ಮೋದಿಕೇರ್‌ಗೆ ಬಿಡುಗಡೆಯಾದದ್ದು ಅರ್ಧದಷ್ಟೇ ಮೊತ್ತ: ಸಂಸತ್ ವರದಿ

Update: 2018-03-13 14:18 GMT

ಹೊಸದಿಲ್ಲಿ, ಮಾ.13: ಭಾರತದ ಬಡವರಿಗೆ ಆರೋಗ್ಯ ವಿಮೆಯನ್ನು ಒದಗಿಸುವ ಜಗತ್ತಿನ ಅತೀದೊಡ್ಡ ಸರಕಾರಿ ಆರೋಗ್ಯ ಸೇವಾ ಕಾರ್ಯಕ್ರಮ ಎಂದು ಬಣ್ಣಿಸಲಾಗಿರುವ ‘ಮೋದಿಕೇರ್‌’ಗೆ 2017-18ರ ವಿತ್ತೀಯ ವರ್ಷದಲ್ಲಿ ನಿಗದಿತ ಮೊತ್ತದ ಕೇವಲ ಅರ್ಧದಷ್ಟನ್ನು ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ಸಂಸತ್ ಪೀಠದ ವರದಿ ತಿಳಿಸಿದೆ.

975 ಕೋಟಿ ರೂ. ಕಾದಿರಿಸಬೇಕಾಗಿದ್ದ ರಾಷ್ಟ್ರೀಯ ಸ್ವಾಸ್ಥ ಬೀಮಾ ಯೋಜನೆ (ಆರ್‌ಎಸ್ಬಿವೈ)ಗೆ ಅನುದಾನವನ್ನು 565 ಕೋಟಿ ರೂ. ಗೆ ಇಳಿಸಲಾಗಿತ್ತು. ಆದರೆ ಇದೀಗ ಬಿಡುಗಡೆ ಮಾಡಲಾಗಿರುವುದು ಕೇವಲ 450 ಕೋಟಿ ರೂ. ಅಂದರೆ ಕಾದಿರಿಸಬೇಕಿದ್ದ ಮೊತ್ತಕ್ಕಿಂತ ಅರ್ಧದಷ್ಟು ಎಂದು ವರದಿ ತಿಳಿಸಿದೆ.

ಪ್ರತಿ ಕುಟುಂಬಕ್ಕೆ ಒಂದು ಲಕ್ಷ ರೂ. ವಿಮೆ ದೊರಕುವ ಮತ್ತೊಂದು ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಮೋದಿಕೇರ್‌ಗೆ ಕಡಿಮೆ ಹಣ ಬಿಡುಗಡೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಈ ಯೋಜನೆಯು ಸದ್ಯ ಸಂಪುಟದ ಅನುಮೋದನೆಗೆ ಬಾಕಿಯುಳಿದಿದೆ. ಆರ್‌ಎಸ್ಬಿವೈ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಮೂವತ್ತು ಸಾವಿರ ರೂ. ವಿಮೆ ಒದಗಿಸಲಾಗುತ್ತದೆ. ಈ ಮೊತ್ತವನ್ನು ಒಂದು ಲಕ್ಷ ರೂ.ಗೆ ಏರಿಸುವ ಪ್ರಸ್ತಾಪಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.

ಪ್ರಸ್ತಾವಿತ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಯು (ಎನ್‌ಎಚ್‌ಪಿಎಸ್) ಆರ್‌ಎಸ್ಬಿವೈ ಯೋಜನೆಯೊಂದಿಗೆ ವಿಲೀನವಾಗಲಿದ್ದು, ಹತ್ತು ಕೋಟಿ ಬಡ ಮತ್ತು ದುರ್ಬಲ ಕುಟುಂಬಗಳಿಗೆ ವಾರ್ಷಿಕ ತಲಾ ಐದು ಲಕ್ಷ ರೂ. ವಿಮೆಯನ್ನು ಒದಗಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಈ ಯೋಜನೆಯು ವಿಫಲವಾಗುವ ಸಾಧ್ಯತೆಗಳಿವೆ ಎಂದು ಸಂಸದೀಯ ಸ್ಥಾಯಿ ಸಮಿತಿ ಎಚ್ಚರಿಸಿದೆ. ಆರ್‌ಎಸ್ಬಿವೈ ಯೋಜನೆಯಡಿ ಕೇವಲ ಶೇ. 57 ಅರ್ಹ ಕುಟುಂಬಗಳು ನೋಂದಾಯಿಸಿಕೊಂಡಿವೆ ಮತ್ತು ಕೇವಲ ಶೇ.12 ಅರ್ಹ ವ್ಯಕ್ತಿಗಳಿಗೆ ಮಾತ್ರ ಈ ಯೋಜನೆಯಡಿ ಆಸ್ಪತ್ರೆಯ ಬಿಲ್ ಮೊತ್ತವನ್ನು ಪಾವತಿಸಲು ಸಾಧ್ಯವಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News