ಆಧಾರ್ ಲಿಂಕಿಂಗ್ ಗಡುವು ವಿಸ್ತರಣೆ

Update: 2018-03-13 17:25 GMT

ಹೊಸದಿಲ್ಲಿ, ಮಾ.13: ಸುಪ್ರೀಂಕೋರ್ಟ್ ಮಂಗಳವಾರ ನೀಡಿದ ಮಹತ್ವದ ಆದೇಶವೊಂದರಲ್ಲಿ, ಬ್ಯಾಂಕ್ ಖಾತೆಗಳು, ಮೊಬೈಲ್ ಫೋನ್ ಹಾಗೂ ಪಾಸ್‌ಪೋರ್ಟ್ ಸೇರಿದಂತೆ ವಿವಿಧ ಸೇವೆಗಳಿಗೆ ತಮ್ಮ ಆಧಾರ್ ಸಂಖ್ಯೆಯನ್ನು ಜೋಡಿಸಲು ದೇಶದ ನಾಗರಿಕರಿಗೆ ವಿಧಿಸಲಾಗಿದ್ದ ಮಾರ್ಚ್ 31ರ ಅಂತಿಮ ಗಡುವನ್ನು ಅನಿರ್ದಿಷ್ಟಾವಧಿಯವರೆಗೆ ವಿಸ್ತರಿಸಿದೆ.

  ಆಧಾರ್ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ವಿವಿಧ ಅರ್ಜಿಗಳನ್ನು ಮಾರ್ಚ್ 31ರಂದು ಇತ್ಯರ್ಥಗೊಳಿಸಲು ಸಾಧ್ಯವಿಲ್ಲದಿರುವುದರಿಂದ ವಿವಿಧ ಸೇವೆಗಳಿಗೆ ಆಧಾರ್ ಜೋಡಣೆಯ ಗಡುವನ್ನು, ಅಂತಿಮ ತೀರ್ಪು ನೀಡುವವರೆಗೆ ವಿಸ್ತರಿಸಿರುವುದಾಗಿ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠವು ತಿಳಿಸಿದೆ. ಹೀಗಾಗಿ ಕೇಂದ್ರ ಸರಕಾರವು ಆಧಾರ್ ಜೋಡಣೆಯನ್ನು ನಾಗರಿಕರ ಮೇಲೆ ಸದ್ಯದ ಮಟ್ಟಿಗೆ ಕಡ್ಡಾಯಗೊಳಿಸಕೂಡದೆಂದು ಅದು ತಿಳಿಸಿದೆ.

 ಒಂದು ವೇಳೆ ಆಧಾರ್ ಜೋಡಣೆಯ ಅಂತಿಮ ಗಡುವನ್ನು ಕೊನೆಯ ಕ್ಷಣದಲ್ಲಿ ವಿಸ್ತರಿಸಿದಲ್ಲಿ ಬ್ಯಾಂಕ್‌ಗಳು ಹಾಗೂ ಶೇರುಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮವುಂಟಾಗಲಿದೆ. ಈ ಹಿನ್ನೆಲೆಯಲ್ಲಿ ಅಂತಿಮ ಗಡುವನ್ನು ಮುಂಚಿತವಾಗಿಯೇ ವಿಸ್ತರಿಸಲಾಗಿದೆಯೆಂದು ಎ.ಕೆ.ಸಿಕ್ರಿ, ಎ.ಎಂ. ಖಾನ್ವಿಲ್ಕರ್, ಡಿ.ವೈ.ಚಂದ್ರಚೋಡೂ ಹಾಗೂ ಅಶೋಕ್ ಭೂಷಣ್‌ರನ್ನೂ ಒಳಗೊಂಡ ಪಂಚಸದಸ್ಯ ನ್ಯಾಯುಪೀಠ ತಿಳಿಸಿದೆ.

   ಕಳೆದ ವರ್ಷದ ಡಿಸೆಂಬರ್ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶವೊಂದರಲ್ಲಿ ಸರಕಾರದ ವಿವಿಧ ಸೇವೆಗಳು ಹಾಗೂ ಜನಕಲ್ಯಾಣ ಯೋಜನೆಗಳ ಜೊತೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಿಸುವುದಕ್ಕೆ ವಿಧಿಸಲಾಗಿದ್ದ ಅಂತಿಮ ಗಡುವನ್ನು ಈ ವರ್ಷದ ಮಾರ್ಚ್ 31ರವರೆಗೆ ವಿಸ್ತರಿಸಿತ್ತು.

 ಕರ್ನಾಟಕ ಹೈಕೋರ್ಟ್ ಮಾಜಿ ನ್ಯಾಯಾಧೀಶ ಕೆ.ಎಸ್. ಪುಟ್ಟಸ್ವಾಮಿ ಫೆಬ್ರವರಿ 22ರಂದು ಸುಪ್ರೀಂಕೋರ್ಟ್ ಮುಂದೆ ನೀಡಿದ ಹೇಳಿಕೆಯೊಂದರಲ್ಲಿ ಪಡಿತರ ಆಹಾರ ವಿತರಣೆ ವ್ಯವಸ್ಥೆಯ ಜೊತೆ ಆಧಾರ್ ಕಡ್ಡಾಯಗೊಳಿಸಿರುವುದರಿಂದ, ಆಧಾರ್ ಸಂಖ್ಯೆ ವಂಚಿತ ಬಡವರು ಹಸಿವಿನಿಂದ ಸಾವನ್ನಪ್ಪಿದ ಹಲವು ಘಟನೆಗಳು ವರದಿಯಾಗಿರುವುದಾಗಿ ನ್ಯಾಯಾಲಯದ ಗಮನಸೆಳೆದಿದ್ದರು.

ಆಧಾರ್‌ನ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂಕೋಟ್‌ನಲ್ಲಿ ಸಲ್ಲಿಸಲಾದ ಪಿಐಎಲ್ ಅರ್ಜಿಗಳ ಕುರಿತಂತೆ ತೀರ್ಪು ಬಂದ ಬಳಿಕ ಮತದಾರರ ಗುರುತುಚೀಟಿಯನ್ನು ಆಧಾರ್ ಜೊತೆ ಜೋಡಿಸುವ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಆರಂಭಿಸಲಿದೆಯೆಂದು ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್ ರಾವತ್ ಮಾರ್ಚ್ 11ರಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News