ಪೌರಕಾರ್ಮಿಕರಿಗೆ ನಾಲ್ಕು ತಿಂಗಳಿಂದ ಸಂಬಳ ಕೊಡದ ಬಿಬಿಎಂಪಿ: ಆರೋಪ

Update: 2018-03-13 12:13 GMT

ಬೆಂಗಳೂರು, ಮಾ.13: ಅತ್ಯಂತ ಕಷ್ಟಕರವಾದ ವೃತ್ತಿಯಲ್ಲಿ ತೊಡಗಿರುವ ಪೌರ ಕಾರ್ಮಿಕರಿಗೆ ನಾಲ್ಕು ತಿಂಗಳಿನಿಂದ ಸಂಬಳ ಕೊಡದೆ ಬಿಬಿಎಂಪಿ ಕಷ್ಟಕ್ಕೆ ದೂಡಿದೆ. ಪ್ರತಿ ದಿನ ತಪ್ಪದೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಮನೆಯ ಕೆಲಸಗಳನ್ನು ಬಿಟ್ಟು ಬೀದಿಗಳನ್ನು ಸ್ವಚ್ಛ ಮಾಡಲು ಬರುತ್ತಿದ್ದೇವೆ. ಈ ಸಂಬಳವನ್ನೆ ಬದುಕಿ ಜೀವನ ಮಾಡುತ್ತಿರುವ ನಮಗೆ ಕಳೆದ ನಾಲ್ಕು ತಿಂಗಳಿನಿಂದ ಸಂಬಳ ಕೊಡುತ್ತಿಲ್ಲ. ಇದರಿಂದ ಮೂರು ಹೊತ್ತಿನ ಊಟಕ್ಕೂ ಕಷ್ಟಕರವಾಗಿದೆ ಎಂದು ಪೌರಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡರು.

ವಾರ್ಡ್ ನಂ.72ರ ಪೀಣ್ಯ, 159ನೆ ವಾರ್ಡ್‌ನ ಕೆಂಗೇರಿ, 131ನೆ ವಾರ್ಡಿನ ಶಿರ್ಕಿ, 198ನೆ ವಾರ್ಡ್‌ನ ತಲಘಟ್ಟಪುರ ಹಾಗೂ ಹೆಮ್ಮಿಗೆಪುರ ಸೇರಿದಂತೆ ಹಲವು ಕಡೆಗಳಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಸಂಬಳ ಸಿಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಹಾರಿಕೆಯ ಉತ್ತರಗಳನ್ನಷ್ಟೆ ನೀಡುತ್ತಾರೆ ಎಂದು ಪೌರಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಬಯೋಮೆಟ್ರಿಕ್ ಸಮಸ್ಯೆ: ಕಳೆದ ಎರಡು-ಮೂರು ತಿಂಗಳಿನಿಂದ ಬಯೋಮೆಟ್ರಿಕ್ ಆಧಾರದ ಮೇಲೆ ನೇರವಾಗಿಯೆ ಪೌರಕಾರ್ಮಿರ ಬ್ಯಾಂಕ್ ಖಾತೆಗಳಿಗೆ ಸಂಬಳವನ್ನು ಹಾಕಲು ತೀರ್ಮಾನಿಸಲಾಗಿದೆ. ಆದರೆ, ಅಧಿಕಾರಿಗಳು ತ್ವರಿತವಾಗಿ ಎಲ್ಲ ಪೌರಕಾರ್ಮಿಕರ ಸ್ವವಿವರಗಳನ್ನು ಪಡೆದು ಬ್ಯಾಂಕ್‌ಗೆ ಕೊಡುತ್ತಿಲ್ಲ. ಹೀಗಾಗಿ ಸಂಬಳ ಆಗುತ್ತಿಲ್ಲವೆಂದು ಎಐಸಿಟಿಯು ಕಾರ್ಯದರ್ಶಿ ನಿರ್ಮಾಲಾ ಆರೋಪಿಸಿದರು.

ಬಯೋಮೆಟ್ರಿಕ್ ಜಾರಿಗೆ ಬಂದಾಗಿನಿಂದ ಪೌರಕಾರ್ಮಿಕರ ಖಾತೆಗಳಿಗೆ ಸರಿಯಾದ ಸಂಬಳ ಹಾಕುತ್ತಿಲ್ಲ. 12ಸಾವಿರ ರೂ.ತಿಂಗಳ ಸಂಬಳವಾದರೆ, ಕೇವಲ 4ರಿಂದ 5 ಸಾವಿರ ಹಾಕಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಬಯೋಮೆಟ್ರಿಕ್‌ನಲ್ಲಿ ಸಮಸ್ಯೆಯಾಗಿದೆ. ಕೂಡಲೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಬೂಬು ಹೇಳುತ್ತಾರೆ. ಆದರೆ, ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಪೌರಕಾರ್ಮಿಕ ವೃತ್ತಿಯನ್ನೆ ನಂಬಿ ಬದುಕುತ್ತಿದ್ದೇವೆ. ಮಕ್ಕಳು ರೋಗದಿಂದ ಬಳಲುತ್ತಿದ್ದರೂ ಆಸ್ಪತ್ರೆಗೆ ತೋರಿಸಲು ಹಣವಿಲ್ಲ. ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ಮುಂದಿನವಾರ ಸಂಬಳ ಆಗುತ್ತದೆ ಎಂದು ಹೇಳುತ್ತಲೆ ನಾಲ್ಕು ತಿಂಗಳು ಕಳೆದಿದ್ದಾರೆ. ಎರಡು-ಮೂರು ದಿನದಲ್ಲಿ ನಮ್ಮ ಸಂಬಳ ಕೊಡದಿದ್ದರೆ, ಸಾಮೂಹಿಕ ಮುಷ್ಕರ ಹಮ್ಮಿಕೊಳ್ಳಲಾಗುವುದು.
-ಪೌರಕಾರ್ಮಿಕ ಮಹಿಳೆಯರು, ತಲಘಟ್ಟಪುರ

ಪೌರಕಾರ್ಮಿಕರಿಗೆ ಕಳೆದ ನಾಲ್ಕು ತಿಂಗಳಿನಿಂದ ಸಂಬಳ ಕೊಡದ ಅಧಿಕಾರಿಗಳು ಹೇಗೆ ಹೊಟ್ಟೆತುಂಬ ಊಟತಿಂದು ನಿರಾಳವಾಗಿ ಬದಕುತ್ತಾರೆಂಬುದು ಅಚ್ಚರಿಯಾಗುತ್ತದೆ. ನಗರ ಸ್ವಚ್ಛ ಮಾಡುವ ಪೌರಕಾರ್ಮಿಕರು ಹಸಿದು ಮಲಗುವುದು ಇಡೀ ಬೆಂಗಳೂರು ನಾಗರಿಕರು ತಲೆ ತಗ್ಗಿಸುವಂತಹ ವಿಷಯವಾಗಿದೆ. ಇನ್ನು ಎರಡು ದಿನದಲ್ಲಿ ಪೌರಕಾರ್ಮಿಕರ ಸಂಬಳ ಅವರ ಖಾತೆಗಳಿಗೆ ಜಮೆ ಆಗದಿದ್ದರೆ ಉಗ್ರ ಹೋರಾಟ ಮಾಡಲಾಗುವುದು.
-ನಿರ್ಮಲಾ, ಕಾರ್ಯದರ್ಶಿ, ಎಐಸಿಸಿಟಿಯು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News