ಧರ್ಮಗಳ ನಡುವೆ ದ್ವೇಷ ಬಿತ್ತುವ ಹೇಳಿಕೆ ಆರೋಪ: ರವಿಶಂಕರ್ ಗುರೂಜಿ ವಿರುದ್ಧ ಇಂದಿರಾನಗರ ಠಾಣೆಗೆ ದೂರು

Update: 2018-03-13 14:34 GMT

ಬೆಂಗಳೂರು, ಮಾ.13: ಅಯೋಧ್ಯೆ ವಿವಾದಕ್ಕೆ ಸಂಬಂಧಪಟ್ಟಂತೆ ಎರಡು ಧರ್ಮಗಳ ನಡುವೆ ದ್ವೇಷ ಬಿತ್ತುವ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ವಿರುದ್ಧ ಇಲ್ಲಿನ ಇಂದಿರಾನಗರ ಪೊಲೀಸ್ ಠಾಣೆಗೆ ಸಾಮಾಜಿಕ ಕಾರ್ಯಕರ್ತ ಆಲಾಂ ಪಾಶಾ ದೂರು ನೀಡಿದ್ದಾರೆ.

ಮಂಗಳವಾರ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ವಿಚಾರಕ್ಕೆ ಸಂಬಂಧಪಟ್ಟಂತೆ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ರವಿಶಂಕರ್, ಮಂದಿರ ನಿರ್ಮಾಣದ ನ್ಯಾಯ ನಮ್ಮ ಪರವಾಗಿಲ್ಲವೆಂದರೆ, ಭಾರತದಲ್ಲಿ ಸಿರಿಯಾ ಮಾದರಿ ಪರಿಸ್ಥಿತಿ ನಿರ್ಮಾಣವಾಗಬಹುದೆಂದು ವಿವಾದಿತ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತರುವ ಈ ಹೇಳಿಕೆಯ ಹಿಂದೆ ಯಾವುದೋ ಒಂದು ದೊಡ್ಡ ಶಕ್ತಿ ಷಡ್ಯಂತ್ರ ಇದೆ. ಹೀಗಾಗಿ, ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿದೆ ಎಂದರು.

ರವಿಶಂಕರ್ ಹೇಳಿಕೆಯಿಂದ ಎರಡು ಧರ್ಮಗಳ ನಡುವೆ ದ್ವೇಷ ಉಂಟಾಗಿರುವುದು ಮಾತ್ರವಲ್ಲದೆ, ಸುಪ್ರೀಂಕೋರ್ಟ್ ಮೇಲೆ ಒತ್ತಡ ಹೇರಿದ್ದಾರೆ ಎಂದ ಅವರು, ಅಯೋಧ್ಯೆ ವಿಚಾರ ಈಗಾಗಲೆ ಸುಪ್ರೀಂಕೋರ್ಟ್‌ನಲ್ಲಿದ್ದು, ವಿಚಾರಣೆ ಹಂತ ತಲುಪಿದೆ. ಆದರೆ, ಇಂತಹ ಹೇಳಿಕೆಯಿಂದ ಸುಪ್ರೀಂಕೋರ್ಟ್ ಮೇಲೆ ಪರೋಕ್ಷವಾಗಿ ಒತ್ತಡ ಹೇರುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.

ಸಿರಿಯಾದಲ್ಲಿ ನಡೆಯುತ್ತಿರುವ ಅರಾಜಕತೆ ಹಾಗೂ ನಾಗರಿಕ ಸಂಘರ್ಷದಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಮ್ಮ ಶಾಂತಿಯ ದೇಶವನ್ನು ಅಲ್ಲಿಗೆ ಹೋಲಿಸುವುದು ದುರ್ಭಾಗ್ಯ. ಅವರ ವಿರುದ್ಧ ಐಪಿಸಿ ಅಡಿಯಲ್ಲಿ ಕ್ರಮ ಕೈಗೊಳ್ಳಲು ಗೃಹ ಇಲಾಖೆ ಮುಂದಾಗಬೇಕು ಎಂದು ಆಲಾಂ ಪಾಶಾ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News