ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಸುರಕ್ಷಿತವಾಗಿಲ್ಲ: ದಿನೇಶ್ ಅಮೀನ್ ಮಟ್ಟು

Update: 2018-03-11 14:37 GMT

ಬೆಂಗಳೂರು, ಮಾ.11: ರೈತರು, ದಲಿತರು, ಅಲ್ಪಸಂಖ್ಯಾತರಿಗೆ ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಸುರಕ್ಷಿತವಾಗಿಲ್ಲ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಆತಂಕ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಪುರಭವನದ ಸಭಾಂಗಣದಲ್ಲಿ ದಲಿತ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿದ್ದ, ಎತ್ತ ಸಾಗುತ್ತಿದೆ ಭಾರತ? ಅಂಬೇಡ್ಕರ್ ಚಿಂತನೆಯ ಬೆಳಕಿನಲ್ಲಿ ವಿಶ್ಲೇಷಣೆ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಸಂವಿಧಾನದ ಆಶಯಗಳು ಮತ್ತು ಮಾಧ್ಯಮಗಳ ಹೊಣೆಗಾರಿಕೆ’ ವಿಷಯದ ಕುರಿತು ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಉದ್ಯಮಿಗಳಾದ ಅಂಬಾನಿ, ಅದಾನಿ ಸೇರಿದಂತೆ ಕೆಲ ಗಣ್ಯರ ಪಾಲಿಗೆ ಅಭಿವ್ಯಕ್ತಿ ಸ್ವಾತಂತ್ರ ಜೀವಂತವಾಗಿದ್ದು, ಎಲ್ಲ ಮಾಧ್ಯಮಗಳು ಸಹ ಅವರ ಅಭಿವ್ಯಕ್ತಿಗೆ ಯಾವುದೇ ಅಡ್ಡಿಯುಂಟು ಮಾಡಿಲ್ಲ. ಆದರೆ,ಈ ದೇಶದ ರೈತರು, ಶ್ರಮಿಕರು, ದಲಿತರು, ಅಲ್ಪಸಂಖ್ಯಾತರಿಗೆ ಅಭಿವ್ಯಕ್ತಿ ಸ್ವಾತಂತ್ರ ಸುರಕ್ಷಿತವಾಗಿಲ್ಲ ಎಂದು ಹೇಳಿದರು.

ಅಭಿವ್ಯಕ್ತಿ ಸ್ವಾತಂತ್ರ ಸಂವಿಧಾನ ಬದ್ಧವಾದ ಹಕ್ಕು. ಆ ಹಕ್ಕಿನ ಚಲಾವಣೆ ಮಾಡುವ ಅವಕಾಶವಿರಬೇಕು. ಸಂವಿಧಾನ ದತ್ತವಾದ ಹಕ್ಕು ಕರ್ತವ್ಯ ಚಲಾವಣೆಯಾಗದಿದ್ದರೆ, ಸಂವಿಧಾನ ಪರಿಪೂರ್ಣವಾಗಿ ಅನುಷ್ಠಾನಕ್ಕ ಬಂದಿಲ್ಲ ಎಂದರ್ಥ ಎಂದ ಅವರು, ಮಾಧ್ಯಮ ಕ್ಷೇತ್ರದಲ್ಲಿ ಪರೋಕ್ಷವಾಗಿ ಅಭಿವ್ಯಕ್ತಿ    ಸ್ವಾತಂತ್ರ ನಿಯಂತ್ರಿಸುವ ಹುನ್ನಾರ ನಡೆಯುತ್ತಿದೆ. ಅದಲ್ಲದೆ, ಜಾಗತಿಕರಣ ಪ್ರಭಾವದಿಂದ ಮಾಧ್ಯಮ ಉದ್ಯಮವಾಗಿ ಮಾರ್ಪಾಡಾಗಿ, ಖಾಸಗಿ ಉದ್ಯಮಿಗಳ ಜಾಹೀರಾತುದಾರರಿಗೆ ಋಣಿಯಾಗಿರಬೇಕಾದ ಕಾಲ ಬಂದಿದೆ ಎಂದರು.

ನಮ್ಮಲ್ಲಿ 82 ಸಾವಿರ ಪತ್ರಿಕೆಗಳು, 800ಕ್ಕೂ ಟಿವಿ ವಾಹಿನಿಗಳು, 1200ಕ್ಕೂ ಹೆಚ್ಚು ರೇಡಿಯೋ ಕೇಂದ್ರಗಳಿವೆ. ಇನ್ನು ರೈಲ್ವೆ, ಬಸ್ ಸ್ಟೇಷನ್‌ಗಳಲ್ಲಿ ಸ್ಟಾಲ್‌ಗಳಲ್ಲಿ ಹಾಕಿರುವ ನೂರಾರು ಪತ್ರಿಕೆಗಳು ಕಾಣುತ್ತವೆ. ಮೊಬೈಲ್‌ನಲ್ಲೂ, ಫೇಸ್‌ಬುಕ್, ವಾಟ್ಸಾಪ್, ಟ್ವೀಟರ್ ನೋಡಿದಾಗ ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಸುರಕ್ಷಿತವಾಗಿದೆ ಎನ್ನಿಸಿದರೂ ಅಭಿವ್ಯಕ್ತಿ ಸ್ವಾತಂತ್ರ ಯಾರಿಗೆ ಸುರಕ್ಷಿತವಾಗಿದೆ ಎಂಬ ಪ್ರಶ್ನೆ ಮೂಡುತ್ತದೆ ಎಂದು ಹೇಳಿದರು.

ಸಾಹಿತ್ಯ, ಸಂಗೀತ, ಕಾದಂಬರಿ,ಪ್ರಕಾರದ ಸೃಜನಶೀಲ ವಲಯದಲ್ಲಿ ಶೇ.100ರಲ್ಲಿ 25ರಷ್ಟು ದಲಿತರಿರುತ್ತಾರೆ. ಆದರೆ ಪತ್ರಿಕೆಗಳಲ್ಲಿ ಬೆರಳೆಣಿಕೆಯಷ್ಟು ಪತ್ರಕರ್ತರು ಇರುವುದಿಲ್ಲ. ಮಾಧ್ಯಮ ಪರಿಪೂರ್ಣವಾಗ ಬೇಕಾದರೆ ಅದರೊಳಗೆ ಎಲ್ಲ ಅನುಭವದ ಜನರಿರಬೇಕು ಎಂದು ಅವರು ಹೇಳಿದರು.

ಮಾಧ್ಯಮಗಳು ಸಮಾಜದ ಕನ್ನಡಿಯಾಗಿದ್ದು, ಅದರಲ್ಲಿ ಎಲ್ಲ ರೂಪ ಕುರೂಪಗಳು ಕಾಣಬೇಕು. ಆದರೆ ಹಾಗಾಗುತ್ತಿಲ್ಲ. ಇಂದಿರಾಗಾಂಧಿಯವರ ಕಾಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ದಮನವಾಗಿತ್ತು ಎಂದ ಅವರು, ಕರ್ನಾಟಕದ ಮಟ್ಟಿಗೆ ಮಾಧ್ಯಮಗಳು ಸಂಪೂರ್ಣ ಆಡಳಿತ ವಿರೋಧಿಯಾಗಿವೆ. ಇದನ್ನು ಸ್ವಾಗತಿಸುತ್ತೇನೆ. ಆದರೆ ರಾಷ್ಟೀಯ ಮಟ್ಟದಲ್ಲಿ ಮಾಧ್ಯಮಗಳು ಆಡಳಿತ ವಿರೋಧಿಯಾಗಿರದೇ ಆಡಳಿತ ಸರಕಾರದ ಪರವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ಡಾ.ನಟರಾಜ್ ಹುಳಿಯಾರ್, ಹಿರಿಯ ಪರ್ತಕರ್ತ ಹಾಗೂ ಸಂವಾದ ಪತ್ರಿಕೆ ಸಂಪಾದಕ ಇಂದೂಧರ ಹೊನ್ನಾಪುರ ಸೇರಿದಂತೆ ಪ್ರಮುಖರಿದ್ದರು.

‘ಮುಖೇಶ್ ಅಂಬಾನಿಯ ವಾರ್ಷಿಕ ಆದಾಯ 2ಲಕ್ಷ ಕೋಟಿ ರೂ.ಗಳಾಗಿದೆ. ಆದರೆ, ನಮ್ಮ ರಾಜ್ಯ ಸರಕಾರದ ವಾರ್ಷಿಕ ಬಜೆಟ್ ಕೂಡ ಅಷ್ಟೇ ಇದೆ. ವಾರ್ಷಿಕವಾಗಿ ಮಾಧ್ಯಮ ಕ್ಷೇತ್ರಕ್ಕೆ 5ರಿಂದ 10ಸಾವಿರ ಕೋಟಿ ರೂ.ನೀಡುತ್ತಾರೆ. ಇನ್ನು ಕೆಲವೆ ವರ್ಷದಲ್ಲಿ ಭಾರತೀಯ ಪತ್ರಕರ್ತರು ರಿಲೆಯನ್ಸ್ ಕಂಪೆನಿಯ ನೌಕರರಾಗುತ್ತಾರೆ.
-ದಿನೇಶ್ ಅಮೀನ್ ಮಟ್ಟು, ಸಿಎಂ ಮಾಧ್ಯಮ ಸಲಹೆಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News