕಗಳು ಸಮರ್ಪಕವಾಗಿ ಓದುಗರಿಗೆ ತಲುಪಬೇಕು ಎಂದು ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ ಮರುಳಸಿದ್ದಪ್ಪ ಇಂದಿಲ್ಲಿ ಹೇಳಿದರು.

ಶನಿವಾರ ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ, ‘ಪ್ರಕಾಶಕರ ಪ್ರಥಮ ಸಮ್ಮೇಳನ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪು ಭಾಷಾಭಾರತಿ ಪ್ರಾಧಿಕಾರ 22 ಭಾಷೆಗಳಲ್ಲಿ ಕೆಲವು ಕೃತಿಗಳನ್ನು ಅನುವಾದ ಮಾಡಲಾಗಿದೆ. ಆದರೆ, ಅವು ಆಯಾ ಭಾಷಿಕರಿಗೆ ತಲುಪದೆ ಉಗ್ರಾಣದಲ್ಲಿ ಹಾಗೆಯೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾವಿರಾರು ಪುಸ್ತಕಗಳನ್ನು ಮುದ್ರಣವಾಗಿ ಓದುಗರಿಗೆ ತಲುಪದೆ ಉಗ್ರಾಣದಲ್ಲಿಯೇ ಉಳಿಯುತ್ತಿವೆ. ಅವನ್ನು ಗ್ರಂಥಾಲಯಗಳಿಗೆ ತಲುಪಿಸಬೇಕಿದೆ ಎಂದ ಅವರು, ಈ ಹಿಂದೆ ಪ್ರಕಾಶನ ಎನ್ನುವುದು ಒಂದು ವೃತ್ತಿಯಾಗಿತ್ತು. ಆದರೆ, ಇಂದು ಬೃಹತ್ ಉದ್ಯಮವಾಗಿ ಬದಲಾಗಿದೆ ಎಂದು ನುಡಿದರು.

ಸಾಹಿತ್ಯ ಸೃಷ್ಟಿ ಮತ್ತು ಸಾಹಿತ್ಯ ಪ್ರಚಾರ ಒಂದೇ ನಾಣ್ಯದ ಎರಡು ಮುಖವಿದ್ದಂತೆ, ಲೇಖಕ ಸೃಷ್ಟಿಸಿದ ಒಂದು ಕೃತಿಗೆ ಪ್ರಚಾರವೆಂಬುದು ಅತ್ಯವಶ್ಯಕ. ಆದ್ದರಿಂದ ಖಾಸಗಿ ಮತ್ತು ಸರಕಾರಿ ಪ್ರಕಾಶಕರು ಸೇರಿ ಪುಸ್ತಕದ ಉದ್ಯಮವನ್ನು ಸಮರ್ಪಕವಾಗಿ ಬೆಳೆಸುವ ಅವಶ್ಯಕತೆಯಿದೆ ಎಂದು ಮರುಳಸಿದ್ದಪ್ಪ ತಿಳಿಸಿದರು.

ಪ್ರಕಾಶಕರ ಪ್ರಥಮ ಸಮ್ಮೇಳನದ ಅಧ್ಯಕ್ಷ ಡಾ.ರಮಾಕಾಂತ ಜೋಶಿ ಮಾತನಾಡಿ, ಪ್ರತಿ ವರ್ಷ ಪುಸ್ತಕ ಪ್ರಾಧಿಕಾರವು ರಾಜ್ಯದಲ್ಲಿ ಆಯಾ ವರ್ಷದಲ್ಲಿ ಪ್ರಕಟವಾಗುವ ಎಲ್ಲ ಲೇಖಕ-ಪ್ರಕಾಶಕರ ಪುಸ್ತಕಗಳ ಪಟ್ಟಿಯನ್ನು ಸಾಹಿತ್ಯ ಪ್ರಕಾರಕ್ಕೆ ಅನುಗುಣವಾಗಿ ಪ್ರಕಟಿಸಿ ಎಲ್ಲರಿಗೂ ಪುಸ್ತಕಗಳು ತಲುಪುವಂತೆ ಮಾಡಿದಾಗ ಎಲ್ಲ ಕಡೆ ಪುಸ್ತಕಗಳು ತಲುಪಲು ಸಾಧ್ಯ ಎಂದು ಹೇಳಿದರು.

ಪುಸ್ತಕವು ಮನುಷ್ಯನ ಜ್ಞಾನವನ್ನು ಬೆಳೆಸುವಂತಹ ಸಾಧನವಾಗಿದೆ. ಆದ್ದರಿಂದ ಕನ್ನಡ ಪುಸ್ತಕ ಪ್ರಾಧಿಕಾರವನ್ನು ಸಬಲಗೊಳಿಸಿ ಪುಸ್ತಕ ಉದ್ಯಮ ಬೆಳೆಸುವಂತಹ ಹೊಸ ಯೋಜನೆಗಳನ್ನು ರೂಪಿಸಬೇಕು. ಅದೇರೀತಿ, ಹೊಸ ಲೇಖಕರಿಗೆ ಪ್ರೋತ್ಸಾಹ ನೀಡುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಕನ್ನಡ ಪುಸ್ತಕ ಪ್ರಾದಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಕನ್ನಡ ಸಂಸ್ಕೃತಿ ಇಲಾಖೆ ಅಧ್ಯಕ್ಷ ಎನ್.ಆರ್.ವಿಶುಕುಮಾರ್, ಕರ್ನಾಟಕ ಬರಹಗಾರರು ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ ಕಂಬತ್ತಳ್ಳಿ ಸೇರಿ ಪ್ರಮುಖರು ಉಪಸ್ಥಿತರಿದ್ದರು.

ಪುಸ್ತಕ ನೀತಿ ಜಾರಿಯಾಗಲಿ
ನಗರದಲ್ಲಿ 203 ಪ್ರಕಾಶನ ಸಂಸ್ಥೆಗಳಿವೆ. ಆದರೂ ಪ್ರಕಾಶನವಾಗುತ್ತಿರುವ ಪುಸ್ತಕಗಳು ಗ್ರಾಮಾಂತರ ಪ್ರದೇಶಗಳಿಗೆ ತಲುಪುತ್ತಿವೆಯೇ ಎಂಬುದು ತಿಳಿಯದಂತಾಗಿದೆ. ಆದ್ದರಿಂದ ಪ್ರಕಾಶಕರ ಕಳ್ಳ ಮಾರ್ಗಗಳಿಗೆ ಸರಕಾರ ದಾರಿ ಮಾಡಿಕೊಡದೆ, ಮೊದಲೇ ಎಚ್ಚೆತ್ತು ಪುಸ್ತಕ ನೀತಿಯನ್ನು ಜಾರಿಗೊಳಿಸಬೇಕು.
-ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News