ಇಶ್ರತ್ ಜಹಾನ್ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಪೊಲೀಸರು ನರೇಂದ್ರ ಮೋದಿಯ ವಿಚಾರಣೆ ನಡೆಸಿದ್ದರು

Update: 2018-03-13 08:20 GMT

ಅಹ್ಮದಾಬಾದ್, ಮಾ.13: ಇಶ್ರತ್ ಜಹಾನ್ ಎನ್‍ಕೌಂಟರ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಮಾಜಿ ಡಿಐಜಿ ಡಿಜಿ ವಂಝಾರ ಅವರು ಸಿಬಿಐ ನ್ಯಾಯಾಲಯದ ಮುಂದೆ ಅಪೀಲೊಂದನ್ನು ಸಲ್ಲಿಸಿ ತಮ್ಮ ವಿರುದ್ಧದ ಆರೋಪ ಕೈಬಿಡುವಂತೆ  ಕೋರಿದ್ದಾರೆ. ಸಿಬಿಐ ಚಾರ್ಜ್ ಶೀಟ್ ರಾಜಕೀಯ ಪ್ರೇರಿತವಾಗಿದೆ ಎಂಬ ಕಾರಣವನ್ನೂ ಅವರು ನೀಡಿದ್ದಾರೆ. ಈ ಸಂಬಂಧ ಮಾರ್ಚ್ 28ರೊಳಗಾಗಿ ಸೂಕ್ತ ಪ್ರತಿಕ್ರಿಯೆ ನೀಡುವಂತೆ ಸಿಬಿಐ ನ್ಯಾಯಾಲಯ ಸೋಮವಾರ ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ.

"ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ (ಗುಜರಾತ್) ಸರಕಾರವನ್ನು ಕೆಳಗಿಳಿಸುವ ಉದ್ದೇಶವನ್ನು ಸಿಬಿಐ ಚಾರ್ಜ್ ಶೀಟ್ ಹೊಂದಿತ್ತು ಹಾಗೂ ಆಗಿನ ಕೇಂದ್ರ ಸರಕಾರ (ಯುಪಿಎ) ಇಡೀ ಸಂಚನ್ನು ರೂಪಿಸಿತ್ತು'' ಎಂದು ತಮ್ಮ ಅಪೀಲಿನಲ್ಲಿ ತಿಳಿಸಿರುವ ವಂಝಾರ, ಘಟನೆ ನಡೆದ ಸಂದರ್ಭ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯನ್ನು ಈ 'ನಕಲಿ' ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸಿದ್ದರು ಎಂದೂ ಹೇಳಿಕೊಂಡಿದ್ದಾರೆ.

"ಆಗಿನ ಗುಜರಾತ್ ಮುಖ್ಯಮಂತ್ರಿಯನ್ನು ಈ ಪ್ರಕರಣದ ಆರೋಪಿಯನ್ನಾಗಿಸಿ ಸತೀಶ್ ವರ್ಮ ಎಂಬ ಐಪಿಎಸ್ ಅಧಿಕಾರಿಯನ್ನೊಳಗೊಂಡಿದ್ದ ಆಗಿನ ತನಿಖಾ ತಂಡ  ಉದ್ದೇಶಿಸಿತ್ತು, ಇದಕ್ಕಾಗಿಯೇ ದೋಷಾರೋಪ ಪಟ್ಟಿಯನ್ನು ಸೃಷ್ಟಿಸಲಾಗಿತ್ತು'' ಎಂದು ವಂಝಾರ  ತಮ್ಮ ಅಪೀಲಿನಲ್ಲಿ ತಿಳಿಸಿದ್ದಾರೆ.

ಆದರೆ ಮೋದಿಯನ್ನು ತನಿಖೆಗೊಳಪಡಿಸಲಾಗಿತ್ತು ಎಂಬ ವಂಝಾರ ಹೇಳಿಕೆಯನ್ನು ತನಿಖೆಯ ಭಾಗವಾಗಿದ್ದ ಹಿರಿಯ ಅಧಿಕಾರಿಯೊಬ್ಬರು ನಿರಾಕರಿಸಿದ್ದಾರೆ. ಈ ಪ್ರಕರಣದ ಆರೋಪಿಯಾಗಿದ್ದ ಮಾಜಿ ಡಿಜಿಪಿ ಪಿಪಿ ಪಾಂಡೆ ಅವರ ಆರೋಪಗಳನ್ನು ಕೈಬಿಟ್ಟಂತೆ ತಮ್ಮ ಮೇಲಿನ ಆರೋಪವನ್ನೂ ಕೈಬಿಡಬೇಕೆಂದು ವಂಝಾರ ಹೇಳಿದ್ದಾರೆ. ತಮ್ಮ ವಿರುದ್ಧದ ಆರೋಪವೂ ಪಾಂಡೆ ವಿರುದ್ಧದ ಆರೋಪವೂ ಬಹುತೇಕ ಒಂದೇ ಆಗಿತ್ತು ಎಂದೂ ವಂಝಾರ ತಿಳಿಸಿದ್ದಾರೆ.

ಇಶ್ರತ್ ಜಹಾನ್ ರನ್ನು ಅಪಹರಿಸಿ ಕೊಲೆಗೈದ ಪ್ರಕರಣ ಸಂಬಂಧಿಸಿದಂತೆ ಸಿಬಿಐ ತನ್ನ ದೋಷಾರೋಪ ಪಟ್ಟಿಯಲ್ಲಿ ಪಿ ಪಿ ಪಾಂಡೆ, ವಂಝಾರ, ಡಿಐಜಿ ಜಿ ಎಲ್ ಸಿಂಘಾಲ್, ನಿವೃತ್ತ ಡಿಎಸ್ಪಿ ಎನ್ ಕೆ ಅಮೀನ್ ಹಾಗೂ ನಿವೃತ್ತ ಡಿವೈಎಸ್ಪಿ ತರುಣ್ ಬರೊಟ್ ಸೇರಿದಂತೆ ಏಳು ಮಂದಿ ಪೊಲೀಸ್ ಅಧಿಕಾರಿಗಳನ್ನು ಹೆಸರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News