ಮುಸ್ಲಿಂ ಯುವಕನ ಹತ್ಯೆ ಪ್ರಕರಣ: ಐವರು ಬಜರಂಗದಳ ಕಾರ್ಯಕರ್ತರ ಬಂಧನ

Update: 2018-03-13 14:01 GMT

ಗಾಂಧಿನಗರ, ಮಾ.13: ಒಂದು ವಾರದ ಹಿಂದೆ ಗುಜರಾತ್‌ನ ಗಾಂಧಿನಗರದಲ್ಲಿರುವ ಚತ್ರಾಲ್‌ನಲ್ಲಿ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದ 32ರ ಹರೆಯದ ಫರ್ನಾಝ್ ಸೈಯದ್ ಸೋಮವಾರದಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಫರ್ನಾಝ್ ತಾಯಿ ರೋಶನ್‌ಬೀವಿ ಸೈಯದ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಬಜರಂಗದಳದ ಐದು ಸದಸ್ಯರನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಗಾಂಧಿನಗರದ ಪೊಲೀಸ್ ವರಿಷ್ಠಾಧಿಕಾರಿ ವೀರೇಂದ್ರ ಯಾದವ್ ತಿಳಿಸಿದ್ದಾರೆ.

ಕುಟುಂಬ ಸದಸ್ಯರ ಪ್ರಕಾರ, ಮನೆಯೊಳಗಡೆ ಇರುವಂತೆ ಸೂಚಿಸಿದ್ದ ತಮ್ಮ ಆದೇಶವನ್ನು ಪಾಲಿಸಲಿಲ್ಲ ಎಂಬ ಕಾರಣಕ್ಕೆ ಬಜರಂಗದಳದ ಕಾರ್ಯಕರ್ತರು ಫರ್ನಾಝ್ ಮತ್ತು ಅವರ ತಾಯಿಯ ಮೇಲೆ ಹಲ್ಲೆ ನಡೆಸಿದ್ದರು. ಡಿಸೆಂಬರ್ ಆರರಂದು ಬಾಬರಿ ಮಸೀದಿ ಧ್ವಂಸಗೈದ ಘಟನೆಯ ಸ್ಮರಣಾರ್ಥವಾಗಿ ಬಜರಂಗದಳ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮೆರವಣಿಗೆ ನಡೆಸಿತ್ತು. ತಮ್ಮ ಜಾನುವಾರುಗಳನ್ನು ಮೇಯಿಸಲು ತೆರಳಿದ್ದ ಫರ್ನಾಝ್ ಮತ್ತು ಅವರ ತಾಯಿಯ ಮೇಲೆ ಕೇಸರಿ ಪಡೆ ದಾಳಿ ನಡೆಸಿತ್ತು. ಘಟನೆಯನ್ನು ವಿರೋಧಿಸಿ ದಿನವಿಡೀ ಧರಣಿ ನಡೆಸಿದ ಫರ್ನಾಝ್ ಕುಂಟುಬಸ್ಥರು ಹಾಗೂ ಮುಸ್ಲಿಂ ಸಮುದಾಯದ ಸದಸ್ಯರು ನಂತರ ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ವಡ್ಗಾಮ್ ಶಾಸಕ ಜಿಗ್ನೇಶ್ ಮೆವಾನಿ ಇಂಥ ಘಟನೆಗಳ ಬಗ್ಗೆ ಹಲವು ಬಾರಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಕಲೆಕ್ಟರ್‌ಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಏಳು ಮಂದಿ ಆರೋಪಿಗಳನ್ನು ಅಮಿತ್ ಪಟೇಲ್, ಅಂಕಿತ್ ನಡಿಯಾ, ಬಡೂ ಮುಖಿ, ಧರಂ ಪಟೇಲ್, ಪ್ರೀತಂ ಪಟೇಲ್, ಪ್ರಿಕಂ ಪಟೇಲ್ ಹಾಗೂ ಅವ್ದೇಶ್ ಪಟೇಲ್ ಎಂದು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News