ಮಹಿಳೆಯರಿಗೆ ಬ್ಯಾಂಕಿಂಗ್ ಸಾಲ ಸೌಲಭ್ಯ ಕುರಿತು ಜಾಗೃತಿ ಅಗತ್ಯ: ಅರ್ಚನಾ ರಸ್ಟೊಗಿ

Update: 2018-03-13 15:42 GMT

ಬೆಂಗಳೂರು, ಮಾ.13: ಮಹಿಳೆಯರು ಸ್ವ ಉದ್ಯೋಗ ಪ್ರಾರಂಭಿಸಲು ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ಸಾಲ ಸೌಲಭ್ಯಗಳ ಕುರಿತು ಗ್ರಾಮೀಣ ಮಹಿಳೆಯರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು ಶಾಖೆಯ ಉಪ ಪ್ರಧಾನ ವ್ಯವಸ್ಥಾಪಕಿ ಅರ್ಚನಾ ರಸ್ಟೊಗಿ ತಿಳಿಸಿದರು.

ಮಂಗಳವಾರ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ನಗರದ ಎಂ.ವಿ.ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರಕಾರ ಮುದ್ರಾ ಯೋಜನೆಯ ಮೂಲಕ ಸ್ವ ಉದ್ಯೋಗ ಮಾಡುವವರಿಗೆ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯಗಳು ಒದಗಿಸುತ್ತದೆ. ಅದೇ ರೀತಿಯಲ್ಲಿ ರಾಜ್ಯ ಸರಕಾರವು ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡುತ್ತಿದೆ. ಆದರೆ, ಇಂತಹ ಸೌಲಭ್ಯಗಳನ್ನು ಪಡೆಯಲು ಗ್ರಾಮೀಣ ಮಹಿಳೆಯರಿಗೆ ಮಾಹಿತಿಯ ಕೊರತೆಯಿದೆ ಎಂದು ಅವರು ವಿಷಾದಿಸಿದರು.

ಬ್ಯಾಂಕಿಂಗ್ ಕ್ಷೇತ್ರದ ಉನ್ನತ ಹುದ್ದೆಗಳಲ್ಲಿ ಶೇ.80ರಷ್ಟು ಮಹಿಳೆಯರಿದ್ದಾರೆ. ಇದೇ ರೀತಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಸಮ ಪ್ರಮಾಣದ ಪಾಲನ್ನು ಹೊಂದಿರಬೇಕು. ಆಗ ಮಾತ್ರ ಸಮಾಜ ಸರ್ವತೋಮುಖ ಅಭಿವೃದ್ಧಿಗೊಳ್ಳಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರಜ್ಞಾವಂತ ಮಹಿಳೆಯರು ತನ್ನ ಸುತ್ತಮುತ್ತಲಿನ ಮಹಿಳೆಯರಿಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಅವರು ಆಶಿಸಿದರು.

ಸ್ವಾತಂತ್ರ ಪೂರ್ವದಿಂದಲೂ ಭಾರತದ ನಿರ್ಮಾಣದಲ್ಲಿ ಲಕ್ಷಾಂತರ ಮಹಿಳೆಯರು ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಸ್ವಾತಂತ್ರ ನಂತರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯಿಂದ ಮೊದಲುಗೊಂಡು ಈಗಿನ ಉಮಾಶ್ರೀವರೆಗೆ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಅವಿಸ್ಮರಣೀಯ. ಇಂತವರ ಬದುಕು ಮಹಿಳೆಯರಿಗೆ ಮಾದರಿಯಾಗಿ ಸ್ವಾಭಿಮಾನದ ಬದುಕನ್ನು ರೂಢಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಕೆ.ರವಿ, ಎಫ್‌ಕೆಸಿಸಿಐನ ಮಹಿಳಾ ನಾಯಕಿ ಜೆಸ್ಸಿ ಲಾರೆನ್ಸ್ ಮತ್ತಿತರರು ಭಾಗವಹಿಸಿದ್ದರು. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರಿಗೆ ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿಯನು್ನ ಪ್ರದಾನ ಮಾಡಿ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News