ಕಠ್ಮಂಡುವಿನಲ್ಲಿ ಬಾಂಗ್ಲಾದೇಶದ ವಿಮಾನ ಪತನ

Update: 2018-03-12 14:26 GMT

ಕಠ್ಮಂಡು, ಮಾ.12: 67 ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿ ವರ್ಗದವರಿದ್ದ ಬಾಂಗ್ಲಾದೇಶದ ಪ್ರಯಾಣಿಕ ವಿಮಾನವೊಂದು ನೇಪಾಳದ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇಳಿಯುವ ವೇಳೆ ನೆಲಕ್ಕಪ್ಪಳಿಸಿದ್ದು ಘಟನೆಯಲ್ಲಿ ಕನಿಷ್ಟ 50 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

 ಗಂಭೀರ ಗಾಯಗೊಂಡಿರುವ 17 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರ ಸಂಖ್ಯೆ ಹೆಚ್ಚುವ ಸಾದ್ಯತೆಯಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ನಿಲ್ದಾಣದ ರನ್‌ವೇಯಲ್ಲಿ ಇಳಿಯುತ್ತಿದ್ದ ಸಂದರ್ಭ ರನ್‌ವೇಯಿಂದ ಜಾರಿದ ವಿಮಾನ , ಸಮೀಪದಲ್ಲಿದ್ದ ಫುಟ್‌ಬಾಲ್ ಕ್ರೀಡಾಂಗಣಕ್ಕೆ ಅಪ್ಪಳಿಸಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ರನ್‌ವೇಯಿಂದ ಜಾರಿದ ಸಂದರ್ಭ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ದುರಂತದ ಬಳಿಕ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಹಾಗೂ ನಿಲ್ದಾಣಕ್ಕೆ ಬರುವ ಎಲ್ಲಾ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನನಿಲ್ದಾಣದ ಪ್ರಕಟಣೆ ತಿಳಿಸಿದೆ.

   ತಕ್ಷಣ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಆರಂಭಿಸಲಾಗಿದ್ದು ಬೆಂಕಿಯನ್ನು ನಿಯಂತ್ರಿಸಲಾಗಿದೆ. ಮೃತಪಟ್ಟವರ ಸಂಖ್ಯೆಯನ್ನು ಈಗ ನಿಖರವಾಗಿ ಹೇಳಲಾಗದು. ಅಪಘಾತ ನಡೆದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ದಟ್ಟವಾದ ಹೊಗೆ ಹಾಗೂ ವಿಮಾನದ ಭಗ್ನಾವಶೇಷ ಹರಡಿಕೊಂಡಿದೆ. ಹಲವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ನಡೆದ ಸ್ಥಳದಲ್ಲಿ ಹಲವು ದೇಹಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಂಡುಬಂದಿವೆ ಎಂದು ವಿಮಾನನಿಲ್ದಾಣದ ಭದ್ರತಾ ಸಂಸ್ಥೆ ತಿಳಿಸಿದೆ.

 ದುರಂತದ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿರುವ ನೇಪಾಳದ ಪ್ರಧಾನಿ ಕೆ.ಪಿ.ಶರ್ಮ, ತಕ್ಷಣ ತನಿಖೆ ನಡೆಸಲು ಸರಕಾರ ಆದೇಶ ನೀಡಲಿದೆ ಎಂದು ತಿಳಿಸಿದ್ದಾರೆ.

ರನ್‌ವೇಯ ತಡೆಬೇಲಿಗೆ ಬಡಿದ ವಿಮಾನ

 ವಿಮಾನ ಅತ್ಯಂತ ಕೆಳಮಟ್ಟದಲ್ಲಿ ಬರುತ್ತಿತ್ತು. ಅದರ ಹಾರಾಟ ಸಹಜವಾಗಿರಲಿಲ್ಲ . ನಿಲ್ದಾಣದಲ್ಲಿದ್ದ ಎಲ್ಲರೂ ಒಂದು ಕ್ಷಣ ನಿಂತಲ್ಲೇ ಸ್ಥಿರವಾಗಿದ್ದರು ಎಂದು ನಿತಿನ್ ಕೆನ್ಯಾಲ್ ಎಂಬ ಮೆಡಿಕಲ್ ವಿದ್ಯಾರ್ಥಿ ತಿಳಿಸಿದ್ದಾರೆ. ಇದೇ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಮತ್ತೊಂದು ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ನಿತಿನ್, ಇನ್ನೇನು ವಿಮಾನವನ್ನು ಹತ್ತಬೇಕು ಎನ್ನುವಷ್ಟರಲ್ಲಿ ಬಾಂಗ್ಲಾ ವಿಮಾನ ನೆಲಕ್ಕಪ್ಪಳಿಸಿದೆ.

  ಇಳಿಯುವ ಸಂದರ್ಭ ವಿಮಾನದ ಮಾರ್ಗರೇಖೆ ಕ್ರಮಬದ್ಧವಾಗಿರಲಿಲ್ಲ. ತಾನು ಉತ್ತರದ ದಿಕ್ಕಿನತ್ತ ಸಾಗಲು ಬಯಸುತ್ತೇನೆ ಎಂದು ಪೈಲಟ್ ತಿಳಿಸಿದ್ದ. ಯಾಕೆ, ಏನಾದರೂ ಸಮಸ್ಯೆಯಿದೆಯೇ ಎಂಬ ಪ್ರಶ್ನೆಗೆ ನಕಾರಾತ್ಮಕ ಉತ್ತರ ನೀಡಿದ್ದ ಎಂದು ವಿಮಾನ ನಿಲ್ದಾಣದ ಪ್ರಧಾನ ವ್ಯವಸ್ಥಾಪಕ ರಾಜ್‌ಕುಮಾರ್ ಛೆಟ್ರಿ ತಿಳಿಸಿದ್ದಾರೆ. ಬಳಿಕ ವಿಮಾನ ಉತ್ತರ ದಿಕ್ಕಿನತ್ತ ಎರಡು ಸುತ್ತು ಹಾಕಿದೆ. ಎಲ್ಲವೂ ಸರಿಯಾಗಿದೆಯೇ ಎಂದು ಕಂಟ್ರೋಲ್ ರೂಂನವರು ಕೇಳಿದಾಗ ಪೈಲಟ್ ಹೌದು ಎಂದುತ್ತರಿಸಿದ್ದ. ಆದರೆ ವಿಮಾನದ ಮಾರ್ಗರೇಖೆ (ಅಲೈನ್‌ಮೆಂಟ್) ಕ್ರಮಬದ್ಧವಾಗಿಲ್ಲ ಎಂದು ಕಂಟ್ರೋಲ್ ರೂಂನಿಂದ ತಿಳಿಸಿದಾಗ ಪೈಲಟ್‌ನಿಂದ ಉತ್ತರ ಬಂದಿಲ್ಲ. ವಿಮಾನವು ಬಲದಿಕ್ಕಿನಿಂದ ಬರಬೇಕಿತ್ತು. ಮಾರ್ಗರೇಖೆ ತಪ್ಪಿದ ವಿಮಾನ ರನ್‌ವೇಯ ತಡೆಬೇಲಿಗೆ ಬಡಿದು ಬೆಂಕಿ ಹತ್ತಿಕೊಂಡಿದೆ ಎಂದು ಛೆಟ್ರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News