5 ಲಕ್ಷ ರೂ.ಠೇವಣಿ ಇಡಲು ಏರ್ ಇಂಡಿಯಾಗೆ ಹೈಕೋರ್ಟ್ ನಿರ್ದೇಶನ

Update: 2018-03-13 15:39 GMT

ಬೆಂಗಳೂರು, ಮಾ.13: ಅಂಗವಿಕಲ ಪ್ರಯಾಣಿಕರೊಬ್ಬರಿಗೆ ವಿಮಾನ ನಿಲ್ದಾಣದಲ್ಲಿ ಗಾಲಿ ಕುರ್ಚಿ ಸೇವೆಯಲ್ಲಿ ವ್ಯತ್ಯಯ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ 5 ಲಕ್ಷ ರೂ.ಠೇವಣಿ ಇರಿಸಲು ಏರ್ ಇಂಡಿಯಾಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
  
ಈ ಸಂಬಂಧ ಡಾ.ಎಸ್.ಜೆ.ರಾಜಲಕ್ಷ್ಮೀ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಅಂಗವಿಕಲೆಯಾಗಿರುವ ಡಾ.ಎಸ್.ಜೆ.ರಾಜಲಕ್ಷ್ಮಿ ಅವರು 2016ರ ಆಗಸ್ಟ್‌ನಲ್ಲಿ ಸ್ಕಾಟ್ಲೆಂಡ್‌ಗೆ ಪ್ರವಾಸಕ್ಕೆಂದು ಲಂಡನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು. ಆದರೆ, ಅಲ್ಲಿ ರಾಜಲಕ್ಷ್ಮಿ ಅವರಿಗೆ ಗಾಲಿ ಕುರ್ಚಿ ನೀಡದೆ ಏರ್‌ಇಂಡಿಯಾ ವಿಮಾನ ಸಿಬ್ಬಂದಿ ತೀವ್ರ ತೊಂದರೆ ಉಂಟು ಮಾಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಲಂಡನ್ ವಿಮಾನ ನಿಲ್ದಾಣದಲ್ಲಿ ಗಾಲಿ ಕುರ್ಚಿ ಸಿಗದೆ ರಾಜಲಕ್ಷ್ಮಿ ಅವರು ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಿದ್ದಾರೆ. ಹೀಗಾಗಿ, ರಾಜಲಕ್ಷ್ಮಿ ಅವರು ಸ್ಕಾಟ್ಲೆಂಡ್ ಪ್ರವಾಸವನ್ನು ರದ್ದುಗೊಳಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಇದರಿಂದಾಗಿ, ಏರ್ ಇಂಡಿಯಾದವರು ಸೂಕ್ತ ಪರಿಹಾರ ನೀಡಲು ನಿರ್ದೇಶಿಸಬೇಕೆಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠವು ರಾಜಲಕ್ಷ್ಮಿ ಅವರಿಗೆ ಗಾಲಿ ಕುರ್ಚಿ ಸೇವೆಯಲ್ಲಿ ವ್ಯತ್ಯಯ ಮಾಡಿದ ಹಿನ್ನೆಲೆಯಲ್ಲಿ ಕೋರ್ಟ್‌ಗೆ 5 ಲಕ್ಷ ರೂ.ಠೇವಣಿ ಇಡಲು ನಿರ್ದೇಶಿಸಿ, ವಿಚಾರಣೆಯನ್ನು ಎ.3ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News